ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ವಿಮರ್ಶೆ : ಕಲಿಯುಗ ರಾಮನ ಹೀಗೊಂದು ವನವಾಸ

zscsdcasda
Published on

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಕೌಸಲ್ಯಾ ಸುಪ್ರಜಾ ರಾಮ
ನಿರ್ದೇಶನ: ಶಶಾಂಕ್​
ನಿರ್ಮಾಣ: ಶಶಾಂಕ್​ ಸಿನಿಮಾಸ್​ ಮತ್ತು ಕೌರವ ಪ್ರೊಡಕ್ಷನ್ಸ್​
ತಾರಾಗಣ: ಡಾರ್ಲಿಂಗ್​ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್​, ನಾಗಭೂಷಣ, ರಂಗಾಯಣ ರು, ಸುಧಾ ಬೆಳವಾಡಿ, ಅಚ್ಯುತ್​ ಕುಮಾರ್​ ಮುಂತಾದವರು

"ಕೌಸಲ್ಯಾ ಸುಪ್ರಜಾ ರಾಮ' ಅರ್ಥಾತ್​ ಕೌಸಲ್ಯೆಯ ಪುತ್ರ ಸುಪ್ರಜೆ ರಾಮ ಎಂದು. ಕೌಟುಂಬಿಕ ಕಥಾಹಂದರದ ಚಿತ್ರಗಳ ಮೂಲಕ ಗಮನ ಸೆಳೆದವರು ನಿರ್ದೇಶಕ ಶಶಾಂಕ್​. ಈ ಚಿತ್ರದಲ್ಲೂ ಹೆಣ್ಣಿಗೆ ದೇವತೆ ಸ್ಥಾನ ಕೊಟ್ಟು, ಕಟ್ಟುಪಾಡುಗಳಲ್ಲಿ ಕಟ್ಟಿಹಾಕುವ ಪುರುಷ ಪ್ರಧಾನ ಸಮಾಜದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ಆತ ಸಿದ್ದೇಗೌಡ (ರಂಗಾಯಣ ರು), ಹೆಣ್ಣುಮಕ್ಕಳಿರುವುದೇ ಪುರುಷರ ಸೇವೆ ಮಾಡಲು ಎಂದು ನಂಬಿದ ವ್ಯಕ್ತಿ. ಆತನ ಪತ್ನಿ ಕೌಸಲ್ಯ (ಸುಧಾ ಬೆಳವಾಡಿ) ಗಂಡ ಹೇಳಿದಂತೆ ಕೇಳಿಕೊಂಡು, ಬೈಸಿಕೊಂಡು, ಹೊಡೆಸಿಕೊಂಡು, ಆತನ ಅವತಾರಗಳಿಗೆ ಹೊಂದಿಕೊಂಡ ಹೆಣ್ಣುಮಗಳು. ಆ ಜೋಡಿಯ ಮಗ ರಾಮೇಗೌಡ ಅಲಿಯಾಸ್​ ರಾಮ (ಕೃಷ್ಣ). ಬಾಲ್ಯದಿಂದಲೂ ಅಪ್ಪನನ್ನು ನೋಡಿ ಅದೇ ಮನಸ್ಥಿತಿ ರೂಢಿಸಿಕೊಂಡ ಹುಡುಗ. "ಸ್ಕೂಟಿನ ಬುಲೆಟ್​ ಫಾಲೋ ಮಾಡಬಾರದು, ಬುಲೆಟ್​ನ ಸ್ಕೂಟಿ ಫಾಲೋ ಮಾಡಬೇಕು' ಅಂತಿರುವ ಆತ ಶಿವಾನಿಯನ್ನು (ಬೃಂದಾ ) ಪ್ರೀತಿಸತೊಡಗುತ್ತಾನೆ. ಆದರೆ, ಈತನ ಆಟಗಳನ್ನು ನೋಡಿ ಸಾಕಾಗಿ ಆಕೆ ಗುಡ್​ಬೈ ಹೇಳಿಬಿಡುತ್ತಾಳೆ. ಕೆಲವು ತಪ್ಪು ನಿರ್ಧಾರಗಳಿಂದ ಈ ಕಲಿಯುಗದ ರಾಮ ತಾನೇ ವನವಾಸ ಅನುಭವಿಸುವಂತಾಗುತ್ತದೆ. ಅದೇ ಸಮಯದಲ್ಲಿ ನಡೆಯುವ ಟನೆಯೊಂದು ಆತನನ್ನು ಸಂಪೂರ್ಣವಾಗಿ ಬದಲಿಸಿಬಿಡುತ್ತದೆ. ಆಗ ರಾಮನ ಜೀವನಕ್ಕೆ ಮುತ್ತುಲಕ್ಷ್ಮಿ (ಮಿಲನಾ) ಎಂಟ್ರಿಯಾಗುತ್ತಾಳೆ. ಮುಂದೆ? ರಾಮನಿಗೆ ಹೇಗೆ ಜ್ಞಾನೋದಯವಾಗುತ್ತದೆ? ಶಿವಾನಿ ಮತ್ತೆ ವಾಪಸ್ಸಾಗುತ್ತಾಳಾ? ರಾಮ ಮುತ್ತುಲಕ್ಷ್ಮಿ ಮದುವೆಯಾಗುತ್ತಾನಾ? ಸಿನಿಮಾ ನೋಡಿ.

