

ಬೆಂಗಳೂರು: ಕನ್ನಡದ ಹೆಮ್ಮೆಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಇಂದು (ಡಿ. 3) ಹುಟ್ಟುಹಬ್ಬದ ಸಂಭ್ರಮ. 70 ವರ್ಷ ಪೂರೈಸಿ 71ನೇ ವರ್ಷಕ್ಕೆ ಕಾಲಿಟ್ಟಿರುವ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ಅವರ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು, ರೋಮ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯಾ ವಿಭಾಗಕ್ಕೆ ಮತ್ತು ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗುವ ಮೂಲಕ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ಜಯಂತ ಕಾಯ್ಕಿಣಿ ಅವರ ‘ಹಾಲಿನ ಮೀಸೆ’ ಎಂಬ ಜನಪ್ರಿಯ ಕಥೆಯನ್ನು ಆಧರಿಸಿದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವನ್ನು ಕಳೆದ ವರ್ಷವೇ ನಿರ್ದೇಶಿಸಿದ್ದರು ಗಿರೀಶ್ ಕಾಸರವಳ್ಳಿ. ಈ ಚಿತ್ರವೇನೋ ಮುಗಿಯಿತು. ಮುಂದೇನು ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಸದ್ಯಕ್ಕೆ ಕಾಸರವಳ್ಳಿ ಅವರು ಏನೂ ಯೋಚಿಸಿಲ್ಲವಂತೆ. ‘ಎರಡು ವರ್ಷಗಳಿಂದ ನಿರ್ವಪಕರೊಬ್ಬರು ಚಿತ್ರ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಕಷ್ಟವಿದೆ. ಮುಂದಿನ ವರ್ಷ ನೋಡಿಕೊಂಡು ಹೆಜ್ಜೆ ಇಡೋಣ ಅಂತ ಹೇಳಿದ್ದೇನೆ. ನಿರ್ವಪಕರು ಸಿಕ್ಕರು ಎಂದು ಅವರಿಂದ 50-60 ಲಕ್ಷ ಖರ್ಚು ಮಾಡಿಸಿ, ದುಡ್ಡು ಹಾಳು ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಹಾಗಾಗಿ ಇನ್ನೂ ಸ್ವಲ್ಪ ದಿನ ಕಾಯೋಣ ಎಂದು ಹೇಳಿದ್ದೇನೆ’ ಎನ್ನುತ್ತಾರೆ ಗಿರೀಶ್ ಕಾಸರವಳ್ಳಿ.
ಜನರಿಗೆ ತಲುಪಿಸೋದು ಮುಖ್ಯ: ‘ನನಗೆ ಚಿತ್ರ ಮಾಡಿ ಅದನ್ನು ಬರೀ ಚಿತ್ರೋತ್ಸವಗಳಿಗೆ ಕಳಿಸುವುದಕ್ಕೆ ಇಷ್ಟವಿಲ್ಲ. ಅದನ್ನು ಬಿಡುಗಡೆ ಮಾಡಿ, ಜನರಿಗೂ ಮುಟ್ಟಿಸಬೇಕು. ಒಂದು ಚಿತ್ರವನ್ನು ಜನ ನೋಡಲಿಲ್ಲ ಎಂದರೆ ಅದು ಬೇರೆ. ಆದರೆ, ನಾವೇ ಜನರಿಗೆ ತಲುಪಿಸದಿದ್ದರೆ ಹೇಗೆ? ಸದ್ಯದ ಪರಿಸ್ಥಿತಿಯಲ್ಲಿ ಚಿತ್ರ ಮಾಡಿದರೆ, ಅದನ್ನು ಜನರಿಗೆ ಮುಟ್ಟಿಸುವುದು ಹೇಗೆ ಎಂಬ ಯೋಚನೆಯೇ ಹೆಚ್ಚು. ಮೇಲಾಗಿ ಯಾವ ಕಥೆಯೂ ಇನ್ನೂ ಅಂತಿಮವಾಗಿಲ್ಲ. ಕಥೆ ಅಂತಿಮವಾದ ನಂತರವಷ್ಟೇ ಚಿತ್ರ ಮಾಡುವ ಯೋಚನೆ’ ಎಂದು ಹೇಳುತ್ತಾರೆ ಅವರು.