‘ಕಾಂತಾರ 1’ ಆಸ್ಕರ್ ಕನಸು : ಪ್ರತಿಷ್ಠಿತ ಪ್ರಶಸ್ತಿಗಾಗಿ ಸ್ಪರ್ಧೆ ನಡೆಸಲಿದೆ ಕನ್ನಡದ ಬಹುನಿರೀಕ್ಷಿತ ಸಿನಿಮಾ

kanthara 1
Published on

ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಚಿತ್ರದ ದೊಡ್ಡ ಯಶಸ್ಸಿನ ಬಳಿಕ ಅವರು ‘ಕಾಂತಾರ-1’ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಈಗಾಗಲೇ ಕುಂದಾಪುರ ಸುತ್ತಮುತ್ತ ಅದ್ದೂರಿ ಸೆಟ್ ನಿರ್ಮಿಸಿ, ಬಹುವೆಚ್ಚದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರೀಕರಣ ಅಂತಿಮ ಘಟಕ್ಕೆ ತಲುಪಿದ್ದು, ಇದೇ ಅ.2ಕ್ಕೆ ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಮಧ್ಯೆ, ‘ಕಾಂತಾರ-1’ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕಾರಣಕ್ಕಾಗಿ ಇಂಗ್ಲೀಷ್‌ನಲ್ಲೂ ಮೂಡಿಬರಲಿದ್ದು, ಈ ಮೂಲಕ ಪ್ಯಾನ್ ವರ್ಲ್ಡ್ ಸದ್ದು ಮಾಡಲು ಮುಂದಾಗುತ್ತಿದೆ. ಇನ್ನು ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಇದರಲ್ಲಿ ಸಿನಿಮಾ ಕ್ಷೇತ್ರದಲ್ಲಿ ನೀಡುವ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಹೌದು, ‘ಕಾಂತಾರ-1’ ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧೆ ಮಾಡಲಿದೆ ಎಂದು ನಿರ್ಮಾಪಕ, ಹೊಂಬಾಳೆ ಫಿಲಂಸ್‌ನ ಸಹ-ಸಂಸ್ಥಾಪಕ ಚಲುವೇಗೌಡ ಘೋಷಿಸಿದ್ದಾರೆ. ಇತ್ತೀಚೆಗೆ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವಾಲಯದಿಂದ ಮುಂಬೈನಲ್ಲಿ ಆಯೋಜಿಸಿರುವ ‘ವರ್ಲ್ಡ್ ಆಡಿಯೋ ವಿಷ್ಯುವಲ್ ಆ್ಯಂಡ್ ಎಂಟರ್‌ಟೈನ್‌ಮೆಂಟ್’ (ವೇವ್ಸ್) ಶೃಂಗಸಭೆಯ ಪ್ರಮುಖ ವಿಚಾರ ಸಂಕಿರಣದಲ್ಲಿ ಅವರು ಭಾಗವಹಿಸಿ, ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ‘‘ಕಾಂತಾರ-1’ ಚಿತ್ರವನ್ನು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇದು ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮಹತ್ವದ ಹೆಜ್ಜೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆಸ್ಕರ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಹಾಗೂ ಪ್ರಚಾರ ಮಾಡುವ ಪ್ರಕ್ರಿಯೆಗಳ ಬಗ್ಗೆ ಭಾರತದಲ್ಲಿ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆಯಿದೆ. ಇಂತಹ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಿದರೆ, ಹೆಚ್ಚಿನ ಭಾರತೀಯ ಸಿನಿಮಾ ನಿರ್ಮಾಪಕರಿಗೆ ಜಾಗತಿಕವಾಗಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದ್ದಾರೆ. ಗೋಷ್ಠಿಯಲ್ಲಿ ತೆಲುಗಿನ ‘ಆರ್‌ಆರ್‌ಆರ್’ ಚಿತ್ರದ ಸಂಕಲನಕಾರ ಎ.ಶ್ರೀಕರ್ ಪ್ರಸಾದ್ ಹಾಗೂ ಆಸ್ಕರ್ ಸಮಿತಿ ಸದಸ್ಯ ಉಜ್ವಲ್ ನಿರ್ಗುಡ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net