ಹಿಮಾಲಯದಲ್ಲೂ ಟೈಟಾನಿಕ್ ... ಕೇಟ್ ವಿನ್ಸ್‌ಲೆಟ್ ಜೀವನದ ರೋಚಕ ಕಥೆ

Kate - Titanic
Published on

ಒಬ್ಬ ನಟ ಅಥವಾ ನಟಿ ಒಂದು ಪಾತ್ರಕ್ಕೆ ಫೇಮಸ್ ಆಗಿ, ಆ ಪಾತ್ರದಿಂದಲೇ ಜನ ಅವರನ್ನು ಗುರುತಿಸುವುದು ಹೊಸದೇನಲ್ಲ ಬಿಡಿ. ಇದು ಎಲ್ಲಾ ಕಲಾವಿದರ ಜೀವನದಲ್ಲೂ ಒಂದಲ್ಲಾ ಒಂದು ಹಂತದಲ್ಲಿ ಆಗಿರುತ್ತದೆ. ‘ಟೈಟಾನಿಕ್’ ಖ್ಯಾತಿಯ ಕೇಟ್ ವಿನ್‌ಸ್ಲೆಟ್ ಜೀವನದಲ್ಲೂ ಈ ತರಹ ಆಗಿದೆಯಂತೆ ಮತ್ತು ಆಕೆ ಎಲ್ಲೇ ಹೋದರೂ, ಆ ಚಿತ್ರದ ‘ರೋಸ್’ ಪಾತ್ರದಿಂದಲೇ ಈಗಲೂ ಗುರುತಿಸುತ್ತಾರಂತೆ. ತಮ್ಮ ಜೀವನದಲ್ಲಾದ ರೋಚಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಕೇಟ್.

‘‘ಟೈಟಾನಿಕ್’ ಬಿಡುಗಡೆಯಾಗಿ ಕೆಲವು ವರ್ಷಗಳ ನಂತರ ಒಮ್ಮೆ ಭಾರತಕ್ಕೆ ಹೋಗಿದ್ದೆ. ಒಂದು ದಿನ ಹೀಗೆಯೇ, ಹಿಮಾಲಯದ ತಪ್ಪಲಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನೆದುರಿಗೆ ವಯಸ್ಸಾದ ವ್ಯಕ್ತಿಯೊಬ್ಬರು ಬಂದರು. ಅವರಿಗೆ ಸುಮಾರು 85 ವರ್ಷವಿರಬಹುದು. ಒಂದು ಕಣ್ಣು ಸಹ ಕಾಣಿಸುತ್ತಿರಲಿಲ್ಲ. ಅವರು ನನ್ನೆದುರಿಗೆ ಬಂದವರೇ, ‘ನೀವು ‘ಟೈಟಾನಿಕ್’ನವರಲ್ವಾ’ ಎಂದರು. ನನಗೆ ಆಶ್ಚರ್ಯವಾಗಿದ್ದಷ್ಟೇ ಅಲ್ಲ, ಆ ಕ್ಷಣಕ್ಕೆ ನನಗೆ ಅಳು ಬಂದುಬಿಟ್ಟಿತು. ಏಕೆಂದರೆ, ಅಲ್ಲೂ ನನ್ನನ್ನು ಜನರು ಗುರುತು ಹಿಡಿದರಲ್ಲಾ, ಥ್ಯಾಂಕ್ಸ್ ಟು ‘ಟೈಟಾನಿಕ್’’ ಎನ್ನುತ್ತಾರೆ ಕೇಟ್.

‘ಟೈಟಾನಿಕ್’ ಚಿತ್ರದ ಬಗ್ಗೆ ಕೇಟ್‌ಗೆ ಬಹಳ ಹೆಮ್ಮೆ ಇದೆಯಂತೆ. ‘ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಆ ಚಿತ್ರದ ಬಗ್ಗೆ ಬಹಳ ಹೆಮ್ಮೆ ಇದೆ. ಆ ಚಿತ್ರ ನನಗೆ ಅದೆಷ್ಟು ಯಶಸ್ಸು ಮತ್ತು ಜನಪ್ರಿಯತೆ ಕೊಟ್ಟಿತೋ, ಕೆಲವೊಮ್ಮೆ ಸಮಸ್ಯೆಯೂ ಆಯಿತು. ಆ ಚಿತ್ರದ ನಂತರ ಇದ್ದಕ್ಕಿದ್ದಂತೆ ಜನ ನನ್ನನ್ನು ಗಮನಿಸುವುದಕ್ಕೆ, ನನ್ನ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದರು. ಬಹಳಷ್ಟು ಬಾರಿ ನನ್ನ ಬಗ್ಗೆ ಕೇಳಿ ಬಂದ ಸುದ್ದಿಗಳು ಸುಳ್ಳಾಗಿದ್ದವು. ಇದರಿಂದ ನಾನು ಬಹಳ ನೊಂದಿದ್ದೆ. ಆದರೂ ‘ಟೈಟಾನಿಕ್’ ನನ್ನ ಜೀವನದಲ್ಲಿ ಮರೆಯಲಾಗದಂಥ ಒಂದು ಚಿತ್ರ’ ಎಂದಿದ್ದಾರೆ ಕೇಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net