

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಕೋಟ್ಯಂತರ ರೂಪಾಯಿ ಹಣ ಹಾಕಿ ಸಿನಿಮಾ ಮಾಡುವ ನಿರ್ಮಾಪಕರು, ಥಿಯೇಟರ್ಗಳಲ್ಲಿ ರಿಲೀಸ್ ಮಾಡಲೂ ಸಹ ವಾರದ ಬಾಡಿಗೆ ಕೊಡುತ್ತಾರೆ. ಅವರು ಹಾಕಿದ ಹಣ ವಾಪಸ್ ಬರುತ್ತೋ? ಇಲ್ಲವೋ? ಗ್ಯಾರಂಟಿ ಇರುವುದಿಲ್ಲ. ಆದರೆ, ಪ್ರೇಕ್ಷಕರು ಮತ್ತು ಸಿನಿಮಾ ನಡುವಿನ ಮಧ್ಯವರ್ತಿಗಳಂತಿರುವ ಬುಕ್ಮೈಶೋನಂತಹ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ಮಾತ್ರ ಹಣ ಮಾಡುತ್ತಲೇ ಇವೆ ಎಂಬ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಅದರ ಜತೆಗೆ ರೇಟಿಂಗ್ ವ್ಯವಸ್ಥೆಯನ್ನು ಎಲ್ಲರ ಕೈಗೆಟುಕುವಂತೆ ಮಾಡಿ, ಪ್ಯಾನ್ ವಾರ್ಗಳಿಗೂ ಕಾರಣವಾಗಿವೆ ಎಂಬ ಆರೋಪಗಳಿವೆ. ಇದರ ನಡುವೆಯೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳಿಗೆ ಮೂಗುದಾರ ಹಾಕಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ.
ಇದೇ ಮಾರ್ಚ್ 15ರಂದು ಟಿಕೆಟ್ ಬುಕ್ಕಿಂಗ್ ಆ್ಯಪ್ಗಳಿಂದ ಕನ್ನಡ ಚಿತ್ರಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ನೀಡಲು ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್ ಅಧ್ಯಕ್ಷತೆಯಲ್ಲಿ ಉದಯ್ ಮೆಹ್ತಾ, ಚಂದನ್ ಸುರೇಶ್, ಅವಿನಾಶ್ ಶೆಟ್ಟಿ ಮತ್ತು ಜಗದೀಶ್ ಒಳಗೊಂಡ ಸಮಿತಿ ರಚಿಸಲಾಗಿತ್ತು. "ಸಾಮಾನ್ಯವಾಗಿ ಸಿನಿಮಾ ಹಕ್ಕು ನಿರ್ಮಾಪಕರ ಬಳಿ ಇರುತ್ತದೆ. ಕೆಲವೊಮ್ಮೆ ವಿತರಕರು ಇಂತಿಷ್ಟು ಹಣ ಕೊಟ್ಟು ಸಿನಿಮಾ ಖರೀದಿ ಮಾಡುತ್ತಾರೆ. ಹಾಗೇ ಥಿಯೇಟರ್ ಮಾಲೀಕರು ರೆವಿನ್ಯೂ ಶೇರಿಂಗ್ನಲ್ಲಿ ಅಥವಾ ವಾರದ ಬಾಡಿಗೆಯಲ್ಲಿ ಸಿನಿಮಾ ಪ್ರದರ್ಶಿಸುತ್ತಿರುತ್ತಾರೆ. ಆಗ ಜನ ಖರೀದಿಸುವ ಟಿಕೆಟ್ ದರದ ಇಂತಿಷ್ಟು ಹಣ ನಿರ್ಮಾಪಕರಿಗೆ ಅಥವಾ ವಿತರಕರಿಗೆ ಹೋಗಬೇಕು. ಆದರೆ, ಬುಕ್ಮೈಶೋನಂತಹ ಆ್ಯಪ್ಗಳು ಯಾರದೋ ಕಂಟೆಂಟ್ನಿಂದ ತಾವು ಹಣ ಮಾಡಿಕೊಳ್ಳುತ್ತಿವೆ. ಇದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆ' ಎಂದು ಮಾಹಿತಿ ನೀಡುತ್ತಾರೆ ದಯಾಳ್ ಪದ್ಮನಾಭನ್.
ಬುಕ್ಮೈಶೋನಲ್ಲಿ ಸಿನಿಮಾಗಳಿಗೆ ರೇಟಿಂಗ್ ಕೊಡುವ ವ್ಯವಸ್ಥೆಯಿದೆ. "ಇದರಿಂದಲೂ ಸಮಸ್ಯೆಯಾಗುತ್ತಿದೆ' ಎನ್ನುವ ದಯಾಳ್, "ಹಣ ಕೊಟ್ಟವರ ಸಿನಿಮಾಗಳ ರೇಟಿಂಗ್ ಹೆಚ್ಚಿಸುವ ಏಜೆನ್ಸಿಗಳು ಹುಟ್ಟಿಕೊಂಡಿವೆ. ದರ್ಶನ್ ಸಿನಿಮಾಗೆ ಸುದೀಪ್ ಫ್ಯಾನ್ಸ್, ಸುದೀಪ್ ಸಿನಿಮಾಗೆ ದರ್ಶನ್ ಫ್ಯಾನ್ಸ್ 10ಕ್ಕೆ 1 ರೇಟಿಂಗ್ ಕೊಡುವ ಮೂಲಕ ಫ್ಯಾನ್ಸ್ವಾರ್ಗೂ ಕಾರಣವಾಗಿದೆ. ಹೀಗಾಗಿ ವಿಮರ್ಶಕರನ್ನು ಹೊರತುಪಡಿಸಿ ಬೇರೆಯವರು ರೇಟಿಂಗ್ ನೀಡದಂತೆ ವ್ಯವಸ್ಥೆ ಮಾಡಬೇಕು ಎಂದೂ ಮನದಟ್ಟು ಮಾಡಲಿದ್ದೇವೆ' ಎಂದು ಪರಿಹಾರ ಸೂಚಿಸುತ್ತಾರೆ.
ಮಂಗಳವಾರ ಬುಕ್ಮೈಶೋ ಒಡೆತನ ಹೊಂದಿರುವ ಬಿಗ್ಟ್ರೀ ಎಂಟರ್ಟೇನ್ಮೆಂಟ್ ಕಂಪನಿಗೆ ಸಮಿತಿಯು ಪತ್ರ ಬರೆದಿದೆ. "15 ದಿನಗಳ ಒಳಗೆ ಕಂಪನಿಯ ಪ್ರತಿನಿಧಿಗಳು ಸಮಿತಿಯ ಜತೆ ಸಭೆ ನಡೆಸಬೇಕು. ಇಲ್ಲದಿದ್ದರೆ ಯಾರದೋ ಕಂಟೆಂಟ್ ಬಳಸಿ ಹಣ ಮಾಡುವ ಮೂಲಕ ಕಾಪಿರೈಟ್ಸ್ ಕಾಯ್ದೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಾನೂನು ಹೋರಾಟಕ್ಕೆ ಮುಂದಾಗಲಿದ್ದೇವೆ' ಎಂದು ಎಚ್ಚರಿಕೆ ನೀಡುತ್ತಾರೆ ದಯಾಳ್ ಪದ್ಮನಾಭನ್.