ಕೆರೆಬೇಟೆ ನಾಗನ ಹೊಸ ಬೇಟೆ: Actor SRG Gowrishankar Interview

"ಕೆರೆಬೇಟೆ' (2024) ನಾಗನಾಗಿ ಗಮನ ಸೆಳೆದಿದ್ದ ನಟ ಗೌರಿಶಂಕರ್​ ಇದೀಗ "ಕಾಮನ್​ಮ್ಯಾನ್​'ಆಗಿ ವಾಪಸ್ಸಾಗಿದ್ದಾರೆ. ಹಿರಿಯ ನಿರ್ದೇಶಕ ಓಂಸಾಯಿಪ್ರಕಾಶ್​ ನಿರ್ದೇಶನದ 106ನೇ ಚಿತ್ರವಿದು. "ಕಾಮನ್​ಮ್ಯಾನ್​' ಪೊಲಿಟಿಕಲ್​ ಕಾಮಿಡಿ ಥ್ರಿಲ್ಲರ್​ ಡ್ರಾಮಾ ಚಿತ್ರವಾಗಿದ್ದು, ಸುರಭಿ ಫಿಲಂಸ್​ ಬ್ಯಾನರ್​ನಲ್ಲಿ ಎನ್​.ನರಸಿಂಹಮೂರ್ತಿ ನಿರ್ಮಿಸಿದ್ದಾರೆ.
SRG Gowrishankar
ಎಸ್​ಆರ್​ಜಿ ಗೌರಿಶಂಕರ್​
Published on

‘ಬೆಂಗಳೂರು: "ಕೆರೆಬೇಟೆ' (2024) ನಾಗನಾಗಿ ಗಮನ ಸೆಳೆದಿದ್ದ ನಟ ಗೌರಿಶಂಕರ್​ ಇದೀಗ "ಕಾಮನ್​ಮ್ಯಾನ್​'ಆಗಿ ವಾಪಸ್ಸಾಗಿದ್ದಾರೆ. ಹಿರಿಯ ನಿರ್ದೇಶಕ ಓಂಸಾಯಿಪ್ರಕಾಶ್​ ನಿರ್ದೇಶನದ 106ನೇ ಚಿತ್ರವಿದು. "ಕಾಮನ್​ಮ್ಯಾನ್​' ಪೊಲಿಟಿಕಲ್​ ಕಾಮಿಡಿ ಥ್ರಿಲ್ಲರ್​ ಡ್ರಾಮಾ ಚಿತ್ರವಾಗಿದ್ದು, ಸುರಭಿ ಫಿಲಂಸ್​ ಬ್ಯಾನರ್​ನಲ್ಲಿ ಎನ್​.ನರಸಿಂಹಮೂರ್ತಿ ನಿರ್ಮಿಸಿದ್ದಾರೆ. ಶುಕ್ರವಾರ (ಸೆ. 25) ಸಿನಿಮಾ ರಾಜ್ಯಾದ್ಯಂತ ರಿಲೀಸ್​ ಆಗಲಿದ್ದು ಗೌರಿಶಂಕರ್​, ""ಕೆರೆಬೇಟೆ' ಬಳಿಕ ನಾನೇ ಒಂದು ಸಿನಿಮಾ ನಿರ್ದೇಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಜತೆಗೆ "ಫಸ್ಟ್​ ರ್ಯಾಂಕ್​ ರಾಜು' ನಿರ್ದೇಶಕ ನರೇಶ್​ ಜತೆಗೆ ಒಂದು ಸಿನಿಮಾ ಮಾತುಕತೆ ನಡೆಯುತ್ತಿತ್ತು. ಅದರ ನಡುವೆ ನಾನು ಯಾವ ರೀತಿಯ ಕಥೆ ಮಾಡಬೇಕು ಅಂತ ಅಂದುಕೊಂಡಿದ್ದೆನೋ ಅದೇ ಕಥೆ "ಕಾಮನ್​ಮ್ಯಾನ್​' ರೂಪದಲ್ಲಿ ಹುಡುಕಿಕೊಂಡು ಬಂತು. ಲವ್​ ಅಟ್​ ಸ್ಟ್​ ಸೈಟ್​ ಎಂಬಂತೆ ಕಥೆ ಕೇಳಿದಾಕ್ಷಣ ಒಪ್ಪಿಕೊಂಡೆ. ಕಣ್ಣಮುಂದೆ ನಡೆಯುವ ಅನ್ಯಾಯವನ್ನು ಅಲ್ಲಿಯೇ ಪ್ರಶ್ನಿಸುವ, ಸಣ್ಣ ತಪು$್ಪಗಳನ್ನೂ ಕಾನೂನಾತ್ಮಕವಾಗಿ ಸರಿಪಡಿಸುವ ವಕೀಲನ ಪಾತ್ರ ನನ್ನದು. ತಂದೆಯ ಹಾದಿಯಲ್ಲಿ ನಡೆಯುತ್ತಾ ಸಮಾಜ ಸುಧಾರಣೆಗೆ ಮುಂದಾಗುವ ಲಾಯರ್​, ಮುಂದೆ ರಾಜಕಾರಣಕ್ಕೆ ಬರುತ್ತಾನೆ. ಆತನ ಜರ್ನಿಯ ಸುತ್ತ ಮನರಂಜನೆಯ ಅಂಶಗಳನ್ನು ಸೇರಿಸಿ ಕಮರ್ಷಿಯಲ್​ ಆಗಿ ಮಾಡಿರುವ ಚಿತ್ರವಿದು. ಒಂದಷ್ಟು ತಿರುವುಗಳಿದ್ದು, ಬೋರ್​ ಆಗದಂತೆ ನೋಡಿಸಿಕೊಂಡು ಹೋಗುತ್ತದೆ' ಎಂದು ಮಾಹಿತಿ ನೀಡುತ್ತಾರೆ.

