ಮಾನವೀಯತೆಯ ಸಂದೇಶಕ್ಕೆ ದ್ವಂದ್ವಾರ್ಥದ ಬೇಲಿ: ವಿಜಯವಾಣಿ ಸಿನಿಮಾ ವಿಮರ್ಶೆ

Thothapuri
Published on
  • ಚಿತ್ರ: ತೋತಾಪುರಿ
  • ನಿರ್ದೇಶನ: ವಿಜಯಪ್ರಸಾದ್
  • ನಿರ್ಮಾಣ: ಸುರೇಶ್
  • ತಾರಾಗಣ: ಜಗ್ಗೇಶ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾ ದತ್, ಸುಮನ್ ರಂಗನಾಥ್, ಧನಂಜಯ್ ಮುಂತಾದವರು

‘ಮಠ ಕಟ್ಟೋದು ಮಣ್ಣಿಂದಲೇ. ಮಸೀದಿ ಕಟ್ಟೋದು ಮಣ್ಣಿಂದಲೇ, ಸಮಾಧಿ ಕಟ್ಟೋದೂ ಮಣ್ಣಿಂದಲೇ. ಮಣ್ಣಿಗಿರುವ ಮಮತೆ ಮನುಷ್ಯನಿಗೆ ಯಾಕಿಲ್ಲ ರಾಯ್ರೇ?’ ಮಣ್ಣಿಗಿರುವ ಜ್ಞಾನ ಯಾರಿಗೂ ಯಾಕಿಲ್ಲ ರಾಯ್ರೇ ...’

ಕುಡಿದ ಮತ್ತಿನಲ್ಲಿ ಆ ಹಿರಿಯರಿಗೆ ಪ್ರಶ್ನೆ ಕೇಳುತ್ತಾನೆ ಈರೇಗೌಡ. ಈ ಪ್ರಶ್ನೆಗೆ ರಾಯರ ಬಳಿ ಯಾವುದೇ ಉತ್ತರ ಇಲ್ಲ. ಹಾಗೆ ನೋಡಿದರೆ, ಇಂಥ ಪ್ರಶ್ನೆಗಳಿಗೆ ಯಾರಲ್ಲೂ ಸಮಂಜಸವಾದ ಉತ್ತರಗಳಿಲ್ಲ. ಉತ್ತರವಿದ್ದರೂ ಮಣ್ಣಿನಂತೆ ಬದುಕುವುದಕ್ಕೆ ಸಾಧ್ಯವಿಲ್ಲ. ಜಗ್ಗೇಶ್ ಅಭಿನಯದ ‘ತೋತಾಪುರಿ’ ಖುಷಿಕೊಡುವುದು ಇಂಥದ್ದೇ ವಿಷಯಗಳಿಗೆ. ಜಾತಿ ತಾರತಮ್ಯ ಮತ್ತು ಧರ್ಮಗಳ ನಡುವಿನ ಸಂಘರ್ಷದಲ್ಲಿ ಮಾನವೀಯತೆ ದಿನೇದಿನೇ ಮೌಲ್ಯ ಕಳೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಮನುಷ್ಯ ಬಂಧನ ಎನ್ನುವ ಬೇಲಿಯನ್ನು ದಾಟಬೇಕು ಎಂದು ಸಾರುವ ಚಿತ್ರವಿದು. ಜಾತಿ ಮತ್ತು ಧರ್ಮಕ್ಕಿಂತ ಮಾನವೀಯತೆ ದೊಡ್ಡದಾಗಬೇಕು ಎಂದು ಬಯಸುವ ಚಿತ್ರವಿದು. ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿರುವುದು ಏನು ಎಂದು ರ್ಚಚಿಸುವ ಚಿತ್ರವಿದು.

