

ಬೆಂಗಳೂರು: ಹೊಸಬರು ಇತ್ತೀಚಿನ ದಿನಗಳಲ್ಲಿ ಹಲವು ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಂತಹವರ ಸಾಲಿನಲ್ಲಿ 'ಇತ್ಯಾದಿ' ಚಿತ್ರತಂಡದವರು ಸಹ ಸೇರುತ್ತಾರೆ. ಮಾಯಾಜಾಲ ಕುರಿತಾದ ಈ ಚಿತ್ರವು ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ’ಮದಗಜ’ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ವಿಕಾಸ್ ನಾಗರಾಜ್ ಮೂಲತಃ ರಂಗಭೂಮಿಯವರು. ’ಬೆಟ್ಟದ ಆಸೆ’ ಎಂಬ ಕಲಾತ್ಮಕ ಚಿತ್ರವನ್ನು ನಿರ್ದೇಶನ ಮಾಡಿದವರು. ಇದೀಗ ಅವರೇ 'ಇತ್ಯಾದಿ' ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿ, ನಿರ್ದೇಶನ ಮಾಡಿದ್ದಾರೆ.
ಇದೊಂದು ಮಾಯಾಜಾಲದ ಕುರಿತಾದ ಚಿತ್ರವಂತೆ. 'ಒಬ್ಬ ವ್ಯಕ್ತಿಯಲ್ಲಿರುವ ಪಾತ್ರವನ್ನು ಬೇರೆಯವರು ಹುಡುಕುತ್ತಾರೆ. ನಿಮ್ಮಲ್ಲಿರುವ ಪಾತ್ರವನ್ನು ಅವನು ಹುಡುಕುತ್ತಾನೆ. ನಾವು ಹಂಗೇ ನೋಡುತ್ತೇವೋ, ಅದೇ ರೀತಿ ಸಿನಿಮಾ ಸಾಗುತ್ತದೆ. ಎಲ್ಲರ ಮನಸ್ಥಿತಿಗೂ ಬೇರೆಬೇರೆ ಅರ್ಥ ಕಲ್ಪಿಸುತ್ತಾ ಹೋಗುತ್ತದೆ. ಮಾಯಾಜಾಲದಲ್ಲಿ ಪಾತ್ರಗಳೇ ಕಥೆಯನ್ನು ಹುಟ್ಟು ಹಾಕುತ್ತವೆ. ಪ್ರತಿ ಪಾತ್ರಕ್ಕೂ ಸಂಬಂಧ ಇರುತ್ತದೆ. ಒಂದು ದೃಶ್ಯ ತಪ್ಪಿಹೋದರೂ ಕಥೆ ಅರ್ಥವಾಗುವುದಿಲ್ಲ' ಎನ್ನುತ್ತಾರೆ ವಿಕಾಸ್ ನಾಗರಾಜ್.
'ಇತ್ಯಾದಿ' ಚಿತ್ರದಲ್ಲಿ ನಾಯಕನಾಗಿ ಸಚಿನ್ ನಟಿಸುತ್ತಿದ್ದಾರೆ. ಅವರೊಂದಿಗೆ ರಘು ಪಾಂಡೇಶ್ವರ್, ವೀರೇಶ್ ಮುತ್ತಿನಮಠ, ರೇಷ್ಮಾ, ರಶ್ಮಿತಾ, ಪ್ರೀತಂ, ರಾಧಿಕಾ ಮುಂತಾದವರು ನಟಿಸುತ್ತಿದ್ದಾರೆ. ಉಳಿದಂತೆ ಸಂಗೀತ, ಸಂಕಲನ, ಸಾಹಸ ಇವೆಲ್ಲಕ್ಕೂ ತಂತ್ರಜ್ನರನ್ನು ಸದ್ಯದಲ್ಲೆ ಆಯ್ಕೆ ಮಾಡಿಕೊಳ್ಳಲಾಗುವುದಂತೆ.
ನೀಲಕಂಠ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಯೋಗರಾಜ್.ಡಿ ನಿರ್ಮಾಣ ಮಾಡುವ ಜತೆಗೆ ಛಾಯಾಗ್ರಹಣ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.