

ಒಳ್ಳೆಯ ಕಂಟೆಂಟ್ ಕೊಟ್ಟರೆ ಇಲ್ಲಿನ ಸಿನಿಮಾಗಳು ಎಲ್ಲೆಡೆಯೂ ಸಲ್ಲುತ್ತವೆ, ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡುವುದರ ಜತೆಗೆ ಬೇರೆ ಭಾಷಿಕರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗುತ್ತವೆ’- ಎಂಬ ಮಾತಿಗೆ ಕಳೆದ ವಾರವಷ್ಟೇ ತೆರೆಕಂಡಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾನೇ ನಿದರ್ಶನ. ಆಯ್ದುಕೊಂಡ ಕಥೆ, ಅದನ್ನು ಸಿದ್ಧಪಡಿಸಿದ ರೀತಿ, ಹಿನ್ನೆಲೆ ಸಂಗೀತ ಮತ್ತು ತಾಂತ್ರಿಕತೆಯ ತಾಕತ್ತು ಸಿನಿಮಾದ ಪ್ಲಸ್ ಪಾಯಿಂಟ್. ಚಿತ್ರದ ಅವಧಿ ಹೆಚ್ಚಾಯ್ತು ಅಂದವರ ಮಾತನ್ನೂ ಗಮನದಲ್ಲಿಟ್ಟುಕೊಂಡು ಇಡೀ ಸಿನಿಮಾ 17 ನಿಮಿಷ ಟ್ರಿಮ್ ಆಗಿದೆ. ಇದೆಲ್ಲವನ್ನು ಅಳೆದು ತೂಗಿದರೆ, ಕಳೆದ ಮೂರು ವರ್ಷಗಳಿಂದ ಒಂದೇ ಸಿನಿಮಾ ಮೇಲೆ ಶ್ರಮ ಹಾಕಿದ ತಂಡಕ್ಕೆ ನಾರಾಯಣ ಕೈ ಬಿಡದೆ ಗಟ್ಟಿಯಾಗೇ ಹಿಡಿದುಕೊಂಡಿದ್ದಾನೆ. ಅವನ ಕೃಪಾಕಟಾಕ್ಷದಿಂದ ತಂಡಕ್ಕೆ ಲಕ್ಷ್ಮೀಯೂ ಒಲಿದಿದ್ದಾಳೆ, ಹೆಸರೂ ತಂದುಕೊಡುತ್ತಿದ್ದಾಳೆ! ಸಿನಿಮಾ ಅಂದರೆ ಹೀಗೇ ಇರಬೇಕು.. ಒಂದಷ್ಟು ಫೈಟು, ಮತ್ತೊಂದಷ್ಟು ಸೆಂಟಿಮೆಂಟು ಎಂಬ ಕೆಲ ಸಿದ್ಧಸೂತ್ರಗಳನ್ನು ಬದಿಗೊತ್ತಿ, ಫ್ಯಾಂಟಸಿ ಶೈಲಿಯಲ್ಲಿ ಹೊಸದೊಂದು ಲೋಕಕ್ಕೆ ಕರೆದೊಯ್ಯಬಹುದು ಎಂಬುದನ್ನು ನಾರಾಯಣ ತೋರಿಸಿಕೊಟ್ಟಿದ್ದಾನೆ. ಈಗಾಗಲೇ ಆ ಕಲ್ಪನಾ ಲೋಕ ಕಂಡು ಪ್ರೇಕ್ಷಕ ಫಿದಾ ಆಗಿದ್ದಾನೆ. ಹಾಗಾದರೆ ಮುಂದೇನು? ಇನ್ನೇನಿದ್ದರೂ ಕನ್ನಡದಲ್ಲಿ ನಾರಾಯಣನಿಂದ ಸೃಷ್ಟಿಯಾದ ದಾಖಲೆಗಳು ಯಾವ್ಯಾವು ಎಂಬುದನ್ನು ಲೆಕ್ಕಹಾಕಬೇಕಷ್ಟೇ.