ಅಬ್ಬರಿಸಿ ಬೊಬ್ಬರಿಯುವ ರಾಮ ಕೊನೆಗೆ ಬದುಕು ಬಂದಂತೆ ಸ್ವೀಕರಿಸುವ ರೀತಿ ಬದಲಾಗುವ ಜರ್ನಿಯಲ್ಲಿ ಡಾರ್ಲಿಂಗ್​ ಕೃಷ್ಣ ಗಮನ ಸೆಳೆಯುತ್ತಾರೆ. ಇದು ಅವರ ಬೆಸ್ಟ್​ ಚಿತ್ರಗಳಲ್ಲೊಂದು. ಮೊದರ್ಲಧದಲ್ಲಿ ಅವರಿಗೆ ಸರಿಸಮನಾಗಿ ಶಿವಾನಿ ಪಾತ್ರದಲ್ಲಿ ಬೃಂದಾ ಸಾಥ್​ ನೀಡಿದ್ದರೆ, ದ್ವೀತಿಯಾರ್ಧದಲ್ಲಿ ಮಿಲನಾ ಗತ್ತು, ಗಮ್ಮತ್ತು ನೋಡುವುದೇ ಚಂದ. "ಲವ್​ ಮಾಕ್ಟೇಲ್​' ಸರಣಿಯಿಂದ ನಿಧಿಮಾ ಎಂದು ಪ್ರೇಕ್ಷಕರ ಮನಸ್ಸಿನಲ್ಲಿ ಕುಳಿತಿದ್ದ ಮಿಲನಾ ಇನ್ನು ಮುತ್ತುಲಕ್ಷ್ಮಿಯಾಗಿ ಸೆಟಲ್​ ಆಗಲಿದ್ದಾರೆ. ಅಷ್ಟರ ಮಟ್ಟಿಗೆ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾದುದ್ದಕ್ಕೂ ಸಂತು ಪಾತ್ರದಲ್ಲಿ ನಾಗಭೂಷಣ್​ ನಗಿಸುತ್ತಾರೆ. ಸಿನಿಮಾ ಮುಗಿದ ಬಳಿಕವೂ ರಂಗಾಯಣ ರು ಮತ್ತು ಸುಧಾ ಬೆಳವಾಡಿ ಪಾತ್ರಗಳು ಕಾಡುತ್ತವೆ.

"ಕಳೆದ ಒಂಬತ್ತು ಸಿನಿಮಾಗಳಿಗಿಂತ ಕಥೆ ವಿಷಯದಲ್ಲಿ ಈ ಚಿತ್ರ ಬೆಸ್ಟ್​' ಎಂದು ನಿರ್ದೇಶಕ ಶಶಾಂಕ್​ ಹೇಳಿದ್ದರು. ಸಿನಿಮಾ ನೋಡಿದವರಿಗೆ ಅವರ ಮಾತು ನಿಜವೆನ್ನಿಸುತ್ತದೆ. ಅಷ್ಟರ ಮಟ್ಟಿಗೆ ಅಪರೂಪದ, ಸೂಕ್ಷ$್ಮ ವಿಷಯವೊಂದಕ್ಕೆ ಮನಸ್ಸು ಮುಟ್ಟುವಂತೆ ಸಿನಿಮಾ ರೂಪ ನೀಡಿದ್ದಾರೆ. ಅರ್ಜುನ್​ ಜನ್ಯ ಸಂಗೀತದಲ್ಲಿ ಹಾಡುಗಳು ಚಿತ್ರವನ್ನು ಆಪ್ತವಾಗಿಸಿವೆ, ಅದಕ್ಕೆ ತಕ್ಕಂತೆ ಸುಜ್ಞಾನ್​ ತೆರೆಯನ್ನು ಮತ್ತಷ್ಟು ಚಂದವಾಗಿಸಿದ್ದಾರೆ. ಪ್ರತಿಯೊಬ್ಬರನ್ನೂ ಕಾಡುವ, ಯೋಚನೆಗೀಡು ಮಾಡುವ ಸಿನಿಮಾ "ಕೌಸಲ್ಯಾ ಸುಪ್ರಜಾ ರಾಮ'.

ಸ್ಟಾರ್​: 3.5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net