ಗೌರಿಶಂಕರ್​, ಶೋನಾ, ನರಸಿಂಹಮೂರ್ತಿ
ಗೌರಿಶಂಕರ್​, ಶೋನಾ, ನರಸಿಂಹಮೂರ್ತಿ

9 ತಿಂಗಳಲ್ಲೇ ಡೆಲಿವರಿ!

ನಿರ್ದೇಶಕ ಓಂಸಾಯಿಪ್ರಕಾಶ್​ ವೇಗದ ಕೆಲಸಕ್ಕೆ ಹೆಸರುವಾಸಿ. "ನಮ್ಮ ಸಿನಿಮಾ ಶುರುವಾದ ಆರು ತಿಂಗಳಲ್ಲಿ ಶೂಟಿಂಗ್​ ಮುಗಿದಿತ್ತು. ಡಿಸೆಂಬರ್​ನಲ್ಲಿ ಮಾತುಕತೆ ಮಾಡಿಕೊಂಡು, ಜನವರಿಯಲ್ಲಿ ಶೂಟಿಂಗ್​ ಪ್ರಾರಂಭವಾಗಿ, ಸೆಪ್ಟೆಂಬರ್​ನಲ್ಲಿ ರಿಲೀಸ್​ಗೆ ರೆಡಿಯಾಗಿದೆ. ಓಂಸಾಯಿಪ್ರಕಾಶ್​ ಅವರ ಅನುಭವವೇ ಇಷ್ಟು ವೇಗವಾಗಿ ಸಿನಿಮಾ ಆಗಲು ಕಾರಣ. ನಮಗೂ ಸೆಟ್​ನಲ್ಲಿ ಸ್ವಾತಂತ್ರ್ಯ ನೀಡುತ್ತಿದ್ದರು. ಅವರು ಸಾಮಾನ್ಯವಾಗಿ ಹೆಚ್ಚು ಎಕ್ಸೈಟ್​ ಆಗುವುದಿಲ್ಲ. ಆದರೆ, "ಕಾಮನ್​ಮ್ಯಾನ್​' ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಏಕೆಂದರೆ ಇದು ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕಥೆ' ಎನ್ನುತ್ತಾರೆ ಗೌರಿಶಂಕರ್​.

ಕಾಮನ್​ಮ್ಯಾನ್ ಚಿತ್ರದ ಪೋಸ್ಟರ್
ಕಾಮನ್​ಮ್ಯಾನ್ ಚಿತ್ರದ ಪೋಸ್ಟರ್

ಖಾಕಿ, ಖಾದಿ, ಕಾವಿ

"ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಕರಪ್ಷನ್​ ಇದೆ' ಎನ್ನುವ ಗೌರಿಶಂಕರ್​, " ಎಲ್ಲವನ್ನೂ ಸಿನಿಮಾದಲ್ಲಿ ಹೇಳಲಾಗುವುದಿಲ್ಲ. ಹೀಗಾಗಿ ಖಾಕಿ, ಖಾದಿ, ಕಾವಿಯಲ್ಲಿ ಭ್ರಷ್ಟಾಚಾರ ಹೇಗೆ ನಡೆಯುತ್ತದೆ ಎಂಬುದರ ಸುತ್ತ "ಕಾಮನ್​ಮ್ಯಾನ್​' ಕಟ್ಟಿಕೊಟ್ಟಿದ್ದೇವೆ. ಇಂತಹ ಪೊಲಿಟಿಕಲ್​ ಡ್ರಾಮಾಗಳು ಇತ್ತೀಚೆಗೆ ಬಂದಿಲ್ಲ. ಪ್ರತಿಯೊಬ್ಬರನ್ನೂ ಪ್ರೇರೇಪಿಸುವ, ಪ್ರಶ್ನಿಸುವ ಗುಣ ಬೆಳೆಸುವ ಚಿತ್ರ' ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net