

ಬೆಂಗಳೂರು: ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿ, ಬಿಡುಗಡೆಗಾಗಿ ಕಾದಿರುವ ಕಾವ್ಯಾ ಶೆಟ್ಟಿ, ಇದೀಗ ಸದ್ದಿಲ್ಲದೆ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ಬದಲಾಗಿದ್ದಾರೆ. ಅರೇ, ಸಿನಿಮಾರಂಗ ತೊರೆದರೇ? ಎಂಬ ಪ್ರಶ್ನೆ ಬರಬಹುದು. ಹಾಗೇನೂ ಇಲ್ಲ. ಹೊಸ ಸಿನಿಮಾವೊಂದರಲ್ಲಿ ಅಂಥದ್ದೊಂದು ಪಾತ್ರವನ್ನು ಮಾಡುತ್ತಿದ್ದಾರವರು.
ಇತ್ತೀಚೆಗಷ್ಟೇ ‘ಕಾಡ’ ಸಿನಿಮಾ ಒಪ್ಪಿ ಶೂಟಿಂಗ್ ಸಹ ಬಹುತೇಕ ಮುಗಿಸಿರುವ ಕಾವ್ಯಾ, ಇನ್ನೂ ಶೀರ್ಷಿಕೆ ಅಂತಿಮವಾಗದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಹೊಸ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಎದುರಾಗುತ್ತಿದ್ದಾರೆ. ಮೊದಲ ಬಾರಿಗೆ ವೇದಾ ಮೆನನ್ ಹೆಸರಿನ ಮಾನವ ಹಕ್ಕುಗಳ ಹೋರಾಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡುವ ಕಾವ್ಯಾ, ‘ನನ್ನ ಮತ್ತು ವಿಜಯ್ ಕಾಂಬಿನೇಷನ್ನ ಎರಡನೇ ಸಿನಿಮಾ ಇದು. ಈ ಮೊದಲು ‘ಇಷ್ಟಕಾಮ್ಯ’ ಚಿತ್ರದಲ್ಲಿ ನಟಿಸಿದ್ದೆವು. ಈ ಚಿತ್ರದಲ್ಲಿ ವಿಜಯ್ ಪೊಲೀಸ್ ಆಗಿದ್ದಾರೆ. ನಾನು ಹೋರಾಟಗಾರ್ತಿಯಾಗಿದ್ದೇನೆ. ಒಂದು ಹಂತದ ಶೂಟಿಂಗ್ ಈಗಾಗಲೇ ಮುಗಿದಿದೆ’ ಎನ್ನುತ್ತಾರೆ.
ಸ್ಯಾಮ್ಯುಲ್ ಟೋನಿ ನಿರ್ದೇಶನದ ಈ ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನುಳಿದಂತೆ, ಜೆಕೆ ಅಭಿನಯದ ‘ಕಾಡ’ ಚಿತ್ರದಲ್ಲೂ ಕಾವ್ಯಾ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದು, ಒಂದಿಷ್ಟು ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.