

| ಹರ್ಷವರ್ಧನ್ ಬ್ಯಾಡನೂರು
ಕಳೆದ ಹತ್ತು ವರ್ಷಗಳಲ್ಲೇ ಕನ್ನಡ ಚಿತ್ರರಂಗ 2024ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕಂಡಿದೆ. ಖಾಸಗಿ ಸಂಸ್ಥೆಯೊಂದು ಬಿಡುಗಡೆ ಮಾಡಿರುವ 2024ರ ಭಾರತೀಯ ಬಾಕ್ಸಾಫಿಸ್ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. 2015ರಿಂದ 2024ರವರೆಗೆ 2020ಅನ್ನು ಹೊರತುಪಡಿಸಿ (ಕರೊನಾ ಲಾಕ್ಡೌನ್ನಿಂದಾಗಿ ಕಡಿಮೆ ಚಿತ್ರಗಳು ರಿಲೀಸ್ ಆದ ಕಾರಣ) ಉಳಿದೆಲ್ಲ ವರ್ಷಗಳಿಗೆ ಹೋಲಿಸಿದರೆ, ಸರಾಸರಿ ಟಿಕೆಟ್ ದರ ಹೆಚ್ಚಿದ್ದರೂ, 2024ರಲ್ಲಿ ಅತಿ ಕಡಿಮೆ ಜನ ಪ್ರೇಕ್ಷಕರು ಕನ್ನಡ ಸಿನಿಮಾ ನೋಡಿದ್ದು, ಬಾಕ್ಸಾಫಿಸ್ ಕಲೆಕ್ಷನ್ನಲ್ಲೂ ಅತಿ ಕಡಿಮೆ ಗಳಿಕೆ ಕಂಡಿದೆ.
ದಶಕದ ವರದಿಯಲ್ಲಿ ಏನಿದೆ?
2015ರಿಂದ 2024ರವರೆಗಿನ ಸ್ಯಾಂಡಲ್ವುಡ್ ಸಿನಿಮಾಗಳ ಬಾಕ್ಸಾಫಿಸ್ ವರದಿಯ ಪ್ರಕಾರ 2015ರಲ್ಲಿ 5.7 ಕೋಟಿ, 2016ರಲ್ಲಿ 8.5 ಕೋಟಿ, 2017ರಲ್ಲಿ 6.9 ಕೋಟಿ, 2018ರಲ್ಲಿ 5.5 ಕೋಟಿ, 2019ರಲ್ಲಿ 7.3 ಕೋಟಿ, 2020ರಲ್ಲಿ 60 ಲಕ್ಷ, 2021ರಲ್ಲಿ 4.4 ಕೋಟಿ, 2022ರಲ್ಲಿ 8 ಕೋಟಿ, 2023ರಲ್ಲಿ 3 ಕೋಟಿ ಹಾಗೂ 2024ರಲ್ಲಿ ಕೇವಲ 2.6 ಕೋಟಿ ಜನ ಕನ್ನಡ ಸಿನಿಮಾಗಳನ್ನು ವೀಸಿದ್ದಾರೆ. ಕಳೆದ ವರ್ಷ ಮೂರು ಚಿತ್ರಗಳಷ್ಟೇ 25 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡಿಕೊಂಡಿದ್ದು, "ಮ್ಯಾಕ್ಸ್' (59 ಕೋಟಿ ರೂ.), "ಯುಐ' (34 ಕೋಟಿ ರೂ.) ಹಾಗೂ "ಭೀಮ' (26 ಕೋಟಿ ರೂ.) ಕಲೆಕ್ಷನ್ ಮಾಡಿಕೊಂಡಿವೆ. ಉಳಿದಂತೆ "ಭೈರತಿ ರಣಗಲ್', "ಬಘೀರ', "ಕೃಷ್ಣಂ ಪ್ರಣಯ ಸಖಿ' ಯಶಸ್ವಿ ಚಿತ್ರಗಳ ಸಾಲಿನಲ್ಲಿವೆ.
ಕಾರಣವೇನು?
ಕರ್ನಾಟಕದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳು ಮತ್ತು ಬಹುಭಾಷಾ ಸಿನಿಮಾಗಳ ಪ್ರಾಬಲ್ಯ ಹೆಚ್ಚುತ್ತಿದೆ. ಅದರ ನಡುವೆ ಇಲ್ಲಿನ ಸ್ಟಾರ್ ಚಿತ್ರಗಳು ರಿಲೀಸ್ ಆಗದಿರುವುದೇ ವರ್ಷದಿಂದ ವರ್ಷಕ್ಕೆ ಕನ್ನಡ ಚಿತ್ರರಂಗದ ಬೆಳವಣಿಗೆ ಕುಂಠಿತವಾಗಲು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2023ರಲ್ಲಿ ಕನ್ನಡ ಚಿತ್ರಗಳು 312 ಕೋಟಿ ರೂ. ಬಿಜಿನೆಸ್ ಮಾಡಿದ್ದವು. ಆದರೆ, ಕಳೆದ ವರ್ಷ ಅದು 304 ಕೋಟಿ ರೂ.ಗೆ ಇಳಿದಿದೆ. ಅದಕ್ಕೆ ಸಾ ಎಂಬಂತೆ 2021 ಮತ್ತು 22ರಲ್ಲಿ ಭಾರತೀಯ ಸಿನಿಮಾ ಮಾರುಕಟ್ಟೆಯಲ್ಲಿ ಶೇಕಡಾ 7, 8ರಷ್ಟು ಇದ್ದ ಕನ್ನಡ ಚಿತ್ರಗಳ ಭಾಗ, ಕಳೆದ ಎರಡು ವರ್ಷಗಳಿಂದ ಕೇವಲ ಶೇಕಡಾ 3ಕ್ಕೆ ಇಳಿದಿದೆ. ಜತೆಗೆ ಸರಾಸರಿ ಟಿಕೆಟ್ ದರವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು 2023ರಲ್ಲಿ 103 ರೂ. ಇದ್ದ ದರ, 2024ರಲ್ಲಿ 116 ರೂ. ಆಗಿದೆ. ಕನ್ನಡದ ಪ್ರೇಕ್ಷಕರು ಥಿಯೇಟರ್ಗಳಿಂದ ದೂರ ಉಳಿಯಲೂ ಇದೂ ಒಂದು ಕಾರಣ ಎನ್ನಲಾಗಿದೆ.