ಕೆಜಿಎಫ್, ಎಎಸ್ಎನ್; ಇಬ್ಬರದ್ದು ಬಂಗಾರದ ಬೆಳೆಯೇ!: ಕನ್ನಡ ಸಿನಿಪ್ರಿಯರ ಪಾಲಿಗೆ 2018 ಮತ್ತು 2019ರ ಡಿಸೆಂಬರ್ ಅವಿಸ್ಮರಣೀಯ. 2018ರ ಡಿಸೆಂಬರ್ 21ರಂದು ಚಿನ್ನದ ಗಣಿಯ ಸುತ್ತ ಸೃಷ್ಟಿಯಾಗಿದ್ದ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಿ ಕನ್ನಡ ಸಿನಿಮಾರಂಗಕ್ಕೆ ಆನೆಬಲ ತುಂಬಿತ್ತು. ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿತ್ತು. ಅಷ್ಟೇ ಯಾಕೆ ಪರಭಾಷೆಯಲ್ಲೂ ‘ಕೆಜಿಎಫ್’ ಚಿತ್ರವನ್ನು ಮೆಚ್ಚಿಕೊಂಡರು. ಈಗ ಆ ಹಾದಿಯಲ್ಲಿ ‘..ನಾರಾಯಣ’ ದಾಪುಗಾಲಿಟ್ಟಿದ್ದಾನೆ. ಡಿಸೆಂಬರ್ ತಿಂಗಳಲ್ಲೇ ಬಿಡುಗಡೆ ಆಗಿರುವ ಚಿನ್ನದ ಲೂಟಿಯ ಕಥೆಗೆ ಪ್ರೇಕ್ಷಕ ಮನಸೋತಿದ್ದಾನೆ. ಸಿನಿಮಾ ಬಿಡುಗಡೆಯಾಗಿ ವಾರ ಕಳೆದರೂ, ಎಲ್ಲೆಡೆ ಹೌಸ್ಫುಲ್ ಬೋರ್ಡ್ ನೇತುಹಾಕಿಕೊಂಡು ದಿನೇದಿನೆ ಪ್ರದರ್ಶನಗಳನ್ನು ಜಾಸ್ತಿ ಮಾಡಿಕೊಳ್ಳುತ್ತಿರುವುದು ‘ಅವನ..’ ಹೆಚ್ಚುಗಾರಿಕೆ!
ನಮ್ಮ ಮಾರುಕಟ್ಟೆ ಸಣ್ಣದೇನಲ್ಲ: ‘ರಜನಿಕಾಂತ್, ವಿಜಯ್, ಮಹೇಶ್ ಬಾಬು ಸಿನಿಮಾಗಳು ಸಾವಿರ ಸಾವಿರ ಪರದೆಗಳ ಮೇಲೆ ತೆರೆಕಾಣುತ್ತವೆ. ಕನ್ನಡದಲ್ಲಿಯೇ ಅವರಿಗೆ 250-300 ಸ್ಕ್ರೀನ್ಗಳು ಲಭ್ಯವಾಗುತ್ತವೆ. ಆದರೆ, ಕನ್ನಡದಲ್ಲಿ ಕನ್ನಡ ಸಿನಿಮಾಗಳಿಗೆ ಸ್ಕ್ರೀನ್ಗಳ ಸಂಖ್ಯೆ ಅಷ್ಟಕಷ್ಟೇ. ಈಗ ಕಾಲ ಬದಲಾಗಿದೆ. ನಮ್ಮ ಸಿನಿಮಾಗಳು ಬೇರೆ ಬೇರೆ ರಾಜ್ಯಗಳಲ್ಲಿ ನೂರಾರು ಸ್ಕ್ರೀನ್ಗಳನ್ನು ಗಿಟ್ಟಿಸಿಕೊಳ್ಳುತ್ತಿವೆ’ ಎನ್ನುತ್ತಾರೆ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ‘ತೆಲಂಗಾಣ, ಆಂಧ್ರಪ್ರದೇಶದಲ್ಲಿ 200ಕ್ಕೂ ಅಧಿಕ ಕಡೆಗಳಲ್ಲಿ ‘ಅತಡೆ ಶ್ರೀಮನ್ನಾರಾಯಣ’ ರಿಲೀಸ್ ಆಗಿದೆ. ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ಎಲ್ಲೆಡೆ ಸಲ್ಲುವ ಸಿನಿಮಾ ಕೊಟ್ಟರೆ, ನಮ್ಮ ಸಿನಿಮಾಗಳಿಗೂ ಒಳ್ಳೇ ಮಾರುಕಟ್ಟೆಯೇ ಸಿಗಲಿದೆ’ ಎಂದು ಅವರು ಮಾಹಿತಿ ನೀಡುತ್ತಾರೆ.
