‘ಬಿಗ್ ಬಾಸ್’ ಸ್ವಲ್ಪ ಮುಂದಕ್ಕೆ ... ಮುಂದಿನ ವಾರದ ಮಧ್ಯದಲ್ಲಿ ಪ್ರಾರಂಭ

Big Boss - Final
Published on

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಬಿಗ್ ಬಾಸ್’ ಸೀಸನ್ ಎಂಟರ ವರ್ಷನ್ 2 ಜೂನ್ 21ರ ಸೋಮವಾರರಿಂದ ಪ್ರಾರಂಭವಾಗಬೇಕಿತ್ತು. ಆದರೆ, ಮೂಲಗಳ ಪ್ರಕಾರ ಅದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಮುಂದಿನ ಬುಧವಾರ ಅಥವಾ ಗುರುವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೊದಲ ಸುದ್ದಿಯಂತೆ, ಜೂನ್ 20ರ ಭಾನವಾರದಂದು ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಸುದೀಪ್ ಸ್ಪರ್ಧಿಗಳನ್ನು ಬರಮಾಡಿಕೊಂಡು, ಮನೆಯೊಳಕ್ಕೆ ಕಳುಹಿಸಬೇಕಿತ್ತು. ಆದರೆ, 21ಕ್ಕೆ ಲಾಕ್‌ಡೌನ್ ತೆರವಾಗುವುದರಿಂದ, ಚಿತ್ರೀಕರಣ ಏನಿದ್ದರೂ ಸೋಮವಾರದಿಂದಲೇ ಶುರುವಾಗಬೇಕು. ಸೋಮವಾರವೇ ಚಿತ್ರೀಕರಣ ಶುರು ಮಾಡಿ, ಅದೇ ದಿನ ಪ್ರಸಾರ ಮಾಡುವುದು ಕಷ್ಟವಾಗುವುದರಿಂದ, ಪ್ರಸಾರವನ್ನು ಒಂದೆರೆಡು ದಿನ ಮುಂದೂಡಲಾಗುತ್ತದಂತೆ. ಅದರಂತೆ ಬುಧವಾರ ಅಥವಾ ಗುರುವಾರ ಕಾರ್ಯಕ್ರಮ ಅಧಿಕೃತವಾಗಿ ಪ್ರಾರಂಭವಾಗುವ ಸಾಧ್ಯತೆ ಇದೆ.

ಈಗಾಗಲೇ, ಸ್ಪರ್ಧಿಗಳು ಪುನಃ ಮನೆಗೆ ಹೋಗುವುದಾಗಿ ಹೇಳಿಕೊಂಡಿರುವ ಪ್ರೋಮೋಗಳು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿವೆ. ಆ ಪ್ರೋಮೋಗಳಲ್ಲಿ ಕಾರ್ಯಕ್ರಮ ಪ್ರಸಾರದ ದಿನಾಂಕ ನಮೂದಾಗಿಲ್ಲ. ಪ್ರಸಾರದ ದಿನಾಂಕ ಸ್ಪಷ್ಟವಾದ ನಂತರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಕಾರ್ಯಕ್ರಮದ ಪ್ರಸಾರದ ಗೊಂದಲವಿದ್ದರೂ, ಈಗಾಗಲೇ ಸ್ಪರ್ಧಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸ್ಪಷ್ಟತೆ ಸಿಗುತ್ತಿದ್ದಂತೆಯೇ, ಅವರೆಲ್ಲರೂ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡಲಿದ್ದಾರೆ. ಕಳೆದ ತಿಂಗಳು ಲಾಕ್‌ಡೌನ್‌ನಿಂದ ಕಾರ್ಯಕ್ರಮ ನಿಂತಾಗ, 72 ದಿನಗಳಾಗಿದ್ದವು. 11 ಸ್ಪರ್ಧಿಗಳು ಕಾರ್ಯಕ್ರಮದಲ್ಲಿದ್ದರು. ಇದೀಗ ಸ್ಪರ್ಧಿಗಳಾದ ಶುಭಾ ಪೂಂಜ, ನಿಧಿ ಸುಬ್ಬಯ್ಯ, ವೈಷ್ಣವಿ, ಪ್ರಶಾಂತ್ ಸಂಬರಗಿ, ಮಂಜು, ಶಮಂತ್, ಚಕ್ರವರ್ತಿ ಚಂದ್ರಚೂಡ್, ಅರವಿಂದ್, ದಿವ್ಯ ಸುರೇಶ್, ರಘು ಗೌಡ ಮತ್ತು ಪ್ರಿಯಾಂಕಾ ತಿಮ್ಮೇಶ್, ‘ಬಿಗ್ ಬಾಸ್’ ಮನೆಗೆ ವಾಪಸ್ಸಾಗಲಿದ್ದಾರೆ. ಇನ್ನು, ಅನಾರೋಗ್ಯದಿಂದ ಕಾರ್ಯಕ್ರಮ ನಿಲ್ಲುವುದಕ್ಕೆ ಕೆಲವು ದಿನಗಳ ಮುಂಚೆ ಮನೆಯಿಂದ ನಿರ್ಗಮಿಸಿದ್ದ ದಿವ್ಯ ಉರುಡುಗ ಸಹ ವರ್ಷನ್ 2ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net