ಇಂಥದ್ದೊಂದು ಗಂಭೀರವಾದ ವಿಷಯವನ್ನು ತಮಾಷೆಯಾಗಿ ಕಚಗುಳಿ ಇಡುತ್ತಾ ತಮ್ಮ ಎಂದಿನ ಶೈಲಿಯಲ್ಲಿ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ವಿಜಯಪ್ರಸಾದ್. ಇಲ್ಲಿ ಅಳು, ನಗು ಎರಡೂ ಇದೆ. ಕೆಲವು ದೃಶ್ಯಗಳು ಅಲ್ಲಲ್ಲಿ ಕಣ್ಣಂಚನ್ನು ಒದ್ದೆ ಮಾಡಿಸಿದರೆ, ಮರುಕ್ಷಣವೇ ಕಚಗುಳಿ ಇಡುವಂತಿದೆ. ಇಲ್ಲಿ ಕಥೆ ಅಂತ ವಿಶೇಷವಾಗಿ ಏನೂ ಇಲ್ಲ. ಬೇರೆಬೇರೆ ಜಾತಿ, ಧರ್ಮಗಳ ಒಂದಿಷ್ಟು ಪಾತ್ರಗಳನ್ನಿಟ್ಟುಕೊಂಡು ಅವರು ಇಂಥದ್ದೊಂದು ಸಂದೇಶವನ್ನು ಹೇಳಿದ್ದಾರೆ. ಚಿತ್ರ ಶುರುವಾಗುವುದು ಈರೇಗೌಡ ಮತ್ತು ಶಕೀಲಾ ಬಾನೋ ಒಂದು ಹೋಟೆಲ್​ನಲ್ಲಿ ಕೂತು ಮದುವೆ ಆಗಬೇಕು ಎಂದು ನಿರ್ಧರಿಸುವುದರಿಂದ. ಆ ನಂತರ ಅವರ್ಯಾರು, ಹೇಗೆ ಭೇಟಿಯಾದರು, ಹೇಗೆ ಒಂದಾದರು ಎಂದು ಹೇಳುತ್ತಾ ಹೋಗುತ್ತಾರೆ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮೂರು ಪಾತ್ರಗಳನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಈ ಕಥೆಯನ್ನು ಅವರು ಮುಂದುವರಿಸುತ್ತಾರೆ. ಕಥೆಗೊಂದು ಅಂತ್ಯ ಇಲ್ಲ. ಚಿತ್ರದ ಕೊನೆಗೆ ಇನ್ನೊಂದು ಪಾತ್ರವನ್ನು ಪರಿಚಯಿಸುವ ಮೂಲಕ ಎರಡನೆಯ ಭಾಗಕ್ಕೆ ಮುನ್ನುಡಿ ಬರೆಯುತ್ತಾರೆ.

ಹಾಗೆ ನೋಡಿದರೆ, ಇಲ್ಲಿ ಎರಡು ಚಿತ್ರಗಳಿಗಾಗುವಷ್ಟು ವಿಶೇಷ ಏನೂ ಇಲ್ಲ. ಎಲ್ಲವನ್ನೂ ಒಂದೇ ಕಥೆಯಲ್ಲಿ ಹೇಳುವ ಸಾಧ್ಯತೆ ಇತ್ತು. ಆದರೆ, ವಿಜಯಪ್ರಸಾದ್ ಚಿತ್ರವನ್ನು ಎಳೆದೆಳೆದು ಎರಡು ಚಿತ್ರಗಳನ್ನಾಗಿ ಮಾಡಿದ್ದಾರೆ. ಮಾತಿನಲ್ಲಿ ಹೇಳಬಹುದಾಗಿದ್ದನ್ನು, ದೃಶ್ಯದಲ್ಲಿ ಹೇಳುತ್ತಾರೆ. ಒಂದು ದೃಶ್ಯದಲ್ಲಿ ಕಟ್ಟಬಹುದಾಗಿದ್ದನ್ನು ಇನ್ನಷ್ಟು ದೃಶ್ಯಗಳಲ್ಲಿ ಎಳೆದಾಡುತ್ತಾರೆ. ಇನ್ನು, ಚೇಷ್ಟೆ ಅಥವಾ ಕಚಗುಳಿ ಹೆಸರಿನಲ್ಲಿ ಸುಮ್ಮನೆ ಡಬಲ್ ಮೀನಿಂಗ್ ಸಂಭಾಷಣೆ ಹೇಳಿಸುವ ಚಾಳಿಯನ್ನು ಇಲ್ಲೂ ಬಿಟ್ಟಿಲ್ಲ. ಕೆಲವೊಂದು ಸಂಭಾಷಣೆಗಳು ನಗು ತರಿಸುತ್ತವಾದರೂ, ಕೆಲವೊಮೆ ಅತಿರೇಕ ಎಂತನಿಸುತ್ತದೆ. ಹಾಗಾಗಿ, ಎಷ್ಟೇ ಒಳ್ಳೆಯ ಉದ್ದೇಶ, ಕಾಳಜಿ, ಸಂದೇಶಗಳು ಚಿತ್ರದಲ್ಲಿದ್ದರೂ, ಈ ಅತಿರೇಕದ ನಡುವೆ ಕಳೆದು ಹೋಗುತ್ತದೆ. ಚಿತ್ರ ಪ್ರಮುಖವಾಗಿ ನಾಲ್ಕು ಪಾತ್ರಗಳ ಸುತ್ತ ಸುತ್ತುತ್ತದೆ. ಜಗ್ಗೇಶ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ನಾಲ್ವರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗಮನ ಸೆಳೆಯುತ್ತಾರೆ. ಉಳಿದಂತೆ ದತ್ತಣ್ಣ, ಸುಮನ್ ರಂಗನಾಥ್, ವೆಂಕಟರಾವ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಧನಂಜಯ್ ಕೊನೆಯ ದೃಶ್ಯದಲ್ಲಿ ಬಂದು ಚಿತ್ರದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ.

ಅನೂಪ್ ಸೀಳಿನ್ ಸಂಗೀತ ಸಂಯೋಜನೆಯ ‘ಬಾಗ್ಲು ತೆಗಿ ಮೇರಿ ಜಾನ್ ...’ ಹಾಡು ಮತ್ತು ಹಿನ್ನೆಲೆ ಸಂಗೀತ ಎರಡೂ ಖುಷಿಕೊಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net