28 ರಾಷ್ಟ್ರಗಳಲ್ಲಿ ನಾರಾಯಣ ದರ್ಶನ: ವಿದೇಶಿ ಮಾರುಕಟ್ಟೆಗೆ ಹೋಲಿಸಿದರೆ, ಕನ್ನಡದ ಸಿನಿಮಾ ಈ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು ಎಂದು ಖುಷಿ ವ್ಯಕ್ತಪಡಿಸುತ್ತಾರೆ ಪುಷ್ಕರ್. ಕರ್ನಾಟಕದಲ್ಲಿ ಗಲ್ಲಿಗಲ್ಲಿಯಲ್ಲಿನ ಸಣ್ಣ ಸಣ್ಣ ಚಿತ್ರಮಂದಿರವನ್ನೂ ಬಿಡದೆ, 500ಕ್ಕೂ ಅಧಿಕ ಪರದೆಗಳ ಮೇಲೆ ನಾರಾಯಣನನ್ನೇ ಪ್ರತಿಷ್ಠಾಪಿಸಿರುವ ಅವರು, ವಿದೇಶಗಳಲ್ಲೂ ಬಿಗ್ಗೆಸ್ಟ್ ಓಪನಿಂಗ್ ಗಿಟ್ಟಿಸಿಕೊಂಡಿದ್ದಾರೆ. ಆಫ್ರಿಕಾ, ನೈಜೀರಿಯಾ, ಲಂಡನ್, ಅಮೆರಿಕ, ಕೆನಡ, ಐರ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್, ಉಗಾಂಡ, ಕೀನ್ಯಾ.. ಹೀಗೆ 28ಕ್ಕೂ ಅಧಿಕ ಕಡೆಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿಂದೆ ಕನ್ನಡದ ಸಿನಿಮಾಗಳು ತೆರೆಕಾಣದೆ ಇದ್ದ ಕಡೆಗಳಲ್ಲೂ ನಾರಾಯಣ ಹಾಜರಿ ಹಾಕಲಿದ್ದಾನೆ.
ಹಾಗಾದರೆ ನಿರ್ವಪಕರು ಸೇಫಾ?: ‘ಅವನೇ ಶ್ರಿಮನ್ನಾರಾಯಣ’ ಸಿನಿಮಾದ ಬಜೆಟ್ 50 ಕೋಟಿ ರೂಪಾಯಿ. ಸಹಜವಾಗಿ ಸಿನಿಮಾಕ್ಕೆ ಸಿಗುವ ಪ್ರತಿಕ್ರಿಯೆ ಆಧಾರದ ಮೇಲೆ ಗಳಿಕೆ ಲೆಕ್ಕಾಚಾರ ಹಾಕಲಾಗುತ್ತದೆ. ಸದ್ಯ ನಾರಾಯಣನನ್ನು ಗಮನಿಸಿದರೆ, ಬಹುತೇಕ ಎಲ್ಲ ಸೆಂಟರ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಯಾವುದೇ ಭಯ ಇಲ್ಲವಂತೆ. ‘ಬಜೆಟ್ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಸಹಜವಾಗಿ ಭಯ ಇತ್ತು. ಆದರೆ ಅದು ಈಗಿಲ್ಲ, ಹಾಕಿದ್ದು ಮರಳಿದೆ. ಡಿಜಿಟಲ್ ಹಕ್ಕು, ಸ್ಯಾಟಲೈಟ್ ಹಕ್ಕು, ಡಬ್ಬಿಂಗ್ ಎಲ್ಲ ಪ್ಲಾಟ್ಪಾಮರ್್ನಿಂದ ಒಳ್ಳೇ ಮೊತ್ತವೇ ಸಿಕ್ಕಿದೆ’ ಎನ್ನುತ್ತಾರೆ ಪುಷ್ಕರ್.
ಕನ್ನಡದಲ್ಲಿ 100 ಕೋಟಿ ರೂ. ಗಳಿಸಿದ ಮೊದಲ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್’ನದ್ದು. ಈಗ ಆ ಸಾಲಿಗೆ ಸೇರಲು ನಾರಾಯಣನೂ ತರಾತುರಿಯಲ್ಲಿದ್ದಾನೆ. ಚಿತ್ರಮಂದಿರಗಳ ಸಂಖ್ಯೆ, ಪ್ರದರ್ಶನಗಳ ಲೆಕ್ಕಾಚಾರ ಆಧರಿಸಿ ತಾಳೆ ಹಾಕಿದರೆ ಕೇವಲ ಎರಡೇ ವಾರದಲ್ಲಿ 100 ಕೋಟಿ ರೂ. ಗಳಿಸುವ ಶಕ್ತಿ ನಾರಾಯಣನಲ್ಲಿದೆ ಎಂಬುದು ಗೋಚರವಾಗುತ್ತದೆ. ಮೊದಲ ವಾರವೇ 50 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿರುವ ಈ ಸಿನಿಮಾ, ಎರಡನೇ ವಾರದಲ್ಲಿ ಶತಕೋಟಿ ಗಳಿಸಿ, ಪರಭಾಷೆಗಳಿಂದಲೂ ಆದಾಯ ತಂದು ನಿರ್ವಪಕರ ಜೇಬು ತುಂಬಿಸಲಿದೆ.
| ಮಂಜು ಕೊಟಗುಣಸಿ