

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಕಳೆದ ವರ್ಷದ ಅಕ್ಟೋಬರ್ನಲ್ಲಿಯೇ ಬಿಡುಗಡೆ ಆಗಿರಬೇಕಿತ್ತು. ಕೋವಿಡ್ನಿಂದ 9 ತಿಂಗಳು ಮುಂದೆ ಹೋಗಿ, ಜುಲೈ 16ಕ್ಕೆ ದಿನಾಂಕ ನಿಗದಿಯಾಗಿತ್ತು. ಸದ್ಯದ ಸ್ಥಿತಿಗತಿ ನೋಡಿದರೆ, ಆ ದಿನಾಂಕದಂದೂ ಚಿತ್ರ ಬಿಡುಗಡೆ ಆಗುವುದು ಡೌಟು. ಏಕೆಂದರೆ, ಇನ್ನೆರಡು ತಿಂಗಳ ಕಾಲ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಶುರುವಾಗುವುದಿಲ್ಲ ಮತ್ತು ಒಂದೊಮ್ಮೆ ಶುರುವಾದರೂ ಶೇ. 100ರಷ್ಟು ಹಾಜರಾತಿ ಇರುವುದಿಲ್ಲ.
ಹಾಗಾಗಿ, ಸದ್ಯದ ಮಟ್ಟಿಗೆ ಚಿತ್ರ ಬಿಡುಗಡೆಯಾಗುವುದು ಸಂಶಯ. ಈಗಾಗಲೇ ಬೇರೆ ಭಾಷೆಯ ಚಿತ್ರಗಳ ಬಿಡುಗಡೆ ಮುಂದೂಡಲ್ಪಟ್ಟಿದೆ. ಆದರೆ, ‘ಕೆಜಿಎಫ್ 2’ ಚಿತ್ರತಂಡ ಮಾತ್ರ ಇದುವರೆಗೂ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಎಲ್ಲೂ ಹೇಳಿಲ್ಲ. ಮೂಲಗಳ ಪ್ರಕಾರ, ಜುಲೈ 16ರಂದೇ ಚಿತ್ರ ಬಿಡುಗಡೆಯ ಹೊಸ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಲಿದೆಯಂತೆ. ಸದ್ಯ ರಾಜ್ಯದಲ್ಲಿ ಕರೊನಾ ಪ್ರಕರಣಗಳು ಇಳಿಮುಖವಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂಬುದನ್ನು ನೋಡಿಕೊಂಡು ಹೊಸ ಅಪ್ಡೇಟ್ ನೀಡಲಿದೆ ‘ಕೆಜಿಎಫ್’ ಬಳಗ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಸಹಜ ಸ್ಥಿತಿಗೆ ಬರುತ್ತಿದ್ದಂತೆಯೇ ಚಿತ್ರತಂಡವು ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.