

| ಹರ್ಷವರ್ಧನ್ ಬ್ಯಾಡನೂರು
"ಬೀರ್ಬಲ್' ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರೂ, ನಟಿ ರುಕ್ಮಿಣಿ ವಸಂತ್ "ಸಪ್ತಸಾಗರದಾಚೆ ಎಲ್ಲೋ' ಸರಣಿಯ ಮೂಲಕ ಮನೆಮಾತಾದರು. ಹೇಮಂತ್ ರಾವ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿದ್ದ ಅವರು, ಸಂಪೂರ್ಣ ಕಲಾವಿದೆಯಾಗಿ ಭರವಸೆ ಮೂಡಿಸಿದ್ದರು. ಕ್ರಮೇಣ "ಬಘೀರ', "ಭೈರತಿ ರಣಗಲ್' ಸೇರಿ ತೆಲುಗು, ತಮಿಳಿನಲ್ಲೂ ಮಿಂಚಿದ ರುಕ್ಮಿಣಿ ಇದೀಗ "ಕಾಂತಾರ ಅಧ್ಯಾಯ 1'ರ ಮೂಲಕ ಪ್ಯಾನ್ ಇಂಡಿಯಾ ಸದ್ದು ಮಾಡುತ್ತಿದ್ದಾರೆ. ಚಿತ್ರದ ಜತೆಗೆ ಅವರು ನಟಿಸಿರುವ "ಕನಕವತಿ' ಪಾತ್ರಕ್ಕೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. 11 ದಿನಗಳಲ್ಲಿ 655 ಕೋಟಿ ರೂ. ಗಳಿಕೆ ಮಾಡಿಕೊಂಡಿರುವ ಸಿನಿಮಾ ಸದ್ಯ ₹1000 ಕೋಟಿಯತ್ತ ದಾಪುಗಾಲಿಟ್ಟಿದೆ. ಇದೇ ಖುಷಿಯಲ್ಲಿ ರುಕ್ಮಿಣಿ ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.
""ಸಪ್ತಸಾಗರದಾಚೆ ಎಲ್ಲೋ' ಚಿತ್ರದ ಪ್ರೀಮಿಯರ್ನಲ್ಲಿ ರಿಷಬ್ ಸರ್ನ ಮೊದಲ ಬಾರಿ ಭೇಟಿಯಾಗಿದ್ದೆ. ಅವರು ಪುಟ್ಟಿ ಪಾತ್ರ ನೋಡಿ ಮೆಚ್ಚಿದ್ದರು. ಬಳಿಕ ಅವರು ರತ್ ಬಳಿ "ಕಾಂತಾರ' ಚಿತ್ರಕ್ಕೆ ನನ್ನನ್ನು ಸಂಪರ್ಕಿಸುವ ಬಗ್ಗೆ ಹೇಳಿದ್ದರಂತೆ. ಆ ವಿಷಯ ನನಗೂ ಗೊತ್ತಿರಲಿಲ್ಲ. ಆ ನಂತರ 2024ರ ಮಾರ್ಚ್ನಲ್ಲಿ ನನಗೆ ಕರೆ ಮಾಡಿ ಕನಕವತಿ ಮತ್ತು ಕಾಂತಾರ ಬಗ್ಗೆ ಹೇಳಿದರು. ಪಾತ್ರದ ಬಗ್ಗೆ ತುಂಬ ನಿರೀೆ ಇತ್ತು. ಸಂಪೂರ್ಣ ವಿಭಿನ್ನ ಶೇಡ್ಗಳಿರುವ ಪಾತ್ರ. ಹೀಗಾಗಿ ಈಗಷ್ಟೇ ಕರಿಯರ್ ಪ್ರಾರಂಭಿಸುತ್ತಿದ್ದೇನೆ. ಹೀಗೆ ವಿಭಿನ್ನ ಶೇಡ್ನಲ್ಲಿ ಜನ ನನ್ನನ್ನು ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ಪ್ರಾರಂಭದಲ್ಲಿ ನನಗೂ ಇತ್ತು. ಆದರೆ, ಚಿತ್ರದ ಕಥೆ ಮತ್ತು