ಮಾಯಾಗಂಗೆ ಹರಿದಾಗ; ಬನಾರಸ್ ಈಗ ಪ್ಯಾನ್ ಇಂಡಿಯಾ ಚಿತ್ರ

Banaras
ಝೈದ್ ಖಾನ್, ಸೋನಾಲ್ ಮಾಂತೇರೋ
Published on

ಜಯತೀರ್ಥ ನಿರ್ದೇಶನದ ‘ಬನಾರಸ್’ ಶುರುವಾದಾಗ, ಕನ್ನಡಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರವನ್ನು ಬರೀ ಕನ್ನಡ ಮಾತ್ರವಲ್ಲ, ಪ್ಯಾನ್ ಇಂಡಿಯಾ ಲೆವೆಲ್​ಗೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಪ್ರಚಾರದ ಕೆಲಸ ಶುರುವಾಗಿದ್ದು, ಮೊದಲ ಹಂತವಾಗಿ ‘ಮಾಯಾಗಂಗೆ’ ಎಂಬ ಹಾಡನ್ನು ಕನ್ನಡ ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ. ‘ಮಾಯಾಗಂಗೆ’ ಹಾಡನ್ನು ಡಾ.ವಿ. ನಾಗೇಂದ್ರ ಪ್ರಸಾದ್ ಬರೆದಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಕಾಶಿಯಲ್ಲಿ ಚಿತ್ರೀಕರಿಸಲಾಗಿದೆ.

ಈ ಕುರಿತು ಮಾತನಾಡುವ ಜಯತೀರ್ಥ, ‘ನಾನು ನಾಗೇಂದ್ರ ಪ್ರಸಾದ್ ಅವರಿಗೆ ಈ ಹಾಡಿನ ಸನ್ನಿವೇಶ ವಿವರಿಸಿದೆ. ನನಗೆ ಮಾಮೂಲಿ ತರಹದ ಪ್ರೇಮಗೀತೆ ಬೇಕಿರಲಿಲ್ಲ. ಈ ಹಾಡಿಗೆ ನೃತ್ಯ ನಿರ್ದೇಶನ ಸಹ ಇಲ್ಲ. ನಾವೇ ಒಂದಿಷ್ಟು ಜನ ಸೇರಿಕೊಂಡು ಈ ಹಾಡು ಹೀಗೆ ಬರಬೇಕು ಎಂದು ಅಂದುಕೊಂಡೆವು. ಅದಕ್ಕೆ ತಕ್ಕ ಹಾಗೆ ಈ ಹಾಡು ಮೂಡಿ ಬಂದಿದೆ. ಚಿತ್ರದ ಬಹಳಷ್ಟು ಭಾಗವನ್ನು ಕಾಶಿಯಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿನ 84 ಘಾಟ್​ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ.

ಚಿತ್ರದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ ನಾಯಕನಾಗಿ ನಟಿಸಿದರೆ, ಸೋನಾಲ್ ಮಾಂತೇರೋ ನಾಯಕಿಯಾಗಿದ್ದಾರೆ. ಅವರಿಬ್ಬರೂ ತನ್ನ ಮಕ್ಕಳಿದ್ದಂತೆ ಎನ್ನುವ ಜಯತೀರ್ಥ, ‘ಝೈದ್ ಬಂದು ನಿರ್ದೇಶನ ಮಾಡಿ ಎಂದಾಗ, ನೀವು ದೊಡ್ಡ ರಾಜಕಾರಣಿಯ ಮಗ, ನಿಮಗೆ ಕಲಿಸುವುದು ಸ್ವಲ್ಪ ಕಷ್ಟವಾಗಬಹುದು ಎಂದೆ. ಅದಕ್ಕೆ ಅವರು ಚಪ್ಪಲಿ ಬಿಟ್ಟು ಕೆಳಗೆ ಕುಳಿತು, ನೀವು ಹೇಳಿಕೊಟ್ಟಿದ್ದನ್ನು ಮಾಡುತ್ತೇನೆ ಎಂದರು. ಹಾಗೆಯೇ ಮಾಡಿದರು. ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡಾಗಲೇ ಗೆದ್ದರು. ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ. ಸೋನಾಲ್ ಅಭಿನಯ ಸಹ ಚೆನ್ನಾಗಿದೆ’ ಎನ್ನುತ್ತಾರೆ ಜಯತೀರ್ಥ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net