Srinidhi Shetty Interview; ಕನ್ನಡದಲ್ಲಿ ಡಬ್​ ಮಾಡಲು ಅಮೆರಿಕದಿಂದ ಓಡಿಬಂದ ಶ್ರೀನಿಧಿ ಶೆಟ್ಟಿ

zsc
Published on

| ಹರ್ಷವರ್ಧನ್​ ಬ್ಯಾಡನೂರು

"ಕೆಜಿಎಫ್ ಚಾಪ್ಟರ್​ 1'ರ ಮೂಲಕ ಬಣ್ಣದ ಲೋಕಕ್ಕೆ ಡೆಬ್ಯೂ ಮಾಡಿದರೂ, ನಟಿ ಶ್ರೀನಿಧಿ ಶೆಟ್ಟಿ ಇದುವರೆಗೆ ನಟಿಸಿರುವ ಸಿನಿಮಾಗಳ ಸಂಖ್ಯೆ ಕೇವಲ ಮೂರು. ಇದೀಗ ನಾಲ್ಕನೇ ಚಿತ್ರ "ಹಿಟ್​ 3' ಇಂದು ತೆರೆಗೆ ಬಂದಿದ್ದು, ಅದರ ಪ್ರಚಾರಕ್ಕಾಗಿ ಶ್ರೀನಿಧಿ ಶೆಟ್ಟಿ, ನಾಯಕ ನಟ ನಾನು ಜತೆ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕ ಅವರು, "ನನಗೆ ಕಥೆ ಬಹಳ ಮುಖ್ಯ. ಜತೆಗೆ ಪಾತ್ರವೂ ಚೆನ್ನಾಗಿರಬೇಕು. "ಕೆಜಿಎಫ್​​' ಸರಣಿಯಲ್ಲಿ ಕಥೆಗಿಂತ ಹೆಚ್ಚಾಗಿ ಪ್ರಶಾಂತ್​ ನೀಲ್​ ಅವರ ನಿರ್ದೇಶನದಲ್ಲಿ, ಯಶ್​ ಅವರಂತಹ ನಟನ ಜತೆ ಆ್ಯಕ್ಟ್​ ಮಾಡಬೇಕಿತ್ತು. "ಉಗ್ರಂ' ಚಿತ್ರದ ದೊಡ್ಡ ಅಭಿಮಾನಿ ನಾನು. ಪ್ರಶಾಂತ್​ ಅವರೇನೆ ಮಾಡಿದರೂ ಚೆನ್ನಾಗಿ ಮಾಡುತ್ತಾರೆ ಅಂತ ಗೊತ್ತು. ಈಗ ಕಥೆ ಮತ್ತು ಪಾತ್ರ ಹೇಗಿದೆ ಅಂತ ನೋಡುತ್ತೇನೆ. ಹಾಗಂತ ಸಿನಿಮಾ ಪೂರ್ತಿ ನಾನೇ ಇರಬೇಕು ಅಂತೇನಲ್ಲ. ಪಾತ್ರ ಚೆನ್ನಾಗಿರಬೇಕು. ಹಾಗೇ ಈ ನಟ ಅಥವಾ ನಿರ್ದೇಶಕ ಅಥವಾ ತಂಡದ ಜತೆ ಕೆಲಸ ಮಾಡಬೇಕು ಅಂತ ಆಸೆಯಿದ್ದರೆ, ಪಾತ್ರ ಕಡಿಮೆ ಇದ್ದರೂ ಮಾಡುತ್ತೇನೆ. ಇದೇ ರೀತಿಯ ಪಾತ್ರ ಬೇಕು ಅಂತ ನನ್ನನ್ನು ನಾನು ಲಿಮಿಟ್​ ಮಾಡಿಕೊಳ್ಳುವುದಿಲ್ಲ' ಎಂದು ಹೇಳಿಕೊಳ್ಳುತ್ತಾರೆ.

