ಬಾಲಿವುಡ್​ನಲ್ಲಿ ಕನ್ನಡಿಗರ ಹೊಸ ಸಿನಿಮಾ Y

KANNADA F
Published on
ಬೆಂಗಳೂರು:  ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ಸಾಕಷ್ಟು ಕಲಾವಿದರು ಪರಭಾಷೆಯ ಸಿನಿಮಾ ಇಂಡಸ್ಟ್ರಿಗಳಲ್ಲಿ ಕಮಾಲ್ ಮಾಡುತ್ತಿದ್ದು, ದಿನೇದಿನೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರ ಜತೆಗೆ ನಿರ್ದೇಶಕರ, ತಂತ್ರಜ್ಞರ ಕೆಲಸಕ್ಕೂ ಮೆಚ್ಚುಗೆ ಸಿಗುತ್ತಿದೆ. ಹೀಗಿರುವಾಗಲೇ ಕನ್ನಡದ ನಿರ್ದೇಶಕ ಗಿರಿದೇವ್ ಹಾಸನ್, ಬಾಲಿವುಡ್​ಗೆ ಪಯಣ ಬೆಳೆಸಿದ್ದಾರೆ. ಸದ್ದಿಲ್ಲದೆ ‘ವೈ’ ಎಂಬ ಸಿನಿಮಾ ಮಾಡಿದ್ದಾರೆ. ಇನ್ನೇನು ಈ ಸಿನಿಮಾ ಬಿಡುಗಡೆಯೂ ಆಗಲಿದೆ. ವಿಶೇಷ ಏನೆಂದರೆ ಇದರಲ್ಲಿ ಮಂಗಳೂರು ಮೂಲದ ಲಿಯೋನಿಲ್ಲಾ ನಾಯಕಿ. ಮಾತ್ರವಲ್ಲ, ತಂತ್ರಜ್ಞರಲ್ಲಿ ಹಲವು ಕನ್ನಡಿಗರೇ!

ಈ ಹಿಂದೆ ‘ಜೀರೋ: ಮೇಡ್ ಇನ್ ಇಂಡಿಯಾ’ ಸಿನಿಮಾ ಮಾಡಿದ್ದ ಗಿರಿದೇವ್, ಬಾಲಿವುಡ್ ಮಂದಿಯನ್ನೂ ಈ ಸಿನಿಮಾ ಮೂಲಕ ಸೆಳೆದಿದ್ದರು. ಹೀಗಾಗಿ ‘ರಾಕೆಟ್ ಫಿಲಮ್್ಸ’ ಬ್ಯಾನರ್​ನಲ್ಲಿ ರಾಕ್ಸಿ, ಜಿ.ಎಂ.ಮಧು, ಡಾ. ಅರ್ಜಿತ್ ‘ವೈ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸೈಕಲಾಜಿಲ್ ಥ್ರಿಲ್ಲರ್ ಶೈಲಿಯಲ್ಲಿ ಸಿದ್ಧವಾಗಿರುವ ಈ ಸಿನಿಮಾದಲ್ಲಿ ಲಿಯೋನಿಲ್ಲಾ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಯುವನ್ ಮತ್ತು ಕಮಲ್ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ ಹಿಂದಿಯಲ್ಲಿ ‘ಅಬ್ ಕುಚ್ ಐಸಾ’ ಆಲ್ಬಂ ಹಾಡಿನಲ್ಲಿ ಕುಣಿದಿದ್ದ ಲಿಯೋನಿಲ್ಲಾ, ಮೊದಲ ಬಾರಿ ಬಾಲಿವುಡ್​ಗೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಮಾತುಬಾರದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

‘2016ರಲ್ಲಿ ‘ಜೀರೋ’ ಸಿನಿಮಾ ಮಾಡಿದ್ದೆ. ಆ ಚಿತ್ರದ ಹಕ್ಕನ್ನು ಬಾಲಿವುಡ್​ನ ರಾಕೆಟ್ ಫಿಲಮ್ಸ್​ನವರು ತೆಗೆದುಕೊಂಡಿದ್ದರು. ಈಗ ಅದೇ ಟೀಮ್ ‘ವೈ’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದೇನೆ. ಹಾಗಂತ ಇದು ನನ್ನ ಈ ಹಿಂದಿನ ‘ಜೀರೋ’ ಸಿನಿಮಾದ ರಿಮೇಕ್ ಅಲ್ಲ. ಇದ್ದು ಪಕ್ಕಾ ಹಾರರ್ ಥ್ರಿಲ್ಲರ್ ಶೈಲಿಯ ಸಿನಿಮಾ. ‘ವೈ’ ಎಂಬುದಿಲ್ಲಿ ಒಂದು ಚಿಹ್ನೆ. ಅದರ ಸುತ್ತ ಇಡೀ ಸಿನಿಮಾ ಸಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಗಿರಿದೇವ್.

ಕನ್ನಡದ ‘ಜೀರೋ’ ಸಿನಿಮಾದಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಕಾರ್ತಿಕ್ ಮಲ್ಲೂರ್ ಮತ್ತು ಸಂಕಲನಕಾರ ವಿನೋದ್ ಬಸವರಾಜ್ ಇಲ್ಲಿಯೂ ಮುಂದುವರಿದಿದ್ದಾರೆ. ಇನ್ನುಳಿದಂತೆ ಮರು ಸಹೋದರರು ಸಂಗೀತ ನೀಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ವೈ’, ಸೆನ್ಸಾರ್ ಮುಂದಿದೆ. ಎಲ್ಲ ಅಂದುಕೊಂಡಂತೆ ಆದರೆ, ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.

‘ವೈ’ ಶೀರ್ಷಿಕೆಯ ಬಾಲಿವುಡ್ ಸಿನಿಮಾ ನಿರ್ದೇಶಿಸಿದ್ದು ಖುಷಿಯ ವಿಚಾರ. ಕನ್ನಡದ ನಾಯಕಿ, ಛಾಯಾಗ್ರಾಹಕ ಮತ್ತು ಸಂಕಲನಕಾರರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಇನ್ನೇನು ಶೀಘ್ರದಲ್ಲಿ ಟ್ರೇಲರ್ ಮೂಲಕ ಆಗಮಿಸಲಿದ್ದೇವೆ. | ಗಿರಿದೇವ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net