ಪಾಕಿಸ್ತಾನದಲ್ಲಿನ ರಿಷಿ ಕಪೂರ್ ಪೂರ್ವಜರ ಹವೇಲಿಗೆ ಎದುರಾಯ್ತು ಕಂಟಕ; ಭೂತ ಪ್ರೇತದ ವದಂತಿ!

kapoor haveli
Published on

ಪಾಕಿಸ್ತಾನದ ಪೇಶಾವರದಲ್ಲಿನ ಕಪೂರ್ ಖಾಂದಾನ್​ನ ಆಸ್ತಿಗೆ ಇದೀಗ ಕಂಟಕ ಎದುರಾಗಿದೆ. ಬಂಗಲೆಯಲ್ಲಿ ಭೂತ, ಪ್ರೇತ ಇದೆ ಎಂಬ ವದಂತಿ ಹರಿದಾಡುತ್ತಿದ್ದು, ಸ್ಥಳೀಯರು ಭಯದಲ್ಲಿಯೇ ಆ ಭಾಗದಲ್ಲಿ ನೆಲೆಸಿದ್ದಾರೆ. ಜತೆಗೆ ಶೀಘ್ರದಲ್ಲಿ ಈ ಹಳೇ ಬಂಗಲೆಯನ್ನು ನೆಲಸಮ ಮಾಡುವ ಬಗ್ಗೆಯೂ ಮಾತುಗಳು ಕೇಳಿಬಂದಿವೆ.

ಹೌದು, ಪೇಶಾವರದ ಹೃದಯ ಭಾಗದಲ್ಲಿರುವ ಕಪೂರ್​ ಹವೇಲಿಯನ್ನು ಈಗಿನ ಮಾಲೀಕ ನೆಲಸಮ ಮಾಡಿ, ಅದೇ ಸ್ಥಳದಲ್ಲಿ ಭವ್ಯವಾದ ಕಮರ್ಷಿಯಲ್​ ಕಾಂಪ್ಲೆಕ್ಸ್ ನಿರ್ಮಿಸುವ ಬಗ್ಗೆ ನಿರ್ಧರಿಸಿದ್ದಾರೆ. ಆದರೆ, ಆ ನಿರ್ಧಾರಕ್ಕೆ ಪಾಕಿಸ್ತಾನ ಸರ್ಕಾರ ಮಾತ್ರ ತಕರಾರು ತೆಗೆದಿದ್ದು, 2018ರಲ್ಲಿಯೇ ಕಪೂರ್​ ಹವೇಲಿ ಕಟ್ಟಡವನ್ನು ಮ್ಯೂಸಿಯಂ ಮಾಡುವ ಬಗ್ಗೆ ತೀರ್ಮಾನಿಸಿತ್ತು.

ಸ್ವತಃ ಮ್ಯೂಸಿಯಂ ಮಾಡುವಂತೆ ಇತ್ತೀಚೆಗೆ ನಿಧನರಾದ ರಿಷಿ ಕಪೂರ್​ ಪಾಕಿಸ್ತಾನದ ವಿದೇಶಾಂಗ ಸಚಿವರ ಬಳಿ ಕೋರಿದ್ದರು. ಅದರಂತೆ ಪಾಕ್​ ಸರ್ಕಾರವೂ ಪಾರಂಪರಿಕ ಕಟ್ಟಡ ಸ್ಥಾನಮಾನ ನೀಡಿ ಅದನ್ನು ರಕ್ಷಿಸುವ ಭರವಸೆ ನೀಡಿತ್ತು. ಇದೀಗ ಕಟ್ಟಡ ಮಾಲೀಕ ಮತ್ತೆ ತಗಾದೆ ತೆಗೆದಿದ್ದು, ಕಟ್ಟಡ ನೆಲಸಮಕ್ಕೆ ಮುಂದಾಗಿದ್ದಾರೆ.

ಹೀಗಿರುವಾಗಲೇ ಇದೇ ಪುರಾತನ ಬಂಗಲೆಯಲ್ಲಿ ಭೂತ ಪ್ರೇತ ಇದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಜತೆಗೆ ಕಟ್ಟಡದ ಸ್ಥಿತಿಯೂ ಹಾಳಾಗಿದೆ. ಮಳೆ ಗಾಳಿಗೆ ಬೀಳುವ ಸಾಧ್ಯತೆಗಳಿವೆ. ಆದಷ್ಟು ಬೇಗ ತೆರವುಗೊಳಿಸಿ ಎಂದು ಕೋರಿದ್ದಾರೆ.

ಪೇಶಾವರದ ಬಂಗಾರದ ಅಂಗಡಿ ಮಾಲೀಕ ಹಜಿ ಮಹಮ್ಮದ್​ ಇಸ್ರಾರ್​ ಬಂಗಲೆಯನ್ನು ಹಲವು ವರ್ಷಗಳ ಹಿಂದೆಯೇ ಖರೀದಿಸಿದ್ದರು. ಮೂರ್ನಾಲ್ಕು ಬಾರಿ ಡೆಮಾಲಿಷನ್​ಗೂ ಮುಂದಾಗಿದ್ದರು. ಆಗ ಸ್ಥಳೀಯ ಪ್ರಾಚ್ಯವಸ್ತು ಇಲಾಖೆ ಪೊಲೀಸ್​ಗೆ ದೂರು ನೀಡಿ ಅದನ್ನು ತಡೆದಿತ್ತು. ಇದೀಗ ಮತ್ತೆ ಡೆಮಾಲಿಷನ್ ವಿಚಾರ ಭುಗಿಲೆದ್ದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net