ಗ್ರಾಫಿಕ್ಸ್​ನಲ್ಲೇ ಕಾಶ್ಮೀರ, ಲಾಕ್​ಡೌನ್ ತೆರವಾಗದಿದ್ದರೆ ರೇಮೊ ತಂಡದಿಂದ ಹೊಸ ಪ್ರಯತ್ನ

page 10 2
Published on

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ‘ರೆಮೋ’ ಸಿನಿಮಾ ಕೈಗೆತ್ತಿಕೊಂಡು, ಲಾಕ್​ಡೌನ್​ಗೂ ಮೊದಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಇನ್ನೇನ್ನಿದ್ದರೂ ಎರಡು ಹಾಡು ಒಂದು ಸಾಹಸ ಸನ್ನಿವೇಶದ ಚಿತ್ರೀಕರಣವಷ್ಟೇ ಬಾಕಿ ಉಳಿಸಿದ್ದಾರೆ. ಇನ್ನೇನು ಲಾಕ್ಡೌನ್ ತೆರವಾಗಿ, ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆ ಕ್ಯಾಮರಾಕ್ಕೆ ಚಾಲನೆ ನೀಡಲಿದ್ದಾರೆ. ಒಂದು ವೇಳೆ ಅಂದುಕೊಂಡ ಲೊಕೇಶನ್​ಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಿಲ್ಲ ಅಂದರೆ, ಗ್ರಾಫಿಕ್ಸ್ ಮೊರೆ ಹೋಗಲಿದ್ದಾರಂತೆ ನಿರ್ದೇಶಕರು.

ಹೌದು, ಇಶಾನ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆ ಯಲ್ಲಿರುವ ‘ರೆಮೋ’, ಈಗಾಗಲೇ ಡಬ್ಬಿಂಗ್ ಸಹ ಮುಗಿಸಿಕೊಂಡಿದೆ. ಉಳಿದ ಎರಡು ಹಾಡುಗಳಲ್ಲಿ ಒಂದನ್ನು ಕಾಶ್ಮೀರ, ಮತ್ತೊಂದನ್ನು ಬೆಂಗಳೂರಿ ನಲ್ಲಿ ಸೆರೆ ಹಿಡಿಯುವ ಉದ್ದೇಶ ನಿರ್ದೇಶಕರದ್ದು. ಜಮು-ಕಾಶ್ಮೀರ ಮತ್ತು ರಾಜಸ್ತಾನದ ಹಲವು ಭಾಗಗಳಲ್ಲಿ ಲೊಕೇಶನ್​ಗಳನ್ನು ಈ ಮೊದಲೇ ಪವನ್ ನೋಡಿಬಂದಿದ್ದಾರಂತೆ. ಕರೊನಾ ಲಾಕ್​ಡೌನ್ ತೆರವಾಗು ತ್ತಿದ್ದಂತೆ ಶೂಟಿಂಗ್​ಗೆ ತೆರಳಲಿದ್ದಾರಂತೆ. ಒಂದು ಪಕ್ಷ ಅಲ್ಲಿ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗದಿದ್ದರೆ, ಗ್ರೀನ್ ಮ್ಯಾಟ್​ನಲ್ಲಿಯೇ ಕಾಶ್ಮೀರವನ್ನು ಸೃಷ್ಟಿಸಲಿದ್ದಾರಂತೆ ಪವನ್.

‘ಈಗಾಗಲೇ ಆ ಬಗ್ಗೆ ಪ್ಲಾನ್ ನಡೆಯುತ್ತಿದೆ. ಒಂದು ವೇಳೆ ಚಿತ್ರೀಕರಣಕ್ಕೆ ಅವಕಾಶ ಸಿಗಲಿಲ್ಲ ಅಂದರೆ, ಗ್ರಾಫಿಕ್ಸ್ ಮೊರೆ ಹೋಗಲಿದ್ದೇವೆ. ಟೀಮ್ ಜತೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಡ್ಯುಯೆಟ್ ಹಾಡಿಗೆ ತಕ್ಕಂತೆ ಕಾಶ್ಮೀರವನ್ನು ಸೃಷ್ಟಿಸಲಿದ್ದೇವೆ. ಅಥವಾ ಬೇರೆ ಥರದ ಥೀಮ್ ಸಿಕ್ಕರೆ ಅದನ್ನೂ ಟ್ರೖೆ ಮಾಡುತ್ತೇವೆ’ ಎನ್ನುತ್ತಾರೆ ಪವನ್. ಇನ್ನು ಮೇ ಕೊನೇ ವಾರದಲ್ಲಿ ಚಿತ್ರಮಂದಿರಕ್ಕೆ ಬರುವ ಪ್ಲಾನ್ ಹಾಕಿತ್ತು ‘ರೆಮೋ’ ಚಿತ್ರತಂಡ. ಆದರೆ, ಸದ್ಯಕ್ಕೆ ಅದ್ಯಾವುದೂ ಸಾಧ್ಯವಿಲ್ಲ ಎಂಬುದು ಚಿತ್ರತಂಡಕ್ಕೂ ಗೊತ್ತಾಗಿದ್ದು, ರಿಲೀಸ್ ಯಾವಾಗ ಎಂಬುದನ್ನು ತಲೆಯಿಂದಲೇ ತೆಗೆದು ಹಾಕಿದ್ದಾರಂತೆ. ದೊಡ್ಡ ದೊಡ್ಡ ಸಿನಿಮಾಗಳು ಸಾಕಷ್ಟಿರಿವುದರಿಂದ ಅವುಗಳ ಬಿಡುಗಡೆ ಬಳಿಕ ನಿರ್ಧಾರ ಕೈಗೊಳ್ಳುತ್ತಾರಂತೆ ಪವನ್. ಸಿ.ಆರ್ ಮನೋಹರ್ ನಿರ್ವಣದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net