ಪರಭಾಷಾ ಚಿತ್ರಗಳ ಪರಿಸ್ಥಿತಿ
ಗಳಿಕೆಯ ವಿಷಯದಲ್ಲಿ 2024 ಭಾರತೀಯ ಚಿತ್ರರಂಗದಲ್ಲೇ ಎರಡನೇ ಅತ್ಯಂತ ಸಕ್ಸಸ್ುಲ್ ವರ್ಷವಾಗಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 6ರಷ್ಟು ಕಡಿಮೆಯಿದೆ. 2023ರಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿಹೆಚ್ಚು ಅರ್ಥಾತ್ 12,226 ಕೋಟಿ ರೂ. ಕಲೆಕ್ಷನ್ ಆಗಿತ್ತು. ಆದರೆ, ಆ ಸಂಖ್ಯೆ 2024ರಲ್ಲಿ 11,833 ಕೋಟಿ ರೂ.ಗೆ ಇಳಿದಿದೆ. 2023ರಲ್ಲಿ 94.3 ಕೋಟಿ ಜನ ಥಿಯೇಟರ್, ಮಲ್ಟಿಪ್ಲೆಕ್ಸ್ಗಳಿಗೆ ಹೋಗಿದ್ದು, ಕಳೆದ ವರ್ಷ 88.3 ಕೋಟಿಗೆ ಇಳಿದಿದೆ. 2023ರಲ್ಲಿ 5,380 ಕೋಟಿ ರೂ. ಇದ್ದ ಹಿಂದಿ ಚಿತ್ರರಂಗದ ಗಳಿಕೆ, 2024ರಲ್ಲಿ 4,679 ಕೋಟಿ ರೂ.ಗೆ ಇಳಿದಿದೆ. ತಮಿಳು ಚಿತ್ರರಂಗದ ಗಳಿಕೆಯೂ ಇಳಿಕೆಯಾಗಿದ್ದು 2023ರಲ್ಲಿ 1961 ಕೋಟಿ ರೂ. ಇದ್ದ ಗಳಿಕೆ, ಕಳೆದ ವರ್ಷ 1829 ಕೋಟಿ ರೂ.ಗೆ ಇಳಿದಿದೆ. ಅದೇ ರೀತಿ ಪಂಜಾಬಿ ಮತ್ತು ಮರಾಠಿ ಚಿತ್ರಗಳ ಕಲೆಕ್ಷನ್ ಕೂಡ 2024ರಲ್ಲಿ ಇಳಿಮುಖವಾಗಿದೆ.
ಟಾಲಿವುಡ್, ಮಾಲಿವುಡ್ ಮಾಲಾಮಾಲ್
ಬೇರೆಲ್ಲ ಚಿತ್ರರಂಗಗಳಿಗೆ ಹೋಲಿಸಿದರೆ ತೆಲುಗು, ಮಲಯಾಳಂ ಚಿತ್ರರಂಗಗಳು ಪ್ರೇಕ್ಷಕರನ್ನು ಥಿಯೇಟರ್ಗಳಿಗೆ ಸೆಳೆಯುವಲ್ಲಿ ಗೆದ್ದಿವೆ. ಕಳೆದ ಮೂರು ವರ್ಷಗಳಿಂದ ಶೇಕಡಾ 5ರಷ್ಟು ಏರಿಕೆ ಕಾಣುತ್ತಿರುವ ತೆಲುಗು ಚಿತ್ರರಂಗ 2024ರಲ್ಲಿ 2,348 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. 2024 ಎಲ್ಲ ಚಿತ್ರಗಳಿಗಿಂತ ಮಾಲಿವುಡ್ಗೆ ದುಪ್ಪಟ್ಟು ಯಶಸ್ಸು ತಂದುಕೊಟ್ಟಿದೆ. 2023ರಲ್ಲಿ ಮಲಯಾಳಂ ಚಿತ್ರಗಳು 572 ಕೋಟಿ ರೂ. ಕಲೆಕ್ಷನ್ ಮಾಡಿಕೊಂಡಿದ್ದವು. 2024ರಲ್ಲಿ ಅದು ಡಬಲ್ ಆಗಿದ್ದು 1,165 ಕೋಟಿ ರೂ. ಗಳಿಕೆ ಮಾಡಿಕೊಂಡಿವೆ. ಭಾರತೀಯ ಸಿನಿಮಾ ಮಾರುಕಟ್ಟೆಯಲ್ಲಿ ಶೇಕಡಾ 5ರಷ್ಟಿದ್ದ ಮಲಯಾಳಂ ಚಿತ್ರಗಳ ಮಾರುಕಟ್ಟೆ, ಇದೀಗ ಶೇಕಡಾ 10ಕ್ಕೆ ಏರಿಕೆಯಾಗಿದೆ. ಇನ್ನು ಗುಜರಾತಿ ಮತ್ತು ಬೆಂಗಾಲಿ ಚಿತ್ರಗಳು ಸಹ 2023ಕ್ಕಿಂತ ಕಳೆದ ವರ್ಷ ಹೆಚ್ಚು ಯಶಸ್ಸು ಕಂಡಿವೆ.