ಕಾನೂನು ಕೈಗೆತ್ತಿಕೊಂಡ ಅರ್ಚನಾ: ‘ಯುದ್ಧಕಾಂಡ’ ಚಿತ್ರದಲ್ಲಿ ಮತ್ತೆ ಅಮ್ಮನ ಪಾತ್ರದಲ್ಲಿ ‘ಕೆಜಿಎಫ್​’ ನಟಿ

archana 1
Published on

ಬೆಂಗಳೂರು: ‘ಕೆಜಿಎಫ್​ ಚಿತ್ರದ ಅಮ್ಮ ಇಮೇಜ್‌ನಿಂದ ನಾನು ಹೊರಬರಬೇಕಿದೆ. ಈಗಾಗಲೇ ಅಂತಹ ಪಾತ್ರಗಳಿಂದ ನನ್ನ ಪ್ರತಿಭೆ ತೋರಿಸಿದ್ದೇನೆ. ನನಗೆ ಕಾಮಿಡಿ-ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬಾಸೆ. ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಅಂತಹದ್ದೇ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಇಲ್ಲವಾದರೆ, ಭರತನಾಟ್ಯ ಕ್ಲಾಸ್ ಹೇಳಿಕೊಂಡಿರುತ್ತೇನಷ್ಟೇ. - ಇದು ನಟಿ ಅರ್ಚನಾ ಜೋಯಿಸ್ ಬಿಚ್ಚುನುಡಿ.

‘ಕೆಜಿಎಫ್​’ ಸರಣಿಯಲ್ಲಿ ಶಾಂತಮ್ಮ ಪಾತ್ರದಲ್ಲಿ ಗಮನ ಸೆಳೆದಿದ್ದ ಅರ್ಚನಾ ಬಳಿಕ ‘ಹೊಂದಿಸಿ ಬರೆಯಿರಿ’, ‘ವೇದಂ’ ಹಾಗೂ ‘ಕ್ಷೇತ್ರಪತಿ’ ಚಿತ್ರಗಳಲ್ಲಿ ಗಮನಾರ್ಹ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಪವನ್ ಭಟ್ ನಿರ್ದೇಶನದ, ಅಜೇಯ್ ರಾವ್ ನಟನೆಯ ‘ಯುದ್ಧಕಾಂಡ- ಚಾಪ್ಟರ್ 2’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿದ್ದಾರೆ. ಇಲ್ಲಿ ಕೂಡ ಅಮ್ಮನ ಪಾತ್ರ ನಿರ್ವಹಿಸಿದ್ದಾರಾದರೂ, ಇದೊಂದು ಸಮಾಜದ ಮೇಲೆ ಪರಿಣಾಮ ಬೀರುವ ಪಾತ್ರ ಎನ್ನುತ್ತಾರವರು. ‘ಕೆಜಿಎಫ್​-2’ ಬಳಿಕ ನಿರ್ದೇಶಕರು ‘ಯುದ್ಧಕಾಂಡ’ ಕಥೆ ಹೇಳಿ, ಹೀರೋಯಿನ್ ಪಾತ್ರ ನಿರ್ವಹಿಸುತ್ತೀರಾ ಎಂದು ಕೇಳಿದ್ದರು. ಕಥೆ ಕೇಳಿದಾಗ ಎರಡು ಪಾತ್ರಗಳಿರುವುದು ಗೊತ್ತಾಯಿತು. ಅದರಲ್ಲಿ ಒಂದು ಪಾತ್ರದ ಮೇಲೆ ಸೆಳೆತ ಹೆಚ್ಚಾಯಿತು. ಅದು ಪೋಷಕ ಪಾತ್ರದಂತಿದ್ದರೂ, ಪ್ರಾಮುಖ್ಯ ವಹಿಸುತ್ತದೆ. ಹಾಗಾಗಿ, ಮಧ್ಯಮ ವರ್ಗದ ಮಹಿಳೆಯನ್ನು ಪ್ರತಿನಿಧಿಸುವ ನಿವೇದಿತಾ ಪಾತ್ರ ಒಪ್ಪಿಕೊಂಡೆ. ಆಕೆಯ ಬದುಕಿನಲಿ ಬಿರುಗಾಳಿ ಬೀಸುತ್ತದೆ. ಮಗಳ ಮೇಲೆಯೇ ದುರುಳರು ಅತ್ಯಾಚಾರ ಎಸಗುತ್ತಾರೆ. ಆಗ ಆಕೆ, ಯಾವ ರೀತಿಯಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುತ್ತಾಳೆ ಎಂಬುದು ನನ್ನ ಪಾತ್ರ. ಇಲ್ಲಿ ಹಲವಾರು ವಿಚಾರಗಳಿವೆ. ಕೆಲ ವಿಷಯಗಳು ಪ್ರೇಕ್ಷಕರ ವಿವೇಚನೆಗೆ ಬಿಟ್ಟಿದ್ದಾರೆ. ಹಾಗಾಗಿ, ಇಲ್ಲಿ ಪ್ರೇಕ್ಷಕ ಕೂಡ ಕಥೆಯ ಭಾಗವಾಗುತ್ತಾನೆ’ ಎಂದು ಪಾತ್ರವನ್ನು ಪರಿಚಯಿಸಿಕೊಳ್ಳುತ್ತಾರೆ.

