

ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ-1’ ಚಿತ್ರಕ್ಕೆ ಇಡೀ ಭಾರತೀಯ ಚಿತ್ರರಂಗವೇ ನಿರೀಕ್ಷಿಸುತ್ತಿದೆ. ಕುಂದಾಪುರ ಸುತ್ತಮುತ್ತ ಅದ್ದೂರಿ ಸೆಟ್ ನಿರ್ಮಿಸಿ, ಚಿತ್ರದ ಶೂಟಿಂಗ್ ನಡೆಸಲಾಗುತ್ತಿದೆ. ಈಗಾಗಲೇ ಶೂಟಿಂಗ್ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇದೇ ವರ್ಷದ ಅಕ್ಟೋಬರ್ 2ರಂದು ಚಿತ್ರ ತೆರೆಗೆ ಬರಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ. ಆದರೆ, ಈ ಮಧ್ಯೆ ಚಿತ್ರದ ರಿಲೀಸ್ ದಿನಾಂಕ ಮುಂದೂಡುವ ಸಾಧ್ಯತೆಯಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಬಹುನಿರೀಕ್ಷಿತ ಹಾಗೂ ತಾಂತ್ರಿಕ ಸಶಕ್ತವಾಗಿ ಮೂಡಿಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ವಿಳಂಬವಾಗಲಿವೆ. ಹೀಗಾಗಿ ‘ಕಾಂತಾರ-1’ ಕೂಡ ಮುಂದೂಡುವ ಸಾಧ್ಯತೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಸುದ್ದಿ ಸಹಜವಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಇದು ಸುಳ್ಳು ಎಂದು ‘ಕಾಂತಾರ’ ತಂಡವೇ ಉತ್ತರ ನೀಡಿದೆ. ಅ.2ಕ್ಕೆ ಸಿನಿಮಾ ರಿಲೀಸ್ ಪಕ್ಕಾ ಎಂದು ಮತ್ತೊಮ್ಮೆ ಘೋಷಿಸಿದೆ. ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಚಿತ್ರತಂಡ, ‘ಕಾಂತಾರ’ ಸಿನಿಮಾ ಮುಂದೂಡಲಾಗುತ್ತಾ ಎಂಬ ಅಭಿಮಾನಿ ಪ್ರಶ್ನೆಗೆ, ‘ಇಲ್ಲ, ಇದೇ ಅ.2ರಂದೇ ಸಿನಿಮಾ ರಿಲೀಸ್ ಆಗಲಿದೆ ಎಂಬ ಉತ್ತರ ನೀಡಿರುವ ವಿಡಿಯೋ ಹಂಚಿಕೊಂಡಿದೆ. ಈ ಮೂಲಕ ಎಲ್ಲ ಗಾಳಿಸುದ್ದಿಗೆ ತೆರೆ ಎಳೆಯಲಾಗಿದೆ. ಹೊಂಬಾಳೆ ಫಿಲ್ಮ್ ನಿರ್ಮಾಣದ ಈ ಚಿತ್ರವು ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಇಂಗ್ಲೀಷ್ ಹಾಗೂ ತಮಿಳಿನಲ್ಲಿ ಮೂಡಿಬರಲಿದೆ.
ಅವಕಾಶ ಸಿಕ್ಕರೆ ನಟಿಸುವೆ: ‘ಕಾಂತಾರ-1’ ಚಿತ್ರದಲ್ಲಿ ಕನ್ನಡ ಸೇರಿ ಪರಭಾಷೆ ಹಾಗೂ ವಿದೇಶಿ ಕಲಾವಿದರು ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಲಯಾಳಂ ನಟ ಮೋಹನ್ ಲಾಲ್ ‘ಕಾಂತಾರ’ದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಮೋಹನ್ ಲಾಲ್ ಈ ಪ್ರಶ್ನೆಗೆ ಉತ್ತರಿಸಿ, ‘ನಾನು ಕೆಟ್ಟ ನಟನಂತೂ ಅಲ್ಲ. ಹಾಗಾಗಿ,‘ಕಾಂತಾರ’ದಲ್ಲಿ ನನಗೆ ಅವಕಾಶ ಸಿಕ್ಕರೆ ಖಂಡಿತವಾಗಿ ನಟಿಸುತ್ತೇನೆ. ಈ ವಿಚಾರವನ್ನು ರಿಷಬ್ ಗಮನಕ್ಕೆ ತನ್ನಿ’ ಎಂದು ನಗೆ ಬೀರಿದ್ದಾರೆ. ಆದರೆ, ನಟಿಸುವ ಬಗ್ಗೆ ಕನ್ಫರ್ಮ್ ಮಾಡಲಿಲ್ಲ.