‘ಪಪ್ಪಿ’ಯ ಸ್ನೇಹಿತರು: ನಟನೆಯ ಅನುಭವ ಹಂಚಿಕೊಂಡ ಮಾ. ಜಗದೀಶ್, ಮಾ. ಆದಿತ್ಯ

puppy
Published on

ಬೆಂಗಳೂರು: ಸಿಂಧನೂರಿನ ದಡೇಸೂಗೂರು ಮೂಲದ ಆಯುಷ್ ಮಲ್ಲಿ ನಿರ್ದೇಶನದ ‘ಪಪ್ಪಿ’ ಇಂದು ತೆರೆ ಕಾಣುತ್ತಿದೆ. ಉತ್ತರ ಕರ್ನಾಟಕದ ಜನ-ಜೀವನ ಕುರಿತ ಕಥೆಯಾಗಿದ್ದು, ಈಗಾಗಲೇ ಟ್ರೇಲರ್ ಹಾಗೂ ‘ಕಾಲ ಕೆಟ್ಟೈತಂತೆಪ್ಪೋ’ ಸಾಂಗ್ ವೈರಲ್ ಆಗಿವೆ. ಹಾಗೇ ಪ್ರಚಾರದ ಸಮಯದಲ್ಲಿ ಬಾಲ ಕಲಾವಿದರಾದ ಜಗದೀಶ್ ಮತ್ತು ಆದಿತ್ಯರ ಮುಗ್ಧ ಮಾತುಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಈ ವರ್ಷ ಐದನೇ ತರಗತಿಗೆ ಕಾಲಿಡುತ್ತಿರುವ ಈ ಜೋಡಿ ಇದೀಗ ಮೊದಲ ಸಿನಿಮಾ ರಿಲೀಸ್ ಆಗುತ್ತಿರುವ ಸಂಭ್ರಮದಲ್ಲಿದೆ. ಪಾತ್ರದ ಬಗ್ಗೆ ಆದಿತ್ಯ, ‘ನಿರ್ದೇಶಕರು ನಮ್ಮ ಮಾವ. ದಪ್ಪ ಇರುವ ಹುಡುಗ ಚಿತ್ರಕ್ಕೆ ಬೇಕು. ಯಾರಾದ್ರೆ ಇದ್ರೆ ಹೇಳು ಅಂತ ಅವರು ನನಗೆ ಮೊದಲು ಹೇಳಿದ್ದರು. ಆಗ ನಾನು ನಾನೇ ಮಾಡ್ತೀನಿ ಅಂದೆ. ಅದಕ್ಕವರು ಬೇಡ ನಿನ್ನದು ಬೆಂಗಳೂರು ಕನ್ನಡ ಸರಿ ಹೋಗಲ್ಲ ಅಂದಿದ್ರು, ಬಳಿಕ ಉತ್ತರ ಕರ್ನಾಟಕ ಭಾಷೆಯಲ್ಲಿ ರೀಲ್ಸ್ ಮಾಡಿ ಅವರಿಗೆ ಕಳಿಸಿದೆ. ಅದರಿಂದ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ನಾನು, ಜಗದೀಶ್ ಇಬ್ಬರೂ ಹೊಂದಾಣಿಕೆಯಿಂದ ನಟಿಸಿದ್ದೀವಿ. ನನಗೆ ಬರದಿದ್ದಾಗ ಅವನಿಂದ ಹೇಳಿಸಿಕೊಳ್ಳುತ್ತಿದ್ದೆ. ಹೆಚ್ಚು ಪ್ರಾಕ್ಟೀಸ್ ಕೂಡ ಮಾಡಿದೆವು’ ಎಂದು ಹೇಳುತ್ತಾನೆ.

