ನನಗೆ ಕನ್ನಡ ಗೊತ್ತಿಲ್ಲ ಆದರೆ... ಒಂದೇ ಒಂದು ಮಾತಿನಿಂದ ಕನ್ನಡಿಗರ ಮನಸ್ಸು ಗೆದ್ದ ಕೀರ್ತಿ ಸುರೇಶ್! Keerthy Suresh

Keerthy Suresh
Published on

Keerthy Suresh : ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್​, ಸೂರ್ಯ, ವಿಕ್ರಮ್​, ಶಿವಕಾರ್ತಿಕೇಯನ್​,​ ನಾನಿ, ಮಹೇಶ್​ ಬಾಬು ಸೇರಿದಂತೆ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್​ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್​ ನಟನೆಯ ಡಬ್ಬಿಂಗ್​ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.

ಸದ್ಯ ಬಾಲಿವುಡ್​ಗೂ ಕೀರ್ತಿ ಸುರೇಶ್​ ಕಾಲಿಟ್ಟಿದ್ದಾರೆ. ನಟ ವರುಣ್ ಧವನ್​ ನಟನೆಯ ಬೇಬಿ ಜಾನ್​ ಸಿನಿಮಾಗೆ ಕೀರ್ತಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಆಟ್ಲೀ ನಿರ್ದೇಶನ ಮಾಡಿದ್ದಾರೆ. ಇದು ಇಳಯದಳಪತಿ ವಿಜಯ್​ ನಟನೆಯ ಸೂಪರ್​ ಹಿಟ್​ ತಮಿಳು ಸಿನಿಮಾ ಥೇರಿ ರಿಮೇಕ್​.​ ಇದೇ ಡಿ.25ರಂದು ಅಂದರೆ ನಾಳೆ ಈ ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ.

ಸದ್ಯ ಕೀರ್ತಿ ಸುರೇಶ್​ ಮತ್ತು ವರುಣ್​ ಧವನ್​ಗೆ ಸಂಬಂಧಿಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಕೀರ್ತಿ, ವರುಣ್​ ಅವರಿಗೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯನ್ನು ಹೇಳಿಕೊಡುತ್ತಿದ್ದಾರೆ. ಐ ಲವ್​ ಯು ಎಂಬುದನ್ನು ಈ ಮೂರು ಭಾಷೆಗಳಲ್ಲಿ ಕೀರ್ತಿ ಹೇಳಿಕೊಟ್ಟಿದ್ದು,  ಅದನ್ನು ಹೇಳುವಾಗ ವರುಣ್​ ಧವನ್​ ತಡವರಿಸಿದರು.

ಮೂರು ಭಾಷೆಗಳಲ್ಲಿ ಹೇಳಿಕೊಟ್ಟ ಮೇಲೆ ಅಲ್ಲಿ ಕನ್ನಡ ಬರಲೇಬೇಕು. ವರುಣ್​ ಧವನ್​ ಕನ್ನಡದಲ್ಲಿ ಏನೆಂದು ಹೇಳುತ್ತಾರೆ ಎಂದು ಕೇಳಿದಾಗ, ನನಗೆ ಕನ್ನಡ ಗೊತ್ತಿಲ್ಲ ಎಂದ ಕೀರ್ತಿ ಸುರೇಶ್​, ಖಂಡಿತ ಕನ್ನಡ ಕಲಿತು ಹೇಳಿಕೊಡುತ್ತೇನೆ ಎಂದರು. ಕೊನೆಯಲ್ಲಿ ಕನ್ನಡವನ್ನು ಮರೆಯದಿದ್ದಕ್ಕೆ ವರುಣ್​ ಧವನ್​ ಮತ್ತು ಕೀರ್ತಿ ಸುರೇಶ್​ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದೆ.

ಅಂದಹಾಗೆ ಕೀರ್ತಿ ಸುರೇಶ್​ ಅವರು ಹದಿನೈದು ವರ್ಷಗಳ ಡೇಟಿಂಗ್ ನಂತರ, ನಟಿ ಆಂಟೋನಿ ಥಟ್ಟಿಲ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ.12ರಂದು ಹಿಂದು ಸಂಪ್ರದಾಯದಂತೆ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ವಿವಾಹವಾದರು. ಬಳಿಕ ಕ್ರಿಶ್ಚಿಯನ್​ ಸಂಪ್ರದಾಯಂತೆಯೂ ಮದುವೆಯಾದರು. ಕೀರ್ತಿ ಮತ್ತು ಆಂಟೋನಿ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು. ಹೈಸ್ಕೂಲ್ ದಿನಗಳಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಂಟೋನಿ ಕೀರ್ತಿಗಿಂತ ಎರಡು ವರ್ಷ ದೊಡ್ಡವರು. ಕೀರ್ತಿಗೆ ಸದ್ಯ 32 ವರ್ಷ ಮತ್ತು ಆಂಟೋನಿಗೆ 34 ವರ್ಷ. ಕೊಚ್ಚಿ ಮೂಲದ ಆಂಟೋನಿ ದೋಹಾದಲ್ಲಿ ಉದ್ಯಮಿಯಾಗಿದ್ದಾರೆ. ಆಂಟೋನಿ ಕೊಚ್ಚಿ ಮೂಲದ ಆಸ್ಪರೋಸ್ ವಿಂಡೋಸ್ ಸಲ್ಯೂಷನ್ಸ್ ಎಂಬ ಕಂಪನಿಯ ಮಾಲೀಕರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net