

ಬೆಂಗಳೂರು: ‘ಕೆಜಿಎಫ್ - ಚಾಪ್ಟರ್ 2’ ಚಿತ್ರದ ಚಿತ್ರೀಕರಣ ಯಾವಾಗ ಶುರು? ಚಿತ್ರೀಕರಣ ಯಾವಾಗ ಮುಗಿಯುತ್ತದೆ? ಬಾಕಿ ಇರುವ ಭಾಗದ ಚಿತ್ರೀಕರಣ ಮುಗಿಸಿ, ಅಂದುಕೊಂಡ ದಿನದಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುತ್ತದಾ? ...
ಹೀಗೆ ಹಲವು ಪ್ರಶ್ನೆಗಳು ಯಶ್ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಈಗ ಈ ಪೈಕಿ, ಮೊದಲನೆಯದಕ್ಕೆ ಉತ್ತರ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಒಂದೊಂದೇ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಈ ವರ್ಷದ ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆಯಾದಾಗ, ‘ಕೆಜಿಎಫ್ - ಚಾಪ್ಟರ್ 2’ನ ಬಹುತೇಕ ಚಿತ್ರೀಕರಣ ಮುಗಿದು, ಇನ್ನು ಕೇವಲ 25 ದಿನಗಳ ಚಿತ್ರೀಕರಣ ಬಾಕಿ ಇತ್ತು. ಒಂದು ಪಕ್ಷ ಲಾಕ್ಡೌನ್ ಆಗಿರದಿದ್ದರೆ, ಇಷ್ಟರಲ್ಲಿ ಎಲ್ಲ ಮುಗಿದು, ಮೊದಲು ಘೋಷಣೆಯಾದಂತೆ ಅಕ್ಟೋಬರ್ 23ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದ ಎಲ್ಲವೂ ತಲೆ ಕೆಳಗಾಗಿದೆ. ಈಗ ಆಗಸ್ಟ್ 15ರ ನಂತರ ಚಿತ್ರೀಕರಣ ಪುನಃ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ನಿರ್ಧರಿಸಲಾಗುವುದು ಎನ್ನುತ್ತಾರೆ ಚಿತ್ರದ ಕಾರ್ಯಕಾರಿ ನಿರ್ವಪಕ ಕಾರ್ತಿಕ್ ಗೌಡ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡುವುದಕ್ಕೆ ಯೋಚಿಸಿದ್ದೇವೆ. ಮೊದಲು 15 ದಿನಗಳ ಚಿತ್ರೀಕರಣ ಮಾಡಿ, ಒಂದು ಸಣ್ಣ ಬ್ರೇಕ್ ತೆಗೆದುಕೊಂಡು, ನಂತರ 10 ದಿನಗಳ ಚಿತ್ರೀಕರಣ ಮಾಡುವುದಕ್ಕೆ ಪ್ಲಾನ್ ಆಗಿದೆ. ಈಗಾಗಲೇ ಸೆಟ್ ಕೆಲಸ ಶುರುವಾಗಿದ್ದು, ಮುಂದಿನ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ.
ಇನ್ನು ಚಿತ್ರವನ್ನು ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆಗೆ, ‘ಆ ಬಗ್ಗೆ ಈಗಲೇ ಹೇಳುವುದು ಕಷ್ಟ. ಮೊದಲಿಗೆ ಚಿತ್ರೀಕರಣ ಮುಗಿಯಬೇಕು. ಅದರ ಜತೆಗೆ, ನಿಂತಿರುವ ಚಿತ್ರ ಪ್ರದರ್ಶನ ಪುನಃ ಪ್ರಾರಂಭವಾಗಬೇಕು. ಚಿತ್ರ ಪ್ರದರ್ಶನ ಶುರುವಾದ ಮೇಲೆ, ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳುತ್ತಾರೆ. ‘ಕೆಜಿಎಫ್ - 2’ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ನಟಿಸುತ್ತಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.