

ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವು ದಿನಕ್ಕೊಂದು ಹೊಸ ಹೆಗ್ಗಳಿಕೆಗೆ ಪಾತ್ರವಾಗುವುದರ ಜತೆಗೆ ಹೊಸಹೊಸ ದಾಖಲೆಗಳನ್ನು ಮಾಡುತ್ತಿದೆ. ಇದೀಗ ಇದುವರೆಗೂ ಯಾವೊಂದು ಕನ್ನಡ ಚಿತ್ರವೂ ಮಾಡದಂತಹ ದಾಖಲೆಯನ್ನು ‘ಕಾಂತಾರ’ ಮಾಡಿದೆ. ಐಎಂಡಿಬಿ ಗೊತ್ತಿರಬಹುದು. ಇಂಟರ್ನೆಟ್ ಮೂವಿ ಡೇಟಾ ಬೇಸ್ ಎಂಬ ಈ ವೆಬ್ಸೈಟ್ನಲ್ಲಿ ಚಿತ್ರಗಳ ಮಾಹಿತಿ ಸಿಗುತ್ತದೆ. ಇನ್ನು, ಓದುಗರೇ ತಮಗ್ಯಾವ ಚಿತ್ರ ಇಷ್ಟ ಎಂದು ರೇಟಿಂಗ್ ಕೊಡಬಹುದು.
ಇದೀಗ ‘ಕಾಂತಾರ’ ಚಿತ್ರಕ್ಕೆ ಪ್ರೇಕ್ಷಕರು ಅತೀ ಹೆಚ್ಚು ರೇಟಿಂಗ್ ಕೊಟ್ಟಿದ್ದು, ಭಾರತದ ಟಾಪ್ 250 ಜನ ಮೆಚ್ಚಿದ ಚಿತ್ರಗಳ ಸ್ಥಾನದಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಹೌದು, ಭಾರತದ 250 ಜನ ಮೆಚ್ಚಿದ ಚಿತ್ರಗಳ ಪೈಕಿ, ಕನ್ನಡದ 9 ಚಿತ್ರಗಳು ಮಾತ್ರ ಇದ್ದು, ಈ ಪೈಕಿ ‘ಕಾಂತಾರ’ ಮೊದಲ ಸ್ಥಾನದಲ್ಲಿದೆ. ಮಿಕ್ಕಂತೆ ‘777 ಚಾರ್ಲಿ’, ‘ಲೂಸಿಯಾ’, ‘ಕೆಜಿಎಫ್ 1’, ‘ಕೆಜಿಎಫ್ 2’, ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ದಿಯಾ’ ಮತ್ತು ‘ರಂಗಿತರಂಗ’ ಚಿತ್ರಗಳಿವೆ. ಈ ಪೈಕಿ ಟಾಪ್ 10 ಪಟ್ಟಿಯಲ್ಲಿ ‘ಕಾಂತಾರ’ ಬಿಟ್ಟರೆ, ಏಳನೇ ಸ್ಥಾನದಲ್ಲಿ ‘777 ಚಾರ್ಲಿ’ ಇರುವುದು ವಿಶೇಷ. 31 ಸಾವಿರಕ್ಕೂ ಹೆಚ್ಚು ಜನ ಓಟಿಂಗ್ ಮಾಡಿದ್ದು, 10ಕ್ಕೆ ‘ಕಾಂತಾರ’ ಚಿತ್ರವು 9.4 ಅಂಕಗಳನ್ನು ಪಡೆದಿದೆ. ಶೇ. 89ರಷ್ಟು ಜನ 10ಕ್ಕೆ 10 ಅಂಕಗಳನ್ನು ನೀಡುವ ಮೂಲಕ ಮೊದಲ ಸ್ಥಾನಕ್ಕೆ ತಲುಪಿಸಿದ್ದಾರೆ.
100 ಕೋಟಿ ಕ್ಲಬ್ಗೆ ಸೇರ್ಪಡೆ: ‘ಕಾಂತಾರ’ ಚಿತ್ರವು ಈಗಾಗಲೇ ತೆಲುಗು, ತಮಿಳು ಮತ್ತು ಹಿಂದಿಗೆ ಡಬ್ ಆಗಿದ್ದು, ಚಿತ್ರವು ಈ ನಾಲ್ಕೂ ಭಾಷೆಗಳಿಂದ 100 ಕೋಟಿ ರೂ. ಕ್ಲಬ್ ಸೇರಿದೆ. ಈ ಪೈಕಿ 16ನೇ ದಿನದ ಕಲೆಕ್ಷನ್, ಇದುವರೆಗಿನ ಅತೀ ಹೆಚ್ಚು ಗಳಿಕೆ ಎಂದು ಹೇಳಲಾಗಿದ್ದು, ಅಂದು ಹಿಂದಿ ಅವತರಣಿಕೆಯೊಂದೇ 2.75 ಕೋಟಿ ರೂ. ಗಳಿಕೆ ಮಾಡಿದೆ. ಮಿಕ್ಕಂತೆ 3 ಭಾಷೆಗಳಿಂದ 12 ಕೋಟಿ ರೂ. ಗಳಿಕೆಯಾಗಿದ್ದು, ಒಟ್ಟಾರೆ 14.75 ಕೋಟಿ ರೂ. ಗಳಿಕೆ ಆಗಿದೆ. ಈ ಶುಕ್ರವಾರ ಮಲಯಾಳಂ ಅವತರಣಿಕೆಯೂ ಬಿಡುಗಡೆಯಾಗಲಿದ್ದು, ವಾರಾಂತ್ಯ 5 ಭಾಷೆಗಳಿಂದ ಸೇರಿ ಇನ್ನಷ್ಟು ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ. ತೆಲುಗು ಅವತರಣಿಕೆಯ ಹಕ್ಕುಗಳನ್ನು ಅಲ್ಲು ಅರವಿಂದ್ ಅವರು 3 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂದು ಹೇಳಲಾಗಿದ್ದು, ಕಳೆದ ಆರು ದಿನಗಳಲ್ಲಿ ಚಿತ್ರ 15 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಶಿಲ್ಪಾ, ಅನುಷ್ಕಾ ಮೆಚ್ಚುಗೆ: ಇನ್ನು, ಚಿತ್ರವನ್ನು ನೋಡಿ ಇನ್ನಷ್ಟು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಧನುಶ್, ಪ್ರಭಾಸ್, ಕಾರ್ತಿ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ, ಮಧುರ್ ಭಂಡಾರ್ಕರ್, ರಾಮ್ೋಪಾಲ್ ವರ್ಮ, ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಚಿತ್ರ ಮೆಚ್ಚಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.