ಶಿವ ಮೆಚ್ಚಿದ ‘ಕಣ್ಣಪ್ಪ’: ಮೋಹನ್‌ಬಾಬು ನಿರ್ಮಾಣದ ಚಿತ್ರಕ್ಕೆ ಸಾಥ್ ನೀಡಿದ ಶಿವರಾಜಕುಮಾರ್

kannappa
Published on

ಬೆಂಗಳೂರು: ಶಿವಭಕ್ತ ಕಣ್ಣಪ್ಪನ ಕುರಿತು ಕನ್ನಡದಲ್ಲಿ ಈಗಾಗಲೇ ಎರಡು ಸಿನಿಮಾಗಳು ಬಂದಿವೆ. ರಾಜಕುಮಾರ್ ಅಭಿನಯದ ಮೊದಲ ಚಿತ್ರ ‘ಕಣ್ಣಪ್ಪ’ 1954ರಲ್ಲಿ ತೆರೆಕಂಡಿತ್ತು. ಬಳಿಕ ಅವರ ಪುತ್ರ ಶಿವರಾಜಕುಮಾರ್ ಅಭಿನಯದಲ್ಲಿ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರ 1988ರಲ್ಲಿ ಬಿಡುಗಡೆಯಾಗಿ ಕಣ್ಣಪ್ಪನ ಮಹಿಮೆ ಸಾರಿತ್ತು. ಇದೀಗ ಈ ಶಿವಭಕ್ತನ ಕುರಿತು ಪ್ಯಾನ್ ಇಂಡಿಯಾ ರೂಪದಲ್ಲಿ ಬಹುವೆಚ್ಚದಲ್ಲಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅದುವೇ ‘ಕಣ್ಣಪ್ಪ’. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಕಲಾವಿದರ ಸಂಗಮವಾಗಿದೆ. ನಟ ವಿಷ್ಣುಮಂಚು ಕಣ್ಣಪ್ಪನ ಪಾತ್ರದಲ್ಲಿದ್ದಾರೆ. ಮೋಹನ್ ಬಾಬು, ಮೋಹನ್‌ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್, ಕಾಜೋಲ್ ಅಗರ್ವಾಲ್ ಕಲಾ ಬಳಗದಲ್ಲಿದ್ದಾರೆ. ಇದೇ ತಿಂಗಳ 27ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರತಂಡವು ಟೀಸರ್ ಹಾಗೂ ಹಾಡು ಬಿಡುಗಡೆಗೊಳಿಸಲಾಯಿತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ರಾಜ್ಯದಲ್ಲಿ ‘ಕಣ್ಣಪ್ಪ’ ವಿತರಣೆ ಮಾಡುತ್ತಿದ್ದಾರೆ.

ನಟ ಶಿವರಾಜಕುಮಾರ್, ‘ಈ ಚಿತ್ರದಲ್ಲಿ ನಾನು ಈಶ್ವರ ಪಾತ್ರದಲ್ಲಿ ನಟಿಸಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಅದು ಆಗಲಿಲ್ಲ. ಮುಂದಿನ ದಿನಗಳಲ್ಲಿ ವಿಷ್ಣು ಮಂಜು ಜತೆ ಪೂರ್ಣ ಪ್ರಮಾಣದಲ್ಲಿ ನಟಿಸುತ್ತೇನೆ. ಮೋಹನ್ ಬಾಬು ಅವರು ನಮ್ಮ ಕುಟುಂಬದ ಸದಸ್ಯರ ಇದ್ದಾಗೆ. ಅವರು ಕರೆದರೆ ಪ್ರೀತಿಯಿಂದ ನಟಿಸಿ ಬರುತ್ತೇನೆ’ ಎಂದು ಖುಷಿ ಹಂಚಿಕೊಂಡರು. ಮೋಹನ್‌ಬಾಬು, ‘ಕನ್ನಡದಲ್ಲಿ ನಟಿಸಬೇಕು ಬಹುದಿನಗಳ ಆಸೆಯಿದೆ. ಅಂಬರೀಷ್ ಮುಂದೆ ಸಹ ಇದೇ ಹೇಳಿದ್ದೇ. ಶಿವಣ್ಣ ಜತೆ ನಟಿಸುವ ಆಸೆ ಕೂಡ ಇದೆ. ‘ಕಣ್ಣಪ್ಪ’ ಚಿತ್ರಕ್ಕಾಗಿ ನ್ಯೂಜಿಲ್ಯಾಂಡ್ ಕಾಡಿನಲ್ಲಿ ಬೃಹತ್ ಸೆಟ್ ಚಿತ್ರ ನಿರ್ಮಿಸಿದ್ದೇವೆ. ಕಣ್ಣಪ್ಪ ಕುರಿತು ರಾಜಕುಮಾರ್, ಶಿವರಾಜಕುಮಾರ್ ಚಿತ್ರ ಮಾಡಿದ್ದರು. ಈಗ ತೆಲುಗಿನಲ್ಲಿ ನಾವು ಮಾಡಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡರು. ವಿಷ್ಣು ಮಂಚು, ‘ಈ ಚಿತ್ರದಲ್ಲಿ ಶಿವಣ್ಣನ ಜತೆ ನಟಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಜತೆ ಖಂಡಿತ ಸ್ಕ್ರೀನ್ ಶೇರ್ ಮಾಡುತ್ತೇನೆ’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net