ಜೀರೋ ಅಂದವರ ಮುಂದೆ ಹೀರೋ ಆಗೀನಿ: ಇನ್ನು ಪರ್ಶ್ಯಾ ಪಾತ್ರದಲ್ಲಿ ನಟಿಸಿರುವ ಜಗದೀಶ್, ‘ನನ್ನ ರೀಲ್ಸ್ ನೋಡಿದ್ದ ಆಯುಷ್ ಸರ್ ಮನೆಗೆ ಬಂದು ಸಿನಿಮಾಕ್ಕಾಗಿ ಕೇಳಿದರು. ಮನೆಯವರು ಅಂಜಿ ಹಿಂದೇಟು ಹಾಕಿದ್ದರು. ಆದರೆ, ಅವರು ಪದೇ ಪದೆ ಕೇಳಿ, ಒಮ್ಮೆ ಕಥೆ ಹೇಳಿದಾಗ, ಕೊನೆಗೂ ನಮ್ಮಣ್ಣ ಒಪ್ಪಿದ್ರು. ಮೊದಲು ಆ್ಯಕ್ಟಿಂಗ್ ಮಾಡಲು ಭಯವಾಗುತ್ತಿತ್ತು. ಅದಕ್ಕೆ ಆರು ದಿನ ಪ್ರಾಕ್ಟೀಸ್ ಮಾಡಿದೆವು. ಆಗ ನಿರ್ದೇಶಕರು ಮನಸಿಗೆ ಬಂದಂತೆ ನಟಿಸಿ ಅಂದ್ರು, ಹಾಗೆಯೇ ಮುಂದುವರಿದೆವು. ‘ಪಪ್ಪಿ’ ನಾಯಿ ಮೊದಲು ನಮ್ಮ ಹತ್ತಿರವೇ ಬರುತ್ತಿರಲಿಲ್ಲ. ಅದಕ್ಕೆ ಊಟ ಕೊಟ್ಟು, ಹೊರಗೆ ಓಡಾಡಿಸಿ ರೂಢಿ ಮಾಡಿಕೊಂಡೆವು. ಸಿನಿಮಾ ಹಾಗೂ ನನ್ನ ಆ್ಯಕ್ಟಿಂಗ್‌ನ ಧ್ರುವ ಸರ್ಜಾ ಸರ್ ಇಷ್ಟಪಟ್ಟಿರುವುದು ಖುಷಿಯಾಗಿದೆ. ಊರಲ್ಲಿ ನನ್ನನ್ನು ಜೀರೋ ಎನ್ನುತ್ತಿದ್ದರು. ಈ ಚಿತ್ರದ ಬಳಿಕ ನನ್ನನ್ನು ಹೀರೋ ಅಂತಾರೆ ನೋಡಿ. ಈಗ ಯಾವುದೇ ಸಿನಿಮಾಗಳು ಬಂದಿಲ್ಲ. ಸದ್ಯಕ್ಕೆ ಓದಿನತ್ತ ಗಮನಹರಿಸುವೆ’ ಎನ್ನುತ್ತಾನೆ.

ಉತ್ತರ ಕರ್ನಾಟಕ ಸೊಗಡಿನ ಖಡಕ್ ಸಂಭಾಷಣೆಗಾಗಿಯೇ ಈ ಹುಡುಗರನ್ನು ಆಯ್ಕೆ ಮಾಡಿಕೊಂಡೆ. ಅವರ ಕಣ್ಣುಗಳಲ್ಲಿನ ಮುಗ್ಧತೆ, ನಟಿಸುವ ಛಲ ಇರುವುದು ನನಗೆ ಇಷ್ಟವಾಯಿತು. ಈ ಮಕ್ಕಳು ನಾನು ಹೇಳಿಕೊಡುವುದನ್ನು ಚೆನ್ನಾಗಿ ಗ್ರಹಿಸುತ್ತಿದ್ದರು. ಆದರೆ, ನಾಯಿ ಹಾಗೂ ಪಾರಿವಾಳದ ದೃಶ್ಯಗಳ ಚಿತ್ರೀಕರಣವೇ ನನಗೆ ಸವಾಲಾಗಿತ್ತು. > ಆಯುಷ್ ಮಲ್ಲಿ, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net