ಇದೇ ವರ್ಷ ಕೆಜಿಎಫ್ 2 ರಿಲೀಸ್ ಪಕ್ಕಾ

yesh 6 mar 20
Published on

ಬೆಂಗಳೂರು: ‘ಈ ವರ್ಷವೇ ‘ಕೆಜಿಎಫ್ - ಚಾಪ್ಟರ್ 2’ ಪಕ್ಕಾ ರಿಲೀಸ್ ಆಗುತ್ತದೆ. ಅಭಿಮಾನಿಗಳು ಅದರಲ್ಲಿ ಯಾವುದೇ ಅನುಮಾನ ಪಡಬೇಕಿಲ್ಲ ...’ ಹಾಗಂತ ಹೇಳಿದ್ದು ನಟ ಯಶ್. ‘ಓಬೀರಾಯನ ಕಥೆ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಕೆಜಿಎಫ್ 2’ ಈ ವರ್ಷ ಪಕ್ಕಾ ರಿಲೀಸ್ ಆಗುತ್ತದೆ. ಅದಕ್ಕಾಗಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದರಲ್ಲಿ ಒಂದು ಚಿಕ್ಕ ಫ್ಲ್ಯಾಶ್ ಬ್ಯಾಕ್ ಎಪಿಸೋಡ್ ಬರುತ್ತದೆ. 1971ರಲ್ಲಿ ನಡೆಯುವ ಕಥೆ ಅದು. ಅದಕ್ಕೆ ನಾನು ತೂಕ ಇಳಿಸಿಕೊಳ್ಳಬೇಕಿದ್ದರಿಂದ ಕಳೆದ 8 ತಿಂಗಳಿನಿಂದಲೂ ವರ್ಕೌಟ್ ಮಾಡುತ್ತಿದ್ದೇನೆ’ಎಂದು ಹೇಳಿದ್ದಾರೆ ಯಶ್.

‘ಆರ್​ಆರ್​ಆರ್’ ಜತೆಗೆ ಕ್ಲಾಶ್ ಇಲ್ಲ: ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಮತ್ತು ‘ಕೆಜಿಎಫ್ ಚಾಪ್ಟರ್-2’ ಎರಡೂ ಚಿತ್ರಗಳು ರಿಲೀಸ್ ಕ್ಲಾಶ್ ಆಗುತ್ತದೆ ಎಂಬ ಸುದ್ದಿ ಈ ಹಿಂದೆ ಹಬ್ಬಿತ್ತು. ಇದನ್ನು ನಿರಾಕರಿಸುವ ಯಶ್, ‘ಈ ಕುರಿತು ನಾವಿಗಾಗಲೇ ರಾಜಮೌಳಿ ಅವರ ಜತೆಗೆ ಮಾತುಕತೆ ನಡೆಸಿದ್ದೇವೆ. ಅವರ ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ. ನಮ್ಮದು ಈ ವರ್ಷವೇ ತೆರೆಗೆ ಬರಲಿದೆ’ ಎನ್ನುತ್ತಾರೆ ಯಶ್.

ಕರೊನಾದಿಂದ ಬರ್ತ್ ಡೇ ಕ್ಯಾನ್ಸಲ್: ಇಂದು (ಮಾರ್ಚ್ 7) ರಾಧಿಕಾ ಪಂಡಿತ್ ಹುಟ್ಟು ಹಬ್ಬವಿದೆ. ಆದರೆ, ಯಶ್ ಮತ್ತು ರಾಧಿಕಾ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಅದಕ್ಕೆ ಕಾರಣ ಕರೊನಾ ವೈರಸ್. ‘ಈ ಬಾರಿ ಹುಟ್ಟುಹಬ್ಬ ಸರಳವಾಗಿರುತ್ತದೆ. ಒಂದೇ ಕಡೆ ಹೆಚ್ಚು ಜನ ಸೇರಬಾರದು ಎಂಬ ಕಾರಣದಿಂದಾಗಿ, ಎಲ್ಲರಿಗೂ ಮನೆಗೆ ಬರಬೇಡಿ ಎಂದು ತಿಳಿಸಿದ್ದೇವೆ. ಜತೆಗೆ ನಾವು ಕೂಡ ಮನೆಯಲ್ಲಿ ಇರುವುದಿಲ್ಲ. ಜತೆಗೆ ಎಲ್ಲರೂ ಹೈಜಿನಿಕ್ ಆಗಿ ಇರಿ. ವಿದೇಶದ ಶೇಕ್ ಹ್ಯಾಂಡಿಗಿಂತಲೂ, ನಮ್ಮ ದೇಶದ ನಮಸ್ಕಾರ ಬೆಸ್ಟ್. ಮಾಸ್ಕ್ ಹಾಕಿಕೊಂಡು ಓಡಾಡಿ. ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ’ ಎಂದು ಜನರಿಗೆ ಮನವಿ ಮಾಡುತ್ತಾರೆ ಯಶ್.

ಹಣ ಕೊಟ್ಟಿದ್ದಕ್ಕೆ ಸಂತಸ: ಇನ್ನು ಚಿತ್ರನಗರಿ ಸ್ಥಾಪನೆಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 500 ಕೋಟಿ ರೂ. ಕೊಟ್ಟಿರುವುದಕ್ಕೆ ಯಶ್ ಸಂತಸ ವ್ಯಕ್ತಪಡಿಸಿದರು. ‘ನಾನು ಬೇರೆ ಊರಿಗೆ ಸ್ಟುಡಿಯೋಗಳನ್ನು ಹುಡುಕಿಕೊಂಡು ಹೋದಾಗ ನಮ್ಮಲ್ಲೂ ಇಂತಹದ್ದೊಂದು ಸ್ಟುಡಿಯೋ ಇರಬೇಕಿತ್ತು ಎಂದುಕೊಳ್ಳುತ್ತಿದ್ದೆ. ಹಾಗಾಗಿ ಮೊನ್ನೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದೆ. ಅದರಂತೆ ಅವರು ಬಜೆಟ್​ನಲ್ಲಿ ಹಣ ನೀಡಿದ್ದು ಖುಷಿಯಾಗಿದೆ’ ಎನ್ನುತ್ತಾರೆ ಯಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net