

ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ನಟರಾದ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ತಾರಾಗಣದಲ್ಲಿರುವ ಚಿತ್ರ ‘45’. ಅಂದುಕೊಂಡಂತಾಗಿದ್ದರೆ ಸಿನಿಮಾ ಇದೇ ಆಗಸ್ಟ್ 15ಕ್ಕೆ ತೆರೆಗೆ ಬರಬೇಕಾಗಿತ್ತು. ಆದರೆ, ರಿಲೀಸ್ ಆಗಲಿಲ್ಲ. ಈ ಬಗ್ಗೆ ಚಿತ್ರತಂಡವು ಕಾರಣ ನೀಡಿರಲಿಲ್ಲ. ಉಪೇಂದ್ರ ಅಭಿನಯಿಸಿದ್ದ ತಮಿಳಿನ ‘ಕೂಲಿ’ ಅಂದೇ ಬಿಡುಗಡೆಯಾಗಿತ್ತು. ಹಾಗೆಯೇ, ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವುದರಿಂದಾಗಿ ‘45’ ಚಿತ್ರವನ್ನು ರಿಲೀಸ್ ಮಾಡಿಲ್ಲ ಎಂಬ ಸುದ್ದಿ ಹರಡಿತ್ತು. ಆದರೆ, ಇದೀಗ ಯಾವ ಕಾರಣಕ್ಕಾಗಿ ‘45’ ತಡವಾಗಿದೆ ಎಂಬುದು ಮಾಹಿತಿ ಸಿಕ್ಕಿದೆ. ಹಾಲಿವುಡ್ ಸಿನಿಮಾಗಳ ವಿಎಫ್ಎಕ್ಸ್ಗಾಗಿ ಕೆಲಸ ಮಾಡಿರುವ ಕೆನಡಾದ ‘ಮಾರ್ಜ್’ ಸಂಸ್ಥೆಯು ‘45’ ಚಿತ್ರಕ್ಕೆ ವಿಎ್ಎಕ್ಸ್ ಕೆಲಸ ಮಾಡುತ್ತಿದೆ. ಸಿಜೆ ಕಾರ್ಯಗಳು ಪೂರ್ಣವಾಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಭಾರತೀಯ ಸಿನಿಮಾಗಳಲ್ಲೇ ಅತಿಹೆಚ್ಚು ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆಯಾಗುತ್ತಿರುವ ಸಿನಿಮಾ ಎಂಬ ಖ್ಯಾತಿ ‘45’ ಚಿತ್ರದ್ದು. ಹೀಗಾಗಿ ಸಮಯವೂ ಹೆಚ್ಚು ಬೇಕಾಗಿದೆ. ಈ ಕೆಲಸಗಳು ಪೂರ್ಣವಾಗಿರದ ಕಾರಣಕ್ಕಾಗಿ ಸಿನಿಮಾ ವಿಳಂಬವಾಗಿದೆ ಎಂದು ‘ಮಾರ್ಜ್’ ಸಂಸ್ಥೆಯ ಸಿಜೆ ತಂತ್ರಜ್ಞ, ಮುಖ್ಯಸ್ಥ ಯಶ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
‘‘45’ ಚಿತ್ರಕ್ಕೆ ನಮ್ಮ ಸಂಸ್ಥೆ ಸಿಜೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಸಂಸ್ಥೆಯು ವಿಎಫ್ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಚಿತ್ರವಾಗಿದ್ದು, ಗ್ರಾಫಿಕ್ಸ್‌ಗೆ ಹೆಚ್ಚು ಮಹತ್ವ ನೀಡಲಾಗಿದೆ. ಈ ಗ್ರಾಫಿಕ್ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದಾಗಿ ಆ.14ಕ್ಕೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ಕ್ಷಮೆ ಕೇಳುತ್ತೇವೆ. ಸೆ.16ರೊಳಗೆ ವಿಎಫ್ಎಕ್ಸ್ ಕಾರ್ಯಗಳು ಪೂರ್ಣಗೊಳ್ಳಲಿವೆ. ಇದಾದ ಬಳಿಕ ಇನ್ನೊಂದು ತಿಂಗಳು ಕೆಲ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿರುತ್ತವೆ. ಅ.16ರೊಳಗೆ ಚಿತ್ರ ತೆರೆಗೆ ಬರಲು ಸಿದ್ಧವಾಗಲಿದೆ. ಚಿತ್ರ ಬಿಡುಗಡೆ ಸ್ವಲ್ಪ ತಡವಾದರೂ ಅತ್ಯುತ್ತಮ ತಂತ್ರಜ್ಞಾನದಿಂದ ಕೂಡಿರಲಿದೆ. ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಸದ್ಯದಲ್ಲೇ ತಿಳಿಸಲಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.