

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದೆ. ಶೂಟಿಂಗ್ ವಿಚಾರದಲ್ಲಿಯೂ ಸಿನಿಮಾ ಅಷ್ಟೇ ಅದ್ದೂರಿಯಾಗಿಯೇ ಮೂಡಿಬರುತ್ತಿದೆ. ಇದೀಗ ಇದೇ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ ನಟಿ ಕಾರುಣ್ಯಾ ರಾಮ್ ಅವರದ್ದಿಲ್ಲಿ ಅತೀ ಶ್ರೀಮಂತ ಮನೆತನದ ಹುಡುಗಿಯ ಪಾತ್ರ. ಇಶಾನ್ ಮತ್ತು ಆಶಿಕಾ ರಂಗನಾಥ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ರಾಕ್ಸ್ಟಾರ್ವೊಬ್ಬನ ಜೀವನದ ಕಥೆಯನ್ನು ತೆರೆದಿಡಲಿದೆ. ಕಮರ್ಷಿಯಲ್ ಅಂಶಗಳನ್ನು ಬೆರೆಸಿಕೊಂಡೇ ಕಥೆ ಸಿದ್ಧಮಾಡಿರುವ ನಿರ್ದೇಶಕ ಪವನ್, ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿಸುವ ಹಂತದಲ್ಲಿದ್ದಾರೆ.
ಇದೀಗ ತಂಡ ಸೇರಿಕೊಳ್ಳಲಿರುವ ಕಾರುಣ್ಯಾ ತಮ್ಮ ಪಾತ್ರದ ಬಗ್ಗೆ ವಿವರಿಸಿದ್ದಾರೆ. ‘ಚಿತ್ರದಲ್ಲಿ ನನ್ನದು ತುಂಬ ವಿಶೇಷವಾದ, ಚಿತ್ರಕ್ಕೆ ಮಹತ್ವದ ತಿರುವು ನೀಡುವ ಪಾತ್ರ. ಕಳೆದ ವರ್ಷವೇ ಎರಡು ದಿನ ಶೂಟಿಂಗ್ನಲ್ಲಿ ಭಾಗವಹಿಸಿದ್ದೆ. ಅದಾದ ಬಳಿಕ ಕರೊನಾದಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಚಿತ್ರೀಕರಣ ಶುರುವಾಗಿದೆ’ ಎನ್ನುತ್ತಾರವರು. ಇತ್ತ ಕಾರುಣ್ಯಾ ಬಿಟ್ಟುಕೊಡದ ಪಾತ್ರದ ಸುಳಿವನ್ನು ನಿರ್ದೇಶಕರೇ ವಿವರಿಸಿದ್ದಾರೆ. ‘ಆಗರ್ಭ ಶ್ರೀಮಂತನ ಮಗಳ ಪಾತ್ರದಲ್ಲಿ ಕಾರುಣ್ಯಾ ತುಂಬ ಮಾಡರ್ನ್ ಲುಕ್ನಲ್ಲಿ ಸಿನಿಮಾದಲ್ಲಿ ಇರಲಿದ್ದಾರೆ’ ಎಂದು ಗುಟ್ಟು ಬಿಟ್ಟುಕೊಟ್ಟರು ಪವನ್.
ಇನ್ನು ಬೆಂಗಳೂರಿನ ಹೊರವಲಯದಲ್ಲಿ ಚಿತ್ರದ ಶೀರ್ಷಿಕೆ ಗೀತೆಗಾಗಿ ಅದ್ದೂರಿ ಸೆಟ್ ಹಾಕಲಾಗಿದ್ದು, ಈಗಾಗಲೇ ಚಿತ್ರೀಕರಣವೂ ಶುರುವಾಗಿದೆ. ಬರೋಬ್ಬರಿ ಒಂದೂವರೆ ಕೋಟಿ ವೆಚ್ಚದಲ್ಲಿ ಒಟ್ಟು ಐದಾರು ದಿನಗಳ ಕಾಲ ಈ ಹಾಡಿನ ಶೂಟಿಂಗ್ ನಡೆಯಲಿದೆ. 1 ಸಾವಿರ ಮಂದಿಗೂ ಅಧಿಕ ಜೂನಿಯರ್ ಕಲಾವಿದರು ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ. ‘ಬೆಂಗಳೂರಿನ ಶೂಟಿಂಗ್ ಮುಗಿದ ಬಳಿಕ ಲೇ ಲದಾಕ್ನಲ್ಲಿಯೂ ಒಂದಷ್ಟು ಭಾಗದ ಚಿತ್ರೀಕರಣವಿದೆ. ಅದು ಮುಗಿಯುತ್ತಿದ್ದಂತೆ ಚಿತ್ರೀಕರಣ ಪೂರ್ಣ. ಏಪ್ರಿಲ್ ವೇಳೆಗೆ ಕನ್ನಡದ ಜತೆಗೆ ತಮಿಳು ಮತ್ತು ತೆಲುಗಿನಲ್ಲಿಯೂ ಈ ಸಿನಿಮಾ ತೆರೆಗೆ ಬರಲಿದೆ’ ಎನ್ನುತ್ತಾರೆ ಪವನ್. ಅಂದಹಾಗೆ ಈ ಚಿತ್ರಕ್ಕೆ ಸಿ.ಆರ್. ಮನೋಹರ್ ನಿರ್ಮಾಪಕರಾಗಿದ್ದಾರೆ.
ಇನ್ನೇನು ಶೀಘ್ರದಲ್ಲಿ ‘ಪೆಟ್ರೋಮ್ಯಾಕ್ಸ್’ ಡಬ್ಬಿಂಗ್ ಶುರುವಾಗಲಿದೆ. ಅದರ ಜತೆಗೆ ಹಲವು ಸಿನಿಮಾ ಆಫರ್ಗಳು ಬಂದಿವೆ. ಸಣ್ಣಪುಟ್ಟ ಪಾತ್ರದ ಬದಲು, ದೊಡ್ಡ ಸಿನಿಮಾಗಳಲ್ಲಿಯೇ, ಮಹತ್ವದ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳಲಿದ್ದೇನೆ.
| ಕಾರುಣ್ಯಾ ರಾಮ್ ನಟಿ