ಎಲ್ಲ ಪಾತ್ರಗಳೂ ಚೆನ್ನಾಗಿದ್ದ ಕಾರಣ ನನ್ನ ಪಾತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಭಾಷೆ, ಟೆನ್ಶನ್ ಪಕ್ಕಕ್ಕಿಟ್ಟು ಪಾರ್ಮೆನ್ಸ್ ಬಗ್ಗೆ ಮಾತ್ರ ಗಮನ ಹರಿಸಿದೆ. ತಂಡದಿಂದಲೂ ಉತ್ತಮ ಬೆಂಬಲ ದೊರೆಯಿತು. ದಣ ಕನ್ನಡ ಭಾಷೆ, ಕುದುರೆ ಸವಾರಿ, ಕತ್ತಿ ವರಸೆ... ಹೀಗೆ ಪಾತ್ರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆ. ಈಗ ಸಿನಿಮಾ ನೋಡಿದ ಪ್ರೇಕ್ಷಕರು ನನ್ನ ನಟನೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ನನ್ನ ಪಾರ್ಮೆನ್ಸ್ ಇಷ್ಟಪಡುತ್ತಿದ್ದಾರೆ. ಪುಟ್ಟಿ ಪಾತ್ರನೂ ಮಾಡುತ್ತಾರೆ, ಕನಕವತಿ ಪಾತ್ರವನ್ನೂ ಮಾಡುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ. ಕಲಾವಿದರಿಗೆ ಜನರಿಂದ ಇಂತಹ ಪ್ರತಿಕ್ರಿಯೆ ಸಿಕ್ಕಾಗ ಒತ್ತಡ ಕಡಿಮೆಯಾಗುತ್ತದೆ. ಇದೊಂದು ಸುಂದರ ಅನುಭವ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ರುಕ್ಮಿಣಿ ವಸಂತ್.
ರುಕ್ಮಿಣಿಗೆ "ಕಾಂತಾರ ಅಧ್ಯಾಯ 1' ಭಾವನಾತ್ಮಕವಾಗಿ ಅತ್ಯಂತ ಸವಾಲಿನ ಚಿತ್ರವಾಗಿತ್ತಂತೆ. ಈ ಬಗ್ಗೆ ರುಕ್ಮಿಣಿ, "ನಾವು ಕೆಲ ಸನ್ನಿವೇಶಗಳ ಶೂಟಿಂಗ್ ನಡೆಸಲು ಕುಂದಾಪುರದ ಆಚೆ ಒಂದೂವರೆ ತಾಸು ಜೀಪ್ನಲ್ಲಿ ತೆರಳಬೇಕಿತ್ತು. ನಂತರ ವಾಹನಗಳಲ್ಲೇ ಕಾಸ್ಟ್ಯೂಮ್ ಧರಿಸಿ, ಒಂದು ತಾಸು ಇಳಿಜಾರಿನಲ್ಲಿ ನಡೆದುಕೊಂಡು, ನದಿಯ ಸಮೀಪ ಹೋಗಬೇಕಿತ್ತು. ಕ್ಯಾಮರಾ, ಚೇರ್ ಹಿಡಿದು ಎಲ್ಲ ಉಪಕರಣಗಳನ್ನೂ ಎಲ್ಲರೂ ಹೊತ್ತು ತರುತ್ತಿದ್ದರು. ಶೂಟಿಂಗ್ ಮುಗಿದ ಬಳಿಕ ಸಂಜೆ ಎತ್ತರ ಪ್ರದೇಶಕ್ಕೆ ಹತ್ತಬೇಕಿತ್ತು. ಕಾಡು ಪ್ರದೇಶ, ಸಂಜೆಯಾಗುತ್ತಿದ್ದಂತೆ ಕತ್ತಲು ಆವರಿಸಿಬಿಡುತ್ತಿತ್ತು. ಅಂತಹ ಜಾಗದಲ್ಲಿ ಶೂಟ್ ಮಾಡಲು ಮತ್ತೆ ಅವಕಾಶ ಸಿಗುವುದಿಲ್ಲ' ಎಂದು ಅನುಭವ ಹಂಚಿಕೊಳ್ಳುತ್ತಾರೆ.
