ಓಲ್ಡ್ ಮಾಂಕ್: ಹಳೇ ಸನ್ಯಾಸಿಯ ನಗೆಯ ನಶೆ

asdasdasdasd
Published on

|ಮಂಜು ಕೊಟಗುಣಸಿ ಬೆಂಗಳೂರು

ನಗುವೇ ನಮ್ಮನೆ ದೇವು›, ನಗಿಸುವುದೇ ನಮ್ಮ ಧರ್ಮ... ಇದು ‘ಓಲ್ಡ್ ಮಾಂಕ್’ ಬ್ರಾಂಡ್​ನ ಸ್ಪೇಷಾಲಿಟಿ! ಪ್ರೇಕ್ಷಕನ ನಾಡಿಬಡಿತ ಅರಿತ ನಿರ್ದೇಶಕ ಶ್ರೀನಿ, ಕುಡಿಸದೇ ನಗೆಯ ‘ನಶೆ’ ಏರಿಸುವ ಕೆಲಸವನ್ನು ಸಿನಿಮಾದಲ್ಲಿ ಮಾಡಿದ್ದಾರೆ. ಹಾಗಾಗಿ, ‘ಹಳೇ ಸನ್ಯಾಸಿ’ ಎಲ್ಲಿಯೂ ಬೋರ್ ಹೊಡೆಸದೆ, ತನ್ನ ಹೊಸ ವರಸೆಯನ್ನು ತೋರಿಸುತ್ತಲೇ ಹೋಗುತ್ತಾನೆ. ಹಾಗಾದರೆ ಕಥೆ ಏನು? ಕೃಷ್ಣ ಮತ್ತು ರುಕ್ಮಿಣಿ ನಡುವೆ ಜಗಳ ತಂದಿಟ್ಟ ನಾರದಮುನಿಗಳಿಗೆ ಖುದ್ದು ಶ್ರೀಕೃಷ್ಣನೇ, ‘ಭೂಲೋಕದಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿ ಮಾಡಿ, ಅವರ ಮನೆಯವರನ್ನೆಲ್ಲ ಒಪ್ಪಿಸಿ ಮದುವೆ ಆದಾಗ ಮಾತ್ರ ನಿನ್ನ ಶಾಪ ವಿಮೋಚನೆ’ ಎಂದು ಶಾಪವೊಂದನ್ನು ನೀಡಿರುತ್ತಾರೆ.

ಭೂಲೋಕದಲ್ಲಿ ಪ್ರೇಮ ವಿವಾಹದ ವಿರೋಧಿ ನಾರಾಯಣನ (ಎಸ್. ನಾರಾಯಣ್) ಮನೆಯಲ್ಲಿ ಅಪ್ಪಣ್ಣ (ಶ್ರೀನಿ) ಎಂಬ ನಾಮಾಂಕಿತನಾಗಿ ಹುಟ್ಟುತ್ತಾನೆ ನಾಯಕ. ಅಲ್ಲಿಂದ ಚಿತ್ರದ ಅಸಲಿ ಆಟ ಶುರು. ಮೇಲೆ ಹೇಳಿದಂತೆ ನಗಿಸುವುದನ್ನೇ ಪರಮ ಗುರಿಯೆಂಬಂತೆ ಅದಕ್ಕೆ ತಕ್ಕದಾದ ಸರಳ ಕಥೆಯನ್ನೇ ಶ್ರೀನಿ ಆಯ್ಕೆ ಮಾಡಿಕೊಂಡಿದ್ದಾರೆ. ತ್ರಾಸದಾಯಕವಲ್ಲದ ಕಥೆಯಲ್ಲಿ ಹಾಸ್ಯವೇ ಪ್ರಧಾನ ಭಕ್ಷ್ಯವಾದ್ದರಿಂದ ಪ್ರೀತಿ, ಪ್ರೇಮ ಕೇವಲ ನೆಪಕ್ಕೆ ಮಾತ್ರ. ಕಣ್ಣಲ್ಲೇ ಅರಳುವ ಪ್ರೀತಿಯಲ್ಲಿ ಗಾಢತೆ ಕಾಣಿಸುವುದಿಲ್ಲ. ಕಥೆಯ ಓಟದಲ್ಲಿ ಕೊಂಚ ಏರುಪೇರು ಎನಿಸಿದರೂ ಅದೇಕೆ ಹಾಗೆ, ಇದೇಕೆ ಹೀಗೆ? ಎಂಬ ಲಾಜಿಕ್ ಹುಡುಕುವ ಪ್ರಮೇಯವನ್ನು ಬದಿಗಿಟ್ಟು, ಕಾಲ್ಪನಿಕ ಕಥೆಯಲ್ಲಿ ‘ನಾರದ’ನ ಮ್ಯಾಜಿಕ್ ಸವಿಯಬೇಕಷ್ಟೆ.