ಮೃದುಲಾಳ ಕನ್ನಡ ಪ್ರೇಮ!

ಅಂದಹಾಗೆ ಪರಭಾಷೆಗಳಲ್ಲಿ ನಟಿಸುತ್ತಿದ್ದರೂ, ಶ್ರೀನಿಧಿ ತಮ್ಮ ಪಾತ್ರದ ಕನ್ನಡ ಅವತರಣಿಕೆಗೆ ತಾವೇ ಡಬ್​ ಮಾಡುತ್ತಾರಂತೆ. ಈ ಬಗ್ಗೆ, "ನಾನು ಅಮೆರಿಕದಲ್ಲಿದ್ದೆ. ಸಮಯ ತೀರಾ ಕಡಿಮೆ ಇದೆ ಅಂತ ಡಬ್ಬಿಂಗ್​ ಕಲಾವಿದರಿಂದ ನನ್ನ ಪಾತ್ರದ ಕನ್ನಡ ಡಬ್ಬಿಂಗ್​ ಮಾಡಿಸಿ, ಸಿನಿಮಾ ಕೂಡ ರೆಡಿ ಮಾಡಿಕೊಂಡಿದ್ದರು. ಆದರೆ, ಕನ್ನಡದಲ್ಲಿ ನಾನೇ ಡಬ್​ ಮಾಡಬೇಕು ಅಂತ ಹೇಳಿ ಅಮೆರಿಕದಿಂದ ಚಿತ್ರದ ಪ್ರಚಾರಕ್ಕೆ ಹೈದರಾಬಾದ್​ಗೆ ಹೋಗದೇ, ಸೀದಾ ಬೆಂಗಳೂರಿಗೆ ಬಂದು ಡಬ್ಬಿಂಗ್​ ಮುಗಿಸಿದೆ. ಕನ್ನಡದಲ್ಲಿ ನಾನು ಡಬ್ಬಿಂಗ್​ ಮಾಡಿರದಿದ್ದರೆ ನನಗೆ ತುಂಬ ಬೇಸರವಾಗುತ್ತಿತ್ತು. ಈಗ ಖುಷಿಯಾಗಿ ಹೇಳಿಕೊಳ್ಳಬಲ್ಲೆ, ಹಾಯಾಗಿ ಸಮಾಧಾನದಿಂದ ನಿದ್ರೆ ಮಾಡಬಲ್ಲೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶ್ರೀನಿಧಿ.

ಸಂಖ್ಯೆಗಿಂತ, ಸಂತೃಪ್ತಿ ಬೇಕು...

ನಾಯಕಿ ಪಾತ್ರದಲ್ಲಿ ನಟಿಸುವ ನಟಿಯರಿಗೆ ಶೆಲ್ಫ್​ಲೈಫ್​ ಕಡಿಮೆ. ಹೀಗಾಗಿಯೇ ಹೀರೋಯಿನ್​ಗಳು ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ, "ಈಗ ಸಮಯ ಬದಲಾಗುತ್ತಿದೆ. ಪ್ರೇಕ್ಷಕರು, ಚಿತ್ರರಂಗದವರು ಯೋಚಿಸುವ ರೀತಿಯೂ ಬದಲಾಗುತ್ತಿದೆ. 40 ಅಥವಾ 45 ವರ್ಷದ ನಟಿಯರೂ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ' ಎನ್ನುವ ಶ್ರೀನಿಧಿ ಶೆಟ್ಟಿ, "ನಾನು ಶೆಲ್ಫ್​ ಲೈಫ್ ಕಡಿಮೆ ಅಂತ ಕಥೆ, ಬಂದ ಅವಕಾಶಗಳನ್ನು ಒಪ್ಪಿಕೊಂಡು, ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸಿ, ಮುಂದೊಂದು ದಿನ ಆ ಚಿತ್ರ ಮಾಡಬಾರದಿತ್ತು ಅಂತ ಯೋಚಿಸುವಂತೆ ಆಗಬಾರದು. ಮುಂದೆ 10 ವರ್ಷಗಳ ನಂತರ ನೋಡಿದಾಗ ಕೇವಲ ಐದೇ ಸಿನಿಮಾಗಳಲ್ಲಿ ನಟಿಸಿದ್ದರೂ ಪರವಾಗಿಲ್ಲ, ನಾನು ಇಷ್ಟ ಪಟ್ಟು ಮಾಡಿದ ಚಿತ್ರಗಳು ಅಂತ ಖುಷಿಯಿರಬೇಕು. ಹೀಗಾಗಿಯೇ ನನ್ನ ಮನೆಯಲ್ಲೂ ಸಿನಿಮಾ ಮಾಡು ಅಂತ ಒತ್ತಡ ಹಾಕಿದರೂ ನಾನು ಒಪ್ಪಲ್ಲ. ನನಗಿಷ್ಟ ಇದ್ದರಷ್ಟೇ ಮಾಡುತ್ತೇನೆ' ಎನ್ನುತ್ತಾರೆ.

