

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪಾರ್ಟಿ ಹಾಡುಗಳು, ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ "ಬಿಗ್ಬಾಸ್ ಸೀಸನ್ 5' ವಿಜೇತ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಇದೀಗ ನಟನೆಯಲ್ಲೂ ಬಿಜಿಯಾಗಿದ್ದಾರೆ. ಅವರು ನಟಿಸಿರುವ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲಾಗಿ ಮೂರು ಚಿತ್ರಗಳು ಸೆಟ್ಟೇರಿದ್ದು, ಇದೇ ವರ್ಷ ಹ್ಯಾಟ್ರಿಕ್ ರಿಲೀಸ್ ಸಂಭ್ರಮ ಆಚರಿಸುವ ನಿರೀಕ್ಷೆಯಲ್ಲಿದ್ದಾರೆ ಚಂದನ್. ""ಎಲ್ರ ಕಾಲೆಳಿಯುತ್ತೆ ಕಾಲ', "ಸೂತ್ರಧಾರಿ' ಮತ್ತು "ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರಗಳ ಕೆಲಸ ಕೊನೆಯ ಹಂತದಲ್ಲಿದೆ. "ಕ್ಯಾಂಡಿ ಕ್ರಷ್' ಒಂದು ಹಾಡು ಹೊರತುಪಡಿಸಿ ನನ್ನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಏಪ್ರಿಲ್ ನಂತರ ಸಿನಿಮಾಗಳು ರಿಲೀಸ್ ಆಗುವ ನಿರೀೆಯಿದೆ' ಎಂದು ಹೇಳಿಕೊಳ್ಳುತ್ತಾರೆ ಚಂದನ್.
ರೀಲ್ನಲ್ಲಿ ರಿಯಲ್ ಜೋಡಿ
ವಿಶೇಷ ಅಂದರೆ "ಕ್ಯಾಂಡಿ ಕ್ರಷ್' ಚಿತ್ರದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಂಪತಿ, ಬಾಯ್ ಫ್ರೆಂಡ್ ಮತ್ತು ಗರ್ಲ್ ಫ್ರೆಂಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶೂಟಿಂಗ್ ಅಂತಿಮ ಹಂತದಲ್ಲಿದೆ.
"ಎಲ್ರ ಕಾಳೆಯುವ..' "ಸೂತ್ರಧಾರಿ'
ಕಳೆದ ಒಂದು ವರ್ಷದಿಂದ ಹೀಗೆ ನಾಲ್ಕು ಚಿತ್ರಗಳಲ್ಲಿ ಬಿಜಿಯಾಗಿರುವ ಚಂದನ್, ಬ್ಯಾಕ್ ಟು ಬ್ಯಾಕ್ ಶೂಟಿಂಗ್ನಲ್ಲಿ ತೊಡಗಿದ್ದಾರೆ. "ಮೊದಲು ಸುಜಯ್ ಶಾಸ್ತ್ರಿ "ಎಲ್ರ ಕಾಲೆಳೆಯುತ್ತೆ ಕಾಲ' ಶೂಟಿಂಗ್ ಪ್ರಾರಂಭವಾಯಿತು. 1980ರ ಕಾಲಟ್ಟದ ಕಥೆ. ಆಗಿನ ಕಾಲದ ಮಾತಿನ ಶೈಲಿ ವಿಭಿನ್ನವಾಗಿತ್ತು. ಹಾಗೇ ಮೈಕೈ ತುಂಬಿಕೊಂಡು ಗುಂಡಗೆ ಕಾಣಬೇಕಿದ್ದ ಕಾರಣ, ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡೆ. ಅದಾಗುತ್ತಲೇ "ಸೂತ್ರಧಾರಿ'ಯಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಬಂತು. ಆಗ ತೂಕ ಇಳಿಸಿಕೊಂಡು ಫಿಟ್ಆಗಿ ಕಾಣಬೇಕಿತ್ತು. ತೂಕ ಇಳಿಸುವುದು ತುಂಬ ಕಷ್ಟವಾಗಿತ್ತು. ಆದರೂ ಮೂರ್ನಾಲ್ಕು ತಿಂಗಳು ಡಯಟ್, ವರ್ಕೌಟ್ ಮಾಡಿ 14 ಕೆಜಿ ತೂಕ ಇಳಿಸಿಕೊಂಡೆ' ಎಂದು ಹೇಳಿಕೊಳ್ಳುತ್ತಾರೆ ಚಂದನ್. ಇನ್ನು ಅರುಣ್ ಅಮುಕ್ತ ನಿರ್ದೇಶಿಸುತ್ತಿರುವ "ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದಲ್ಲಿ ಅವರು ಮೂರು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದು, "ಈಗಲೇ ಲುಕ್ಗಳ ಬಗ್ಗೆ ಏನೂ ರಿವೀಲ್ ಮಾಡುವಂತಿಲ್ಲ' ಎನ್ನುತ್ತಾರೆ.
ಪಾರ್ಟಿಯಿಂದ ಮೆಲೋಡಿಯತ್ತ
ಹಾಗಂತ ಚಂದನ್ ಶೆಟ್ಟಿ ನಟನೆಯಲ್ಲೇ ಫುಲ್ ಟೈಮ್ ಬಿಜಿಯಾಗಿಲ್ಲ. ಸಂಗೀತ ನಿರ್ದೇಶನ, ಗಾಯನದತ್ತ ಕೂಡ ಗಮನ ಹರಿಸಿರುವ ಅವರು, ರಾಗಿಣಿ ನಟಿಸುತ್ತಿರುವ "ಮದನಿಕ' ಚಿತ್ರಕ್ಕಾಗಿ ಹಾಡೊಂದನ್ನು ಮಾಡುತ್ತಿದ್ದಾರೆ. ಹಾಗೇ "ಇದೇ ವರ್ಷ ಮೆಲೋಡಿ ಆಲ್ಬಂ ಸಾಂಗ್ ರಿಲೀಸ್ ಮಾಡಲಿದ್ದೇನೆ. ಪಾರ್ಟಿ ಹಾಡುಗಳಿಗೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಕ್ರೇಜ್ ಇರುತ್ತದೆ. ಉಳಿದ ಸಮಯದಲ್ಲಿ ಮೆಲೋಡಿ ಹಾಡುಗಳಿಗೆ ಹೆಚ್ಚು ಸ್ಕೋಪ್ ಇರುತ್ತದೆ. ಹೀಗಾಗಿ ಮೆಲೋಡಿ ಸಾಂಗ್ ಮಾಡುತ್ತಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.