ತವರಿನಲ್ಲಿ ‘ಕೆಡಿ’ ಸಂಭ್ರಮ : ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಸಿದ್ಧವಾದ ಕನ್ನಡದ ಬಹುನಿರೀಕ್ಷಿತ ಸಿನಿಮಾ

kd
Published on

ಬೆಂಗಳೂರು : ಈ ವರ್ಷ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಪೈಕಿ ಧ್ರುವ ಸರ್ಜಾ, ಪ್ರೇಮ್ ಕಾಂಬಿನೇಷನ್ ‘ಕೆಡಿ’ ಚಿತ್ರವು ಒಂದು. ಚಿತ್ರತಂಡವು ಜುಲೈ 10ಕ್ಕೆ ಮುಂಬೈ, ಹೈದರಾಬಾದ್, 11ಕ್ಕೆ ಚೆನ್ನೈ, ಕೊಚ್ಚಿಯಲ್ಲಿ ಪ್ರಚಾರ ಕೈಗೊಂಡು ಚಿತ್ರದ ಟೀಸರ್ ಬಿಡುಗಡೆ ಮಾಡಿತು. ಅಂತೆಯೇ ಶನಿವಾರ (ಜು.12) ತವರೂರು ಬೆಂಗಳೂರಿನಲ್ಲಿ ಕನ್ನಡ ಟೀಸರ್ ಬಿಡುಗಡೆ ಮಾಡುವ ಮೂಲಕ ‘ಕೆಡಿ’ ತಂಡ ಸಂಭ್ರಮಿಸಿತು. ಈ ಮಾಸ್ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಮೂರೇ ದಿನದಲ್ಲಿ ಹದಿನೈದು ಲಕ್ಷ ವೀಕ್ಷಣೆ ಕಂಡಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ್, ‘ಪಾತ್ರಗಳ ಪರಿಚಯಿಸುವ ಇಂಟ್ರಡಕ್ಷನ್ ಟೀಸರ್ ಮೂಲಕ ಎಲ್ಲ ಪಾತ್ರಗಳನ್ನು ತೋರಿಸಿದ್ದೇವೆ. ಚಿತ್ರದಲ್ಲಿ ಆ್ಯಕ್ಷನ್ ಜತೆಗೆ ಫ್ಯಾಮಿಲಿ, ಎಮೋಷನ್ಸ್ ಇದೆ. ಧ್ರುವ, ರೀಷ್ಮಾ, ಶಿಲ್ಪಾ ಶೆಟ್ಟಿ ಹಾಗೂ ರವಿಚಂದ್ರನ್ ಈ ತರಹದ ಪಾತ್ರಗಳನ್ನು ಹಿಂದೆಯೂ ಮಾಡಿಲ್ಲ. ಮೂರು ವರ್ಷ ಸಮಯದ ತೆಗೆದುಕೊಂಡು ಪ್ರೇಮ್ ಪಾತ್ರಗಳ ಡಿಸೈನ್ ಮಾಡಿದ್ದಾರೆ. ಇಲ್ಲಿ ಎಲ್ಲರೂ ಮಚ್ಚು ಹಿಡಿದಿದ್ದು, ಅದಕ್ಕೆ ಸತ್ಯವತಿಯೇ ಕಾರಣ. ಅಕ್ಟೋಬರ್‌ಗೆ ‘ಕೆಡಿ’ ತೆರೆ ಮೇಲೆ ಬರಲಿದೆ’ ಎಂದು ಮಾಹಿತಿ ನೀಡಿದರು. ಪ್ರೇಮ್, ‘1970-75ರಲ್ಲಿ ನಡೆದ ನೈಜ ಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ. ‘ಕೆಡಿ’ ಅಂದ್ರೆ ಕಾಳಿದಾಸ. ಈತ ಎಷ್ಟು ಮುಗ್ಧನು, ಅಷ್ಟೇ ಕೋಪಿಷ್ಠ. 70ರ ದಶಕದ ಬೆಂಗಳೂರಿನ ಸೆಟ್ ನಿರ್ಮಿಸಿ, ನೈಜವಾಗಿ ಚಿತ್ರೀಸಿದ್ದೇವೆ. ಸುಮಾರು 160ರಿಂದ 180 ದಿನಗಳವರೆಗೆ ಶೂಟಿಂಗ್ ನಡೆಸಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡರು. ಧ್ರುವ, ‘ಪ್ರೇಮ್ ನಿರ್ದೇಶನದ ಚಿತ್ರಗಳಿಗೆ ಅದ್ದೂರಿತನ ಇರುತ್ತದೆ. ಸಂಗೀತ, ಕಥೆ ಹಾಗೂ ಮೇಕಿಂಗ್‌ಗೆ ಹೆಚ್ಚು ಆದ್ಯತೆ ನೀಡಿದ್ದಾರೆ’ ಎಂದು ಖುಷಿ ಹಂಚಿಕೊಂಡರು. ಇಲ್ಲಿ ಧ್ರುವಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ತೇಹಿ ಕಲಾಬಳಗದಲ್ಲಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ, ಕ್ರಾಂತಿಕುಮಾರ್ ಖಡಕ್ ಸಂಭಾಷಣೆ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net