"ರಾಮಾಯಣ' ಗೊಂದಲ ಬೇಡ...

"ರಾಮಾಯಣ' ಚಿತ್ರದಿಂದ ಶ್ರೀನಿಧಿ ಶೆಟ್ಟಿ ಹೊರನಡೆದರು ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, "ಯಾರು ತಾನೇ ಸೀತೆಯಂತಹ ಪಾತ್ರವನ್ನು ಬಿಡುತ್ತಾರೆ ಹೇಳಿ? ನಾನು ಆ ಚಿತ್ರಕ್ಕೆ ಆಡಿಷನ್​ ಕೊಡಲು ಹೋಗಿದ್ದು ನಿಜ. ನನ್ನಂತೆಯೇ ಹಲವು ನಟಿಯರು ಆಡಿಷನ್​ ನೀಡಿದ್ದರು ಅಂತನ್ನಿಸುತ್ತದೆ. ಆದರೆ, ಸಾಯಿ ಪಲ್ಲವಿ ಆಯ್ಕೆಯಾದರು. ಅವರು ಸೆಲೆಕ್ಟ್​ ಆಗಿದ್ದು ನನಗೂ ಖುಷಿಯಿದೆ ಅಂತ ನಾನು ಹೇಳಿದ್ದೆ. ಆದರೆ, ನಾನೇ ಅವಕಾಶ ಕೈಚೆಲ್ಲಿದೆ ಅಂತ ಸುದ್ದಿ ಹರಡಿದೆ' ಎಂದು ಹೇಳಿಕೊಂಡಿದ್ದಾರೆ.

ಮುಂದಿನ ಚಿತ್ರಗಳು

"ಹಿಟ್​ 3' ಜತೆಗೆ ಶ್ರೀನಿಧಿ ತೆಲುಗಿನ "ತೆಲುಸು ಕದಾ' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ "ಸುದೀಪ್​ ಅವರ ಜತೆ ಕಳೆದ ವರ್ಷ ಒಂದು ಸಿನಿಮಾ ಮಾತುಕತೆ ಆಯಿತು. ಆದರೆ, ಅಧಿಕೃತವಾಗಿ ಘೋಷಣೆಯಾಗದ ಕಾರಣ ತಡವಾಗಬಹುದು ಅಂತನ್ನಿಸುತ್ತೆ. ಕೆಲ ಕಥೆಗಳನ್ನು ಕೇಳುತ್ತಿದ್ದೇನೆ. ನಾನು ನಟಿಸುವ ಪ್ರತಿ ಮೂರು ಚಿತ್ರಗಳಲ್ಲಿ ಒಂದಾದರೂ ಕನ್ನಡ ಸಿನಿಮಾ ಆಗಿರಬೇಕು ಎಂಬುದು ನನ್ನಾಸೆ' ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಶ್ರೀನಿಧಿ ಶೆಟ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net