ಈಗ ಫುಲ್ ಬಿಜಿ ಕೆಜಿಎಫ್ ಅರ್ಚನಾ

Archana 25 Jan 20
Published on

ಬೆಂಗಳೂರು: ‘ಕೆಜಿಎಫ್’ ಚಿತ್ರದಲ್ಲಿ ಗಮನಸೆಳೆದ ಮತ್ತು ಇನ್ನಷ್ಟು ಜನಪ್ರಿಯರಾದ ಹಲವರಲ್ಲಿ ಅರ್ಚನಾ ಜೋಯಿಸ್ ಸಹ ಒಬ್ಬರು. ಅರ್ಚನಾ ಅವರದ್ದು ಆ ಚಿತ್ರದಲ್ಲಿ ಚಿಕ್ಕ ಪಾತ್ರವಾದರೂ, ಆ ಪಾತ್ರ ಅವರಿಗೆ ತಂದುಕೊಟ್ಟ ಖ್ಯಾತಿ ದೊಡ್ಡದು. ಅಲ್ಲಿಯವರೆಗೂ ಕಿರುತೆರೆಗೆ ಮಾತ್ರ ಸೀಮಿತವಾಗಿದ್ದ ಮತ್ತು ‘ಮಹಾದೇವಿ’, ‘ದುರ್ಗಾ’, ‘ಶ್ರೀ ವಿಷ್ಣು ದಶಾವತಾರ’ ಸೇರಿ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅರ್ಚನಾ, ‘ಕೆಜಿಎಫ್: ಚಾಪ್ಟರ್ 1’ ನಂತರ ಕನ್ನಡ ಚಿತ್ರರಂಗದಲ್ಲಿ ಬಿಜಿ ನಟಿಯಾಗಿ ಹೊರಹೊಮ್ಮಿದ್ದಾರೆ.

