

ಬೆಂಗಳೂರು: ಕರ್ನಾಟಕ ಲಾಕ್ಡೌನ್ ಆಗಿದೆ. ಆದರೆ ಹಲವರಿಗೆ ಇದೆಲ್ಲ ಅರ್ಥವೇ ಆಗುತ್ತಿಲ್ಲ. ನಾಳೆಯ ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಚಿಂತೆ ಒಂದಷ್ಟು ಜನರಿಗೆ..ಮತ್ತೊಂದಷ್ಟು ಮಂದಿಗೆ, ನಾವೊಬ್ಬರು ರಸ್ತೆಗಿಳಿದರೆ ಏನಾಗುತ್ತದೆ ಎಂಬ ನಿಷ್ಕಾಳಜಿ. ಒಟ್ಟಿನಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳ ಜನರು ಲಾಕ್ಡೌನ್ ಮಧ್ಯೆಯೂ ರಸ್ತೆಗಿಳಿಯುತ್ತಿದ್ದಾರೆ.
ಸಮಾಧಾನವಾಗಿ ಹೇಳಿದರೂ ಕೇಳದೆ ಹೀಗೆ ರೋಡಿಗೆ ಇಳಿಯುತ್ತಿರುವವರನ್ನು ನೋಡಿ ಪೊಲೀಸರೂ ತಾಳ್ಮೆ ಕಳೆದುಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳದೆ ರಸ್ತೆಯಲ್ಲಿ ಓಡಾಡುತ್ತಿರುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ರಾಜ್ಯ ಪೊಲೀಸರು ಲಾಠಿಯಿಂದ ಹೊಡೆದು ಮನೆಗೆ ಕಳಿಸುತ್ತಿರುವ ವಿಡಿಯೋಗಳು ಹಲವೆಡೆಯಿಂದ ವೈರಲ್ ಆಗಿವೆ.
ಹೀಗಿರುವಾಗ ಸ್ಯಾಂಡಲ್ ವುಡ್ ನಟ, ಮುಂಗಾರುಮಳೆ ಗಣೇಶ್ ಅವರು ಸಖತ್ ಪಂಚಿಂಗ್ ಟ್ವೀಟ್ ಮಾಡಿ, ಜನರಿಗೆ ತಿಳಿವಳಿಕೆ ಹೇಳಿದ್ದಾರೆ.
ಕರ್ನಾಟಕ ಲಾಕ್ಡೌನ್ ಆಗಿದೆ. ಅದನ್ನು ಅರ್ಥ ಮಾಡಿಕೊಳ್ಳಿ. ಕರ್ನಾಟಕ ಪೊಲೀಸ್ ಟಾಸ್ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲರೂ ಮನೆಯೊಳಗೆ ಇದ್ದರೆ ಕ್ಷೇಮ ಎಂದು ಟ್ವಿಟರ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಹಾಗೇ, ಅವರೆಲ್ಲರೂ ನಮಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಅದನ್ನು ನಾವು ಅರ್ಥ ಮಾಡಿಕೊಂಡು ಜವಾಬ್ದಾರಿಯುತವಾಗಿ ವರ್ತಿಸೋಣ. ಮನೆಯಲ್ಲೇ ಸುರಕ್ಷಿತರಾಗಿರೋಣ ಎಂದಿದ್ದಾರೆ.
ಗಣೇಶ್ ಅವರ ಟ್ವೀಟ್ಗೆ ಅನೇಕರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.