ನಿರ್ದೇಶನದ ಜತೆಗೆ ನಾಯಕನಾಗಿಯೂ ಶ್ರೀನಿ ಗಮನಸೆಳೆಯುತ್ತಾರೆ. ಅವರ ಬಾಯಿಂದ ಹೊರಡುವ ಪಂಚಿಂಗ್ ಡೈಲಾಗ್​ಗಳು ಮಜ ನೀಡುತ್ತವೆ. ಅಭಿಜ್ಞಾ ಪಾತ್ರಧಾರಿಯಾಗಿ ನಾಯಕಿ ಅದಿತಿ ಪ್ರಭುದೇವ ಚೆಂದ. ಕಾಮಿಡಿಯ ರಸಗವಳವನ್ನೇ ಉಣಬಡಿಸಿದ್ದಾರೆ ರಣವೀರ್ ಸಿಂಗ್ ಅಲಿಯಾಸ್ ಸುಜಯ್ ಶಾಸ್ತ್ರಿ. ತೆರೆ ಮೇಲಿದ್ದಷ್ಟು ಹೊತ್ತು ಅವರದ್ದು ನಗಿಸುವುದೇ ಕಾಯಕ. ತಂದೆ ಪಾತ್ರದಲ್ಲಿರುವ ಎಸ್. ನಾರಾಯಣ್ ಅವರಿದ್ದಿಲ್ಲಿ ಹೊಸ ವರಸೆ. ಸುದೇವ್ ನಾಯರ್ ಖಳನಟನಾಗಿ ಗಮನ ಸೆಳೆಯುತ್ತಾರೆ.

ಇನ್ನುಳಿದಂತೆ ಅರುಣಾ ಬಾಲರಾಜ್, ಸಿಹಿಕಹಿ ಚಂದ್ರು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರಕ್ಕೆ ರೋಚಕ ತಿರುವು ನೀಡುವ ವಿಶೇಷ ಪಾತ್ರದಲ್ಲಿ ಕಲಾತಪಸ್ವಿ ರಾಜೇಶ್ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದ ಹೀರೋ ಎಂದರೆ ಅದು ಚಿತ್ರದ ಸಂಭಾಷಣೆ. ನಿರ್ದೇಶಕರು ಹೇಳುತ್ತಿರುವುದೇನು ಎಂಬುದನ್ನು ಗಮನದಲ್ಲಿರಿಸಿಕೊಂಡು, ಅದಕ್ಕೆ ತಕ್ಕಂತೆ ಡೈಲಾಗ್​ಗಳನ್ನು ಪೂರೈಸಿದ್ದಾರೆ ಸಂಭಾಷಣೆಕಾರ ವಿ.ಎಂ. ಪ್ರಸನ್ನ. ಛಾಯಾಗ್ರಾಹಕ ಭರತ್ ಪರಶುರಾಮ್ ಚಿತ್ರವನ್ನು ಕಲರ್​ಫುಲ್ ಆಗಿ ಸೆರೆಹಿಡಿದಿದ್ದಾರೆ. ಸೌರಭ್ ಮತ್ತು ವೈಭವ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ತಲೆಯಾಡಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net