

ಬೆಂಗಳೂರು: ಮಾಲಾಶ್ರೀ ಅವರು ಇದುವರೆಗೂ ಹಲವು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅವರು ಹೊಸ ಚಿತ್ರವೊದರಲ್ಲಿ ಕಮಿಷನರ್ ಆಗಿ ಬಡ್ತಿ ಪಡೆದಿದ್ದಾರೆ. ಆ ಚಿತ್ರದ ಹೆಸರು 'ಕೆಂಡದ ಸೆರಗು'. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಟೀಸರ್ ಸಹ ಬಿಡುಗಡೆಯಾಗಿದೆ.
ರಾಕಿ ಸೋಮ್ಲಿ ನಿರ್ದೇಶಿಸಿರುವ ಮೊದಲ ಚಿತ್ರ ಇದು. ಇದು ಅವರೇ ರಚಿಸಿರುವ, ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಇನ್ನು, ಮಾಲಾಶ್ರೀ ಪೊಲೀಸ್ ಕಮಿಷನರ್ ಆಗಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಮಾಲಾಶ್ರೀ, 'ಚಿತ್ರದ ಕಥೆ ಚೆನ್ನಾಗಿದೆ. ಸಿನಿಮಾ ಕೆಲಸ ಆದ ಮೇಲೆ ಒಮ್ಮೆ ನನಗೆ ತೋರಿಸಿ ಎಂದು ಹೇಳಿದ್ದೆ. ಅದರಂತೆ ರಫ್ ಕಟ್ ತೋರಿಸಿದರು. ತುಂಬಾ ಚೆನ್ನಾಗಿ ಬಂದಿದೆ ಸಿನಿಮಾ. ನಾನು ಪೋಲೀಸ್ ಪಾತ್ರ ತುಂಬಾ ಮಾಡಿದ್ದೀನಿ. ಆದರೆ, ಇಲ್ಲಿಯವರೆಗೂ ಮಾಡಿದ್ದ ಪಾತ್ರಗಳಿಗಿಂತ, ಈ ಪಾತ್ರಕ್ಕೆ ಬೇರೆಯದೇ ಫೀಲ್ ಇದೆ. ಈ ಚಿತ್ರ ಕೇವಲ ಕುಸ್ತಿ ಬಗ್ಗೆ ಅಂತಲ್ಲ. ಹೆಣ್ಣುಮಗಳೊಬ್ಬಳ ನೋವಿನ ಕಥೆ ಚಿತ್ರದಲ್ಲಿದೆ. ಒಂದೊಳ್ಳೆಯ ಮೆಸೇಜ್ ಚಿತ್ರದಲ್ಲಿದೆ. ಈ ಸಿನಿಮಾದ ಭಾಗವಾಗಿದ್ದಕ್ಕೆ ತುಂಬಾ ಖುಷಿ ಇದೆ. ನಾನೇ ಈ ಚಿತ್ರಕ್ಕೆ ಡಬ್ ಮಾಡುತ್ತಿದ್ದೇನೆ' ಎಂದು ಈ ಚಿತ್ರದ ಬಗ್ಗೆ ಖುಷಿ ಹಂಚಿಕೊಳ್ಳುತ್ತಾರೆ.
ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನುವ ಭೂಮಿ ಶೆಟ್ಟಿ, 'ಈ ರೀತಿಯ ಪಾತ್ರ ಮಾಡಲು ನಾನು ಕಾತುರದಿಂದ ಕಾಯುತ್ತಿದ್ದೆ. ಅದೇ ಸಮಯದಲ್ಲಿ 'ಕೆಂಡದ ಸೆರಗು' ಸಿನಿಮಾ ಸಿಕ್ಕಿತು. ಕಥೆ, ಪಾತ್ರಗಳು, ಸಿನಿಮಾದಲ್ಲಿನ ಶೇಡ್ ಎಲ್ಲವನ್ನು ಕೇಳಿ ಇಷ್ಟವಾಯ್ತು. ಚಾಲೆಂಜಿಂಗ್ ಪಾತ್ರ, ನಾನು ಮಾಡಲೇಬೇಕು ಎಂದು ಒಪ್ಪಿಕೊಂಡೆ. ಕುಸ್ತಿಗೆ ಹಂಡ್ರೆಡ್ ಪರ್ಸೆಂಟ್ ಗಿಂತ ಜಾಸ್ತಿ ಎಫರ್ಟ್ ಹಾಕಿದ್ದೇನೆ. ನನ್ನ ಪಾತ್ರಕ್ಕಿರುವ ಶೇಡ್ಸ್ ತುಂಬಾ ಚೆನ್ನಾಗಿದೆ. ಸಮಾಜದಲ್ಲಿ ವೇಶ್ಯೆ ಹಾಗೂ ಆಕೆಯ ಮಗಳನ್ನು ಬೇರೆಯದ್ದೇ ರೀತಿ ನೋಡುತ್ತಾರೆ. ಆದರೆ ಆಕೆಗೂ ಅವಕಾಶ ನೀಡಿದರೆ ಏನು ಬೇಕಾದರೂ ಸಾಧಿಸುತ್ತಾಳೆ ಎನ್ನುವ ಎಳೆ ಚಿತ್ರದ್ದು' ಎಂದು ಮಾಹಿತಿ ಹಂಚಿಕೊಂಡರು.
ದಾವಣಗೆರೆಯಲ್ಲಿ ಬೀಡಾ ಅಂಗಡಿ ಇಟ್ಟುಕೊಂಡಿರುವ ನಿರ್ಮಾಪಕ ಕೆ. ಕೊಟ್ರೇಶ್, ಈ ಕಥೆ ಚೆನ್ನಾಗಿದೆ ಮತ್ತು ನಿರ್ದೇಶಕ ತನ್ನ ಸ್ನೇಹಿತ ಎಂಬ ಕಾರಣಕ್ಕೆ ತಮ್ಮ ಬಳಿ ಇದ್ದ ಸೈಟ್ ಮತ್ತು ಚಿನ್ನ ಮಾರಿ ಈ ಚಿತ್ರವನ್ನು ನಿರ್ಮಿಸಿದ್ದಾರಂತೆ. ಹಾಗೆಯೇ, ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಮುಂತಾದವರು ನಟಿಸಿದ್ದಾರೆ.