"ಬೀರ್ಬಲ್' ಮೂಲಕ 2019ರಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರೂ, ರುಕ್ಮಿಣಿ ನಂತರ ನಟಿಸಿದ್ದು 2023ರ "ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ. ಅದರ ನಡುವೆ ಸುಮಾರು ನಾಲ್ಕು ವರ್ಷ ಗ್ಯಾಪ್ ಆಗಿತ್ತು. ಅದರಲ್ಲೂ ಒಂದೆರಡು ವರ್ಷ ಕರೊನಾದಿಂದಾಗಿ ಬ್ರೇಕ್ ಆಗಿತ್ತು. ಆದರೆ, "ಸಪ್ತ...' ಬಳಿಕ ರುಕ್ಮಿಣಿ ಹಿಂದಿರುಗಿ ನೋಡಿಲ್ಲ. ಈ ಎರಡೂವರೆ ವರ್ಷದಲ್ಲಿ ಎಂಟು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ "ಕಾಂತಾರ' ಮೂಲಕ ಪ್ಯಾನ್ ಇಂಡಿಯಾ ಮಿಂಚುತ್ತಿದ್ದಾರೆ. "ಕರೊನಾ ಸಮಯದಲ್ಲಿ ಎರಡು ವರ್ಷಗಳ ಕಾಲ ಬ್ರೇಕ್ ಪಡೆದಿದ್ದೆ. ಆಗ ಆ್ಯಕ್ಟಿಂಗ್ ಬಗ್ಗೆಯೇ ಹೆಚ್ಚು ಓದುತ್ತಿದ್ದೆ. ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದೆ, ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದೆ. ಅದೇ ಸಮಯದಲ್ಲಿ "ಸಪ್ತಸಾಗರದಾಚೆ...' ಆಡಿಷನ್ ಬಗ್ಗೆ ಗೊತ್ತಾಯಿತು. ನಾನೇ ಜಾಲತಾಣದಲ್ಲಿ ನಿರ್ದೇಶಕ ಹೇಮಂತ್ಗೆ ಮೆಸೇಜ್ ಮಾಡಿದ್ದೆ. ಅವರು ನನ್ನ ಮೆಸೇಜ್ ಓದಿದರು. ಜತೆಗೆ ಆಡಿಷನ್ ಮಾಡಿ, ಅವಕಾಶ ಕೊಟ್ಟರು. ಅವರು ಅವತ್ತು ನನ್ನ ಮೆಸೇಜ್ಗೆ ಪ್ರತಿಕ್ರಿಯೆ ನೀಡಿದ್ದೇ ದೊಡ್ಡ ವಿಷಯ. ಅದು ನಿಜಕ್ಕೂ ಅದೃಷ್ಟವೇ ಸರಿ. ಜತೆಗೆ ನಮ್ಮ ಶ್ರಮವೂ ಇರಲೇಬೇಕು. ನಮ್ಮ ಅದೃಷ್ಟ ಹೇಗೆ? ಯಾವಾಗ? ಬದಲಾಗುತ್ತೋ ಗೊತ್ತಿರುವುದಿಲ್ಲ. ಆದರೆ, ನಮ್ಮನ್ನು ನಾವು ಯಾವಾಗಲೂ ಮೋಟಿವೇಟ್ ಮಾಡಿಕೊಳ್ಳುತ್ತಿರಬೇಕು' ಎನ್ನುತ್ತಾರೆ ರುಕ್ಮಿಣಿ.