ಹೌದು.. ಅದಕ್ಕೆ ಉದಾಹರಣೆಯಾಗಿ ಅವರ ಕೈಯಲ್ಲಿ ಐದು ಸಿನಿಮಾಗಳಿವೆ. ಆ ಪೈಕಿ ‘ಕಾಲಾಂತಕ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಅದರ ನಂತರ ‘ನಕ್ಷೆ’, ‘ಮುಂದೊಂದು ದಿನ’, ‘ಕೆಜಿಎಫ್: ಚಾಪ್ಟರ್ 2’ ಅಲ್ಲದೆ, ಮರಾಠಿಯ ‘ರಾಜಕುಮಾರ್’ ಎಂಬ ಚಿತ್ರದಲ್ಲೂ ಅರ್ಚನಾ ಜೋಯಿಸ್ ನಟಿಸುತ್ತಿದ್ದಾರಂತೆ. ಇದಕ್ಕೆಲ್ಲ ಕಾರಣ ‘ಕೆಜಿಎಫ್’ ಎಂದರೆ ತಪ್ಪಿಲ್ಲ. ಆ ಚಿತ್ರದಲ್ಲಿ ಆಫರ್ ಬಂದಾಗ, ಯಶ್ ತಾಯಿಯ ಪಾತ್ರ ಎಂದು ಕೇಳಿ ಹಿಂದೇಟು ಹಾಕಿದ್ದರಂತೆ. ಕೊನೆಗೆ ಕಥೆ ಮತ್ತು ಪಾತ್ರ ಕೇಳಿ ಒಪ್ಪಿದ್ದಾರೆ. ಅಲ್ಲಿಯವರೆಗೂ, ಧಾರಾವಾಹಿಗಳಲ್ಲಿ ನಟಿಸಿದ್ದ ಅವರಿಗೆ ‘ಕೆಜಿಎಫ್’ಗಿಂಥ ಇನ್ನೊಂದು ದೊಡ್ಡ ಓಪನಿಂಗ್ ಸಿಗುವುದು ಸಾಧ್ಯ ಇರಲಿಲ್ಲವೇನೋ? ಇನ್ನು ‘ಕೆಜಿಎಫ್: ಚಾಪ್ಟರ್ 2’ನಲ್ಲೂ ಅರ್ಚನಾ ಅವರ ಪಾತ್ರ ಮುಂದುವರಿದಿದೆಯಂತೆ. ನಾಯಕನಿಗೆ ತಾಯಿಯೇ ಸ್ಪೂರ್ತಿಯಾದ್ದರಿಂದ, ಆ ಪಾತ್ರ ಅಲ್ಲಲ್ಲಿ ಮೂಡಿಬರಲಿದೆಯಂತೆ. ಇದೆಲ್ಲದರ ಮಧ್ಯೆ, ಅರ್ಚನಾ ಅವರು ‘ಕಾಲಾಂತಕ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಈ ಚಿತ್ರದಲ್ಲಿ ಅರ್ಚನಾ ಲೇಖಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಬಚೂರು ಎಂಬ ಕಾಲ್ಪನಿಕ ಊರಿನಲ್ಲಿ ಒಂದಿಷ್ಟು ಘಟನೆಗಳು ನಡೆದು, ಆ ಘಟನೆಗಳನ್ನು ಆಧರಿಸಿ ಲೇಖಕಿಯೊಬ್ಬಳು ಕಾದಂಬರಿ ಬರೆಯಲು ಶುರು ಮಾಡುತ್ತಾಳೆ. ಆ ನಂತರ ಏನೆಲ್ಲ ಆಗುತ್ತದೆ ಎನ್ನುವುದು ಚಿತ್ರದ ಕಥೆಯಂತೆ. ‘ಚಿತ್ರದಲ್ಲಿ ನಾನು ಬರಹಗಾರ್ತಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ಬರುವ ಪಾತ್ರಗಳೆಲ್ಲ ನನ್ನ ಪುಸ್ತಕದಲ್ಲಿ ನಾನು ಸೃಷ್ಟಿ ಮಾಡಿರುವ ಪಾತ್ರಗಳೇ. ವಿಭಿನ್ನ ಕಥೆ ಇರುವ ಚಿತ್ರ. ನನ್ನ ಪಾತ್ರ ಬಹಳ ಚಾಲೆಂಜಿಂಗ್ ಆಗಿತ್ತು’ ಎನ್ನುತ್ತಾರೆ ಅರ್ಚನಾ. ಅಂಬರೀಷ್ ಎನ್ನುವವರು ನಿರ್ದೇಶಿಸಿರುವ ಈ ಚಿತ್ರ ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಈ ವರ್ಷದಲ್ಲಿ ಇದು ಅವರ ಮೊದಲ ಚಿತ್ರವಾಗುತ್ತದೆ.

ಅರ್ಚನಾ ಹೇಳುವಂತೆ, ಅವರನ್ನು ಎಲ್ಲ ಜಾನರ್​ನ ಚಿತ್ರಗಳು ಮತ್ತು ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಂತೆ. ‘ಒಂದು ಚಿತ್ರಕ್ಕೆ ಹೀರೋ-ಹೀರೋಯಿನ್ ಎಂದು ಗುರುತಿಸಿಕೊಳ್ಳುವುದಕ್ಕಿಂತ, ಸಿನಿಮಾನೇ ಹೀರೋ-ಹೀರೋಯಿನ್ ಆಗಿರಬೇಕು ಮತ್ತು ನಾವೆಲ್ಲ ಅದರ ಮೂಲಕ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಆಸೆ. ‘ಕೆಜಿಎಫ್: ಚಾಪ್ಟರ್ 1’ ನಂತರ ಯಾವುದೇ ಒಂದು ಪಾತ್ರಕ್ಕೆ ಸೀಮಿತವಾಗಿಲ್ಲ. ನನಗೆ ಚಾಲೆಂಜಿಂಗ್ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ ಮತ್ತು ಅದಕ್ಕೆ ಸರಿಯಾಗಿ ಬೇರೆಬೇರೆ ತರಹದ ಸವಾಲಿನ ಪಾತ್ರಗಳು ಸಿಗುತ್ತಿವೆ ಎನ್ನುವುದೇ ಖುಷಿ’ ಎನ್ನುತ್ತಾರೆ ಅರ್ಚನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net