ಅಣ್ಣಾವ್ರ ಅಭಿಮಾನಿಯ 'ಕಾಳಿಪ್ರಸಾದ್' ಚಿತ್ರಕ್ಕೆ ಚಾಲನೆ

Kaliprasad (3)
Published on

ಬೆಂಗಳೂರು: ಡಾ. ರಾಜಕುಮಾರ್​ ಅವರ ಅಭಿಮಾನಿ ಬಳಗ ದೊಡ್ಡದು. ದೇಶ-ವಿದೇಶಗಳಲ್ಲಿ ಅವರ ಅಭಿಮಾನಿಗಳಿದ್ದಾರೆ. ತಮಿಳುನಾಡಿನವರಾದ ಕೆ.ವಿ.ಎಸ್. ರಾಯ್ ಸಹ ಡಾ. ರಾಜಕುಮಾರ್​ ಅವರ ಅಭಿಮಾನಿಯಂತೆ. 'ಗುರಿ' ಚಿತ್ರದಲ್ಲಿ ಡಾ. |ರಾಜ್ ಹೆಸರು ಕಾಳಿಪ್ರಸಾದ್ ಎಂದು. ಈಗ ಅದೇ ಹೆಸರಿನಲ್ಲಿ ರಾಯ್ ಒಂದು ಹೊಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಕಾಳಿಪ್ರಸಾದ್' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಭೂಮಿಕಾ ಚಿತ್ರಮಂದಿರದಲ್ಲಿ ನಡೆಯಿತು. ಹಿರಿಯ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ ಚಿತ್ರಕ್ಕೆ ಚಾಲನೆ ನೀಡಿದರು. ಗಾಯಕಿ ಇಂದು ವಿಶ್ವನಾಥ್​ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಚಿತ್ರದ ಕುರಿತು ಮಾತನಾಡುವ ಕೆ.ವಿ.ಎಸ್. ರಾಯ್, 'ನಾನು ತಮಿಳುನಾಡಿನವನು. ಡಾ. ರಾಜ್​ ಅವರ ಅಭಿಮಾನಿ. ರಾಜಕುಮಾರ್ ಮೇಲಿನ ಪ್ರೀತಿಯಿಂದಾಗಿ ಚಿತ್ರಕ್ಕೆ 'ಕಾಳಿಪ್ರಸಾದ್" ಅಂತ ಹೆಸರಿಟ್ಟಿದ್ದೀನಿ. ನಮ್ಮ ಚಿತ್ರದಲ್ಲಿ ಲವ್, ಆಕ್ಷನ್, ಸೆಂಟಿಮೆಂಟ್ ಎಲ್ಲಾ‌ ಅಂಶಗಳು ಇದೆ‌. ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತೇವೆ. ಐದು ಹಾಡುಗಳಿದೆ. ದೊಡರಂಗೇಗೌಡರು ಬರೆದಿರುವ ಹಾಡೊಂದನ್ನು ಬಳಸಿಕೊಂಡಿದ್ದೇವೆ' ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಕನ್ನಡದ ಮೇಲೆ ಅಭಿಮಾನವಿಟ್ಟು ಇಲ್ಲಿಗೆ ಬರುವ ಪ್ರತಿಯೊಬ್ಬರು ಕನ್ನಡಿಗರು ಎಂದ ದೊಡ್ಡರಂಗೇಗೌಡರು, 'ನಮ್ಮ ಭಾಷೆಯ ಮೇಲೆ ಪ್ರೀತಿಯಿಟ್ಟು‌ ಇಲ್ಲಿಗೆ ಬಂದು ಸಿನಿಮಾ ಮಾಡುತ್ತಿರುವ, ಡಾ. ರಾಜಕುಮಾರ್ ಅಭಿಮಾನಿಯೂ ಆಗಿರುವ ಕೆ.ವಿ.ಎಸ್. ರಾಯ್ ಅವರಿಗೆ ಹಾಗೂ ಚಿತ್ರಕ್ಕೆ ಶುಭವಾಗಲಿ' ಎಂದು ಹಾರೈಸಿದರು.

ರಾಮತೇಜ್, ಪ್ರಿಯಾ ಶೆಟ್ಟಿ, ವೈಷ್ಣವಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಎಸ್.ಎನ್​​.ಬಿ. ಮೂರ್ತಿ ಛಾಯಾಗ್ರಹಣ, ಇಂದು ವಿಶ್ವನಾಥ್ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net