ರುಕ್ಮಿಣಿ ವಸಂತ್ ತೆರೆಯ ಮೇಲಿನ ನಾಯಕಿಯಾಗಿದ್ದರೆ, ಆಕೆಯ ತಂದೆ ಕರ್ನಲ್ ವಸಂತ್ ವೇಣುಗೋಪಾಲ್ ನಿಜ ನಿಜ ಜೀವನದ ಹೀರೋ ಆಗಿದ್ದವರು. 2007ರ ಜುಲೈ 31ರಂದು ಜಮ್ಮು ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ, ವೀರಮರಣವನ್ನಪ್ಪಿದವರು. ಅಶೋಕ ಚಕ್ರ ಪಡೆದ ಕರ್ನಾಟಕದ ಮೊದಲ ವ್ಯಕ್ತಿಯೂ ಹೌದು. ಅವರ ಕಾಲಾನಂತರ ರುಕ್ಮಿಣಿ ವಸಂತ್ ತಾಯಿ ಸುಭಾಷಿಣಿ ವಸಂತ್, "ವೀರರತ್ನ ೌಂಡೇಷನ್' ಮೂಲಕ ಹುತಾತ್ಮ ಸೈನಿಕರ ಪತ್ನಿಯರು ಮತ್ತು ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದಾರೆ. "ಅಪ್ಪ ವಿಧಿವಶರಾದಾಗ ನನಗೆ ಕೇವಲ 11 ವರ್ಷ. ಚಿಕ್ಕವಳಾಗಿದ್ದ ಕಾರಣ ಅವರ ಬಗ್ಗೆ ನನಗೆ ಹೆಚ್ಚು ನೆನಪುಗಳಿಲ್ಲ. ಅಪ್ಪ ಶ್ರಮಜೀವಿ. ಯಾವಾಗ ಕರೆದರೂ ಗಡಿಗೆ ಹೋಗಲು ರೆಡಿಯಾಗಿರಬೇಕು ಅನ್ನುತ್ತಿದ್ದರು. ಚಿತ್ರರಂಗಕ್ಕೂ, ಸೈನ್ಯಕ್ಕೂ ಹೋಲಿಕೆ ಮಾಡಲಾಗುವುದಿಲ್ಲ. ಆದರೆ, ಅಪ್ಪನಿಗೆ ಅವರ ಕೆಲಸದ ಮೇಲಿದ್ದ ಡೆಡಿಕೇಷನ್, ಶ್ರದ್ಧೆಯನ್ನು ನಾನೂ ನನ್ನ ಕೆಲಸದಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತೇನೆ. ವೀರರತ್ನ ೌಂಡೇಷನ್ಅನ್ನು ಅಮ್ಮ ನೋಡಿಕೊಳ್ಳುತ್ತಾರೆ. 1947ರಿಂದ ಇಲ್ಲಿಯವರೆಗೆ ವಿಧಿವಶರಾದ ಸೈನಿಕರ ಕುಟುಂಬದ ಡೇಟಾಬೇಸ್ ಅದರಲ್ಲಿದೆ. ದೇಶಸೇವೆಗೆ ಹೋದ ಸೈನಿಕ ವೀರಮರಣ ಅಪ್ಪಿದರೆ, ಅವರ ಕುಟುಂಬ ಏಕಾಂಗಿಯಾಗಿಬಿಡುತ್ತದೆ. ಆ ಅನುಭವದಿಂದ ಅವರನ್ನು ಹೊರತರಬೇಕು. ವೀರರತ್ನ ೌಂಡೇಷನ್ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ' ಎಂದು ಮಾಹಿತಿ ನೀಡುತ್ತಾರೆ.
"ಕಾಂತಾರ'ದಲ್ಲಿ ಪ್ಯಾನ್ ಇಂಡಿಯಾ ಸವಾರಿ ಹೊರಟಿರುವ ರುಕ್ಮಿಣಿ, ಯಶ್ "ಟಾಕ್ಸಿಕ್' ಮೂಲಕ ಪ್ಯಾನ್ ವರ್ಲ್ಡ್ ಸವಾರಿ ಹೊರಡಲಿದ್ದಾರೆ ಎಂಬ ಸುದ್ದಿ ಇದೆ. ಆದರೆ, "ಆ ಬಗ್ಗೆ ನಾನೇನೂ ಹೇಳಲ್ಲ, ನನಗೇನೂ ಗೊತ್ತಿಲ್ಲ. ನಾನು ಇದ್ದೀನಾ, ಇಲ್ಲವಾ ಎಂಬುದನ್ನು ಚಿತ್ರತಂಡವೇ ತಿಳಿಸಬೇಕು' ಎಂದು ನಗುತ್ತಾರೆ. ಜತೆಗೆ ಪ್ರಶಾಂತ್ ನೀಲ್ ನಿರ್ದೇಶನದ, ಜೂ, ಎನ್ಟಿಆರ್ ನಾಯಕನಾಗಿರುವ "ಡ್ರ್ಯಾಗನ್' ಚಿತ್ರದಲ್ಲಿ ನಟಿಸುತ್ತಿದ್ದು, ಪಾತ್ರದ ಬಗ್ಗೆ ಈಗಲೇ ಏನೂ ಹೇಳಲಾಗುವುದಿಲ್ಲ ಎನ್ನುತ್ತಾರೆ.