

ಕತ್ರಿನಾ ಕೈಫ್ ಸದ್ಯ ‘ಫೋನ್ ಭೂತ್’ ಎಂಬ ಹಾರರ್ ಕಾಮಿಡಿ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಗುರ್ವಿುತ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಕತ್ರಿನಾ ಭೂತದ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಆದರೆ, ಭೂತದ ಪಾತ್ರದಲ್ಲಿ ನಟಿಸಿರುವ ಕತ್ರಿನಾಗೆ ನಿಜ ಜೀವನದಲ್ಲಿ ದೆವ್ವ, ಭೂತಗಳು ಅಂದರೆ ಭಯವಂತೆ. ಅವುಗಳನ್ನು ನೋಡುವುದಿರಲಿ, ದೆವ್ವ - ಭೂತಗಳ ಕುರಿತ ಕಥೆಗಳನ್ನು ಕೇಳಲು ಭಯ ಎಂದು ಹೇಳಿಕೊಂಡಿದ್ದಾರೆ.
‘ಬಾಲ್ಯದಲ್ಲಿ ಯಾರಾದರೂ ಭೂತಗಳ ಕುರಿತು ತಮಗಾದ ಅನುಭವಗಳನ್ನು ಹೇಳಿಕೊಂಡಾಗ, ನಾನು ಅವರು ಹೇಳುತ್ತಿದ್ದ ಕಥೆಯನ್ನು ಸಂಪೂರ್ಣವಾಗಿ ನಂಬಿಬಿಡುತ್ತಿದ್ದೆ. ಆದರೆ, ಈಗ ನಾನು ದೆವ್ವದ ಕಥೆಗಳನ್ನು ಕೇಳಲು ಇಷ್ಟಪಡುವುದಿಲ್ಲ. ಅವುಗಳಿಂದ ತುಂಬ ದೂರ’ ಎಂದು ಕತ್ರಿನಾ ಕೈಫ್ ಹೇಳಿದ್ದಾರೆ. ‘ಫೋನ್ ಭೂತ್’ನಲ್ಲಿ ಕತ್ರಿನಾ ಜತೆ ಸಿದ್ಧಾರ್ಥ್ ಚತುರ್ವೆದಿ ಹಾಗೂ ಇಶಾನ್ ಖಟ್ಟರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರ ಇದೇ ನ. 4ರಂದು ಬಿಡುಗಡೆಯಾಗಲಿದೆ.
ಉಳಿದಂತೆ ಕತ್ರಿನಾ ಕಬೀರ್ ಖಾನ್ ನಿರ್ದೇಶಿಸುತ್ತಿರುವ ‘ಟೈಗರ್ 3’ ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ನಾಯಕಿಯಾಗಿ ಹಾಗೂ ಶ್ರೀರಾಮ್ ರಾಘವನ್ ನಿರ್ದೇಶಿಸಲಿರುವ, ತಮಿಳು ನಟ ವಿಜಯ್ ಸೇತುಪತಿ ನಾಯಕನಾಗಿರುವ ‘ಮೆರ್ರಿ ಕ್ರಿಸ್ಮಸ್’ ಚಿತ್ರದಲ್ಲೂ ನಟಿಸಲಿದ್ದಾರೆ. - ಏಜೆನ್ಸೀಸ್