ಅಗಲಿದ ಚಿತ್ರರಂಗದ ಗಣ್ಯರನ್ನು ನೆನೆದ ಕರ್ನಾಟಕ ಫಿಲಂ ಚೇಂಬರ್ ...

KFCC - Condolence - Final
Published on

ಬೆಂಗಳೂರು: ಕಳೆದ ಒಂದು ವರ್ಷದಿಂದ ಕನ್ನಡ ಚಿತ್ರರಂಗದ ಹಲವು ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಱರು ನಿಧನರಾಗಿದ್ದಾರೆ. ಅದರಲ್ಲೂ ಕರೊನಾ ಎರಡನೆಯ ಅಲೆಯ ಸಂದರ್ಭದಲ್ಲಿ ಹಲವರು ನಿಧನರಾಗಿದ್ದು, ಅಗಲಿದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶ್ರದ್ಧಾಂಜಲಿ ಸಲ್ಲಿಸಿದೆ.

ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ನಿರ್ಮಾಪಕ ರಾಮು. ಎಂ. ಚಂದ್ರಶೇಖರ್​, ಸಂಚಾರಿ ವಿಜಯ್, ಕವಿ ಸಿದ್ದಲಿಂಗಯ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಸೇರಿದಂತೆ ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಲವು ಸಾಧಕರ ಭಾವಚಿತ್ರಗಳನ್ನು ಪ್ರದರ್ಶಿಸಿ, ಅವರಿಗೆ ಸಂತಾಪ ಸೂಚಿಸಲಾಯಿತು.

ಶಿವಾನಂದ ವೃತ್ತದಲ್ಲಿರುವ ಕರ್ನಾಟಕ ಫಿಲಂ ಚೇಂಬರ್ ಕಟ್ಟಡದ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್, ಡಾ. ಜಯಮಾಲಾ, ತಾರಾ, ಜೆಕೆ, ಶಿವರಾಜ್​ ಕೆಆರ್​ ಪೇಟೆ, ಸಂತೋಷ್​ ಆರ್ಯನ್​, ಪ್ರಮೀಳಾ ಜೋಷಾಯ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್, ಕನ್ನಡ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್​ ಕುಮಾರ್ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗಿಯಾಗಿ ಅಗಲಿದ ಸಿನಿಮಾರಂಗದ ಚೇತನಗಳಿಗೆ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಕೋವಿಡ್ ಸಮಯದಲ್ಲಿ ಕೆಸಿಎನ್, ರಾಮು, ವಿಜಯ್ ಅವರಂಥ ಅನೇಕರನ್ನು ಕಳೆದುಕೊಂಡಿರುವುದು ದುಃಖ ತಂದಿದೆ. ಎಲ್ಲರೂ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಮುಂದೆ ಬರುವವರಿಗೆ ಅವರು ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ’ ಎಂದು ಪ್ರಾರ್ಥಿಸಿದರು.

ನಂತರ ಮಾತನಾಡಿದ ಹಿರಿಯ ನಟಿ ತಾರಾ, ‘ಈ ಕರೊನಾ ನಮ್ಮೆಲ್ಲರಿಗೂ ನಾನು-ನನ್ನಿಂದ ಎಂಬ ಅಹಂ ಬಿಟ್ಟು ನಾವು ಸೇರೋದು ಮಣ್ಣಿಗೆ ಎನ್ನುವ ಪಾಠವನ್ನು ಕಲಿಸಿದೆ. ಇವರು ಎಷ್ಟು ಸಂಪಾದನೆ ಮಾಡಿದ್ದಾರೆ ಎನ್ನುವುದನ್ನು ಯಾರೂ ಮಾತಾಡುತ್ತಿಲ್ಲ. ಅವರು ಮಾಡಿರುವ ಕೆಲಸಗಳು ಅವರನ್ನ ಸ್ಮರಿಸುವಂತೆ ಮಾಡುತ್ತಿವೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net