ಕೋಟ್ಯಧಿಪತಿ ‘ಕಾಂತಾರ’ : ಬಿಡುಗಡೆ ಮುನ್ನವೇ ಕೋಟಿ ಕೋಟಿ ಬಾಚಿದ ಕನ್ನಡ ಸಿನಿಮಾ

kanthara
Published on

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಇನ್ನು 15 ದಿನಗಳು ಮಾತ್ರ ಬಾಕಿಯಿದೆ. ಕನ್ನಡ ಸೇರಿ ಏಳು ಭಾಷೆಗಳಲ್ಲಿ ಇದೇ ಅ.2ಕ್ಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಎರಡು ಪೋಸ್ಟರ್ ಹಾಗೂ ಮೂರು ಪಾತ್ರಗಳನ್ನು ಹೊರತುಪಡಿಸಿ ಸಿನಿಮಾ ತಂಡವು ಈವರೆಗೆ ಯಾವೊಂದು ಮಾಹಿತಿ ಬಿಟ್ಟುಕೊಟ್ಟಿಲ್ಲ. ಮೊದಲ ಚಿತ್ರದ ಅದ್ಭುತ ಯಶಸ್ಸಿನಿಂದ ಈಗಾಗಲೇ ಸಿನಿಮಾ ಕುರಿತ ಕ್ರೇಜ್ ಹೆಚ್ಚಿದೆ. ಹೀಗಾಗಿಯೇ ಈ ಪ್ರೀಕ್ವೆಲ್ ಬಗ್ಗೆ ಹೆಚ್ಚು ಮಾತನಾಡದೇ, ಬೇರೆ ಬೇರೆ ನಗರಗಳಿಗೆ ತೆರಳಿ ಪಬ್ಲಿಸಿಟಿ ನಡೆಸದೇ, ಮೌನವಾಗಿದ್ದುಕೊಂಡೇ ಕಂಟೆಂಟ್ ಮೂಲಕ ಸಿನಿಮಾ ರಿಲೀಸ್ ಬಳಿಕ ಜನರೇ ಪ್ರಚಾರ ನಡೆಸಲಿ ಎಂಬ ಪ್ಲ್ಯಾನ್ ಚಿತ್ರತಂಡದ್ದು. ಹೀಗಾಗಿಯೇ ಬಹಿರಂಗವಾಗಿ ಚಿತ್ರತಂಡ ಇನ್ನೂ ಪ್ರಚಾರದ ಅಖಾಡಕ್ಕೆ ಇಳಿದಿಲ್ಲ. ಈ ಮಧ್ಯೆ, ಸಾಕಷ್ಟು ಕುತೂಹಲಕಾರಿ ಅಂಶಗಳಿಂದ ಸಿನಿಮಾ ಹೆಚ್ಚು ಪ್ರಚಾರಗಿಟ್ಟಿಸಿಕೊಂಡಿದೆ.

ಪ್ಯಾನ್ ಇಂಡಿಯಾ ಕಲಾವಿದರು

ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮೂಡಿಬರಲಿರುವ ‘ಕಾಂತಾರ 1’ರಲ್ಲಿ ಪ್ಯಾನ್ ಇಂಡಿಯಾ ಕಲಾವಿದರ ಸಂಗಮವಾಗಿದೆ. ಕನ್ನಡದಿಂದ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಹಾಗೂ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಈಗಾಗಲೇ ಅಧಿಕೃತಗೊಂಡಿದ್ದಾರೆ. ಇನ್ನು ಮಲಯಾಳಂನಿಂದ ಜಯರಾಮ್ ಸೇರಿ ತಮಿಳು, ತೆಲುಗಿನ ಖ್ಯಾತ ಕಲಾವಿದರು ಸೇರಿ ವಿವಿಧ ರಾಜ್ಯಗಳ ಅಂದಾಜು 3000ಕ್ಕೂ ಅಧಿಕ ಸಹ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ. ಹಾಲಿವುಡ್ ಸಿನಿಮಾಗಳ ಆ್ಯಕ್ಷನ್ ಕೊರಿಯಾಗ್ರಾರ್ ‘ಆರ್‌ಆರ್‌ಆರ್’ ಖ್ಯಾತಿಯ ಟೊಡೊರ್ ಲಜರೋವ್ ಸೇರಿ ಭಾರತದ ವಿವಿಧ ಚಿತ್ರರಂಗಗಳ ಹಲವು ತಂತ್ರಜ್ಞರು ಕೆಲಸ ಮಾಡಿದ್ದಾರೆ. ಇತ್ತೀಚೆಗೆ ದಿಲ್ಜಿತ್ ದೋಸಾಂಝ್ ತಂಡ ‘ಕಾಂತಾರ’ ತಂಡ ಸೇರಿರುವುದು ವಿಶೇಷ.

ನಾಗಾ ಸಾಧು ಪಾತ್ರದಲ್ಲಿ ರಿಷಬ್?

‘ಕಾಂತಾರ’ದಲ್ಲಿ ರಿಷಬ್ ಕಾಡುಬೆಟ್ಟು ಶಿವನ ಪಾತ್ರದಲ್ಲಿ ಮಿಂಚಿದ್ದರು. ಪ್ರೀಕ್ವೆಲ್‌ನಲ್ಲಿ ಅವರ ಲುಕ್ ನೋಡಿದಾಗ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿತ್ತು. ‘ಕಾಂತಾರ: ಚಾಪ್ಟರ್ 1’ ಕದಂಬರ ಕಾಲದ ಕಥೆಯಾಗಿದ್ದು, ಇಲ್ಲಿ ರಿಷಬ್ ನಾಗಾಸಾಧು ಪಾತ್ರದಲ್ಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್‌ಗಳಲ್ಲಿ ಕೂಡ ಅದೇ ರೀತಿಯ ಅವತಾರ ಇದೆ.

ರಿಲೀಸ್‌ಗೂ ಮುನ್ನವೇ ಲಾಭದಲ್ಲಿರುವ ಚಿತ್ರ!

‘ಕಾಂತಾರ ಚಾಪ್ಟರ್ 1’ ಬಿಡುಗಡೆಯ ಮುನ್ನ ಆನ್‌ಲೈನ್‌ನಲ್ಲೂ ಸದ್ದು ಮಾಡುತ್ತಿದೆ. ರಿಲೀಸ್‌ಗೂ ಮುನ್ನವೇ ಚಿತ್ರದ ವಿತರಣೆ ಹಕ್ಕಿಗಾಗಿ ತಾ ಮುಂದು ನಾ ಮುಂದು ಎಂಬಂತೆ ಬರುತ್ತಿದ್ದಾರೆ. ನೇಪಾಳ, ಮಲೇಷ್ಯಾ, ಸಿಂಗಾಪುರ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕ, ಯುಕೆ, ಕೇರಳ, ಉತ್ತರ ಭಾರತದ ವಿತರಣಾ ಹಕ್ಕುಗಳು ಈಗಾಗಲೇ ಮಾರಾಟವಾಗಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯಗಳಲ್ಲೇ ಆರು ಸಂಸ್ಥೆಗಳು ಪ್ರಾದೇಶಿಕವಾರು ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ. ಅದರ ಜತೆಗೆ ಬರೋಬ್ಬರಿ 125 ಕೋಟಿ ರೂ.ಗೆ ಒಟಿಟಿ ಹಕ್ಕುಗಳು ಮಾರಾಟವಾಗಿದ್ದು, ಬಿಡುಗಡೆಗೂ ಮುನ್ನವೇ ‘ಕಾಂತಾರ 1’ ಲಾಭದಲ್ಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net