ಭರತನಾಟ್ಯ, ಡಾನ್ಸ್, ಕಳಾರಿಪಯಟ್ಟು: ಅರ್ಚನಾ ಜೋಯಿಸ್ ನಟನೆಯ ಜತೆಗೆ ಭರತನಾಟ್ಯ ಹಾಗೂ ನೃತ್ಯಗಾರ್ತಿ. ಅಲ್ಲದೇ, ಕೇರಳದ ತಿರುವಂತನಪುರಂನಲ್ಲಿ ಕಳಾರಿಪಾಯಟ್ಟು ಕಲಿತು ಬಂದಿದ್ದಾರೆ. ಈ ಬಗ್ಗೆ, ‘ಸಿನಿಮಾ ಜತೆ ಮಕ್ಕಳಿಗೆ ಭರತನಾಟ್ಯ ಹೇಳಿಕೊಡುತ್ತೇನೆ. ಹಾಗೇ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತೇನೆ. ವರ್ಷದಲ್ಲಿ ಮೂರು ಬಾರಿ ತಿರುವಂತನಪುರಂಗೆ ತೆರಳಿ ಅಲ್ಲಿ ಕಳಾರಿಪಾಯಟ್ಟು ಕಲಿಯುತ್ತೇನೆ. ಇದರಿಂದ ನಾನು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇರಲು ಸಾಧ್ಯವಾಗಿದೆ’ ಎನ್ನುವ ಅವರು, ‘ನನಗೆ ಒಂದೇ ರೀತಿಯ ಪಾತ್ರಗಳು ಬರುತ್ತಿರುವುದರಿಂದ ಸದ್ಯ ಯಾವ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ. ಒಳ್ಳೆಯ, ವಿಭಿನ್ನ ಸಿನಿಮಾಗಳನ್ನು ಮಾಡಬೇಕು ಎಂಬ ಆಸೆಯಿದೆ. ನಿರ್ದೇಶಕರು ಅಂತಹ ಪಾತ್ರಗಳನ್ನು ಬರೆಯಬೇಕು’ ಎಂದು ಅಭಿಪ್ರಾಯಪಡುತ್ತಾರೆ.

ಅಜೇಯ್ ಮಗಳ ಕಾರು ಪ್ರೀತಿ: ಯುದ್ಧಕಾಂಡ’ ಚಿತ್ರಕ್ಕೆ ನಟ ಅಜೇಯ್ ರಾವ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗಾಗಿ ಸಾಕಷ್ಟು ಸಾಲ ಮಾಡಿಕೊಂಡಿರುವ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಬಿಎಂಡಬ್ಲ್ಯೂ ಕಾರು ಮಾರಾಟ ಮಾಡಿದ್ದಾರೆ. ಖರೀದಿಸಿದವರು ಅಜೇಯ್ ಮನೆಗೆ ಬಂದು ಕಾರು ತೆಗೆದುಕೊಂಡು ಹೋಗುವ ಸಮಯದಲ್ಲಿ ಅಜೇಯ್ ರಾವ್ ಪುತ್ರಿ ಚರಿಷ್ಮಾ, ಕಾರು ಕೊಡುವುದು ಬೇಡ ಎಂದು ಕಣ್ಣೀರು ಹಾಕಿರುವ, ಅಜೇಯ್ ರಾವ್ ಪುತ್ರಿಯನ್ನು ಸಂತೈಸುತ್ತಿರುವ ಭಾವುಕ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net