

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಾಡೆಲಿಂಗ್ ಲೋಕದಿಂದ ಚಿತ್ರರಂಗಕ್ಕೆ ಬಂದು "ಅಮೃತ ಘಳಿಗೆ', "ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಸೇರಿ ಏಳು ಚಿತ್ರಗಳಲ್ಲಿ ನಟಿಸಿರುವ ಸಂಹಿತಾ ವಿನ್ಯಾ, ಇದೀಗ ಬ್ಯಾಕ್ ಟು ಬ್ಯಾಕ್ ಏಳು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. "ಮೆಜೆಸ್ಟಿಕ್ 2', "ಹೇ ಪ್ರಭು', "ಮಿಕ್ಸಿಂಗ್ ಪ್ರೀತಿ', "ಸ್ವಾಭಿಮಾನಿ', "ಆಯುಧ', "ಯಾಕೋ ಬೇಜಾರು', "ವಿದೂಶಕ', "ಜಿಎಸ್ಟಿ' ಮತ್ತು ತಮಿಳಿನ "ಮಿಕ್ಸಿಂಗ್ ಕಾದಲ್' ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಎಲ್ಲ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ದಸರಾ ಹಬ್ಬದೊಳಗೆ ಮೂರ್ನಾಲ್ಕು ಚಿತ್ರಗಳು ತೆರೆಗೆ ಬರುವ ನಿರೀಕ್ಷೆ ಇದೆ.
ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕ ಸಂಹಿತಾ, "ಒಪ್ಪಿದ್ದ ಎಲ್ಲ ಚಿತ್ರಗಳ ಶೂಟಿಂಗ್ ಮುಗಿಸಿ, ಸದ್ಯ ಬ್ರೇಕ್ನಲ್ಲಿದ್ದೇನೆ. ಜತೆಗೆ ಹೊಸ ಕಥೆಗಳನ್ನೂ ಕೇಳುತ್ತಿದ್ದೇನೆ. ಬಳಿಕ ಹಿಂದಿ, ತಮಿಳು ಪ್ರಾಜೆಕ್ಟ್ಗಳ ಮಾತುಕತೆಗೆ ಮೊದಲು ಮುಂಬೈ ನಂತರ ಚೆನ್ನೈಗೆ ತೆರಳಲಿದ್ದೇನೆ' ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಕನ್ನಡದ ಜತೆ ತಲಾ ಒಂದು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ಅವರು, ಹಿಂದಿ ಗಜಲ್ನಲ್ಲೂ ಕಾಣಿಸಿಕೊಂಡಿದ್ದಾರೆ. "ಇತ್ತೀಚೆಗೆ ಬಾಲಿವುಡ್ನಿಂದಲೂ ಆಫರ್ಸ್ ಬಂದವು. ಆದರೆ, ಕನ್ನಡದಲ್ಲಿ ಬಿಜಿಯಿದ್ದ ಕಾರಣ ಒಪ್ಪಿರಲಿಲ್ಲ. ಹೆಸರಾಂತ ಗಜಲ್ ಗಾಯಕ ಚಂದನ್ ದಾಸ್ರ ಹಿಂದಿ ಗಜಲ್ ಶೂಟಿಂಗ್ ನಂದಿಬೆಟ್ಟದಲ್ಲಿ ನಡೆಸಿದ ಕಾರಣ, ನಟಿಸಿದೆ' ಎಂದು ಮಾಹಿತಿ ನೀಡುತ್ತಾರೆ.
"ಹೇ ಪ್ರಭು' ಚಿತ್ರದಲ್ಲಿ ಯೂಟ್ಯೂಬರ್ ಪಾತ್ರದಲ್ಲಿ ನಟಿಸಿರುವ ಸಂಹಿತಾ, "ಜಿಎಸ್ಟಿ'ಯಲ್ಲಿ ಸ್ಪೆಷಲ್ ಸಾಂಗ್ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. "ಚಂದನ್ ಶೆಟ್ಟಿ ಸಂಗೀತದಲ್ಲಿ ಸೃಜನ್ ಲೋಕೇಶ್ ಜತೆ ಇರುವ ಲೋಕಲ್ ಟಪ್ಪಾಂಗುಚ್ಚಿ ಹಾಡಿದು. ಇದುವರೆಗೂ ನಾಯಕಿಯಾಗಿ ನಟಿಸಿದ್ದು, ಮೊದಲ ಬಾರಿ ಸ್ಪೆಷಲ್ ಸಾಂಗ್ನಲ್ಲಿ ನಟಿಸುವುದು ವಿಭಿನ್ನ ಅಂತನ್ನಿಸಿ ಒಪ್ಪಿಕೊಂಡೆ' ಎನ್ನುತ್ತಾರೆ. ಹಾಗೇ ಕನ್ನಡದ "ಮಿಕ್ಸಿಂಗ್ ಪ್ರೀತಿ', ತಮಿಳಿನಲ್ಲಿ "ಮಿಕ್ಸಿಂಗ್ ಕಾದಲ್' ಹೆಸರಿನಲ್ಲಿ ಮೂಡಿಬರುತ್ತಿದೆ. "ಇದು ಡಬ್ ಸಿನಿಮಾ ಅಲ್ಲ. ಕನ್ನಡ ಮತ್ತು ತಮಿಳಿನಲ್ಲಿ ಎರಡು ಬಾರಿ ಚಿತ್ರೀಕರಣ ಮಾಡಿದೆವು. ಮೊದಲು ಕನ್ನಡದಲ್ಲಿ ನಂತರ ತಮಿಳಿನಲ್ಲಿ ರಿಲೀಸ್ ಆಗಲಿದೆ' ಎನ್ನುತ್ತಾರೆ.
ಈಗೀಗ ಸಂಹಿತಾ ಸಿನಿಮಾಗಳ ವಿಷಯದಲ್ಲಿ ಬದಲಾಗಿದ್ದಾರಂತೆ. "ಎಲ್ಲರಿಗೂ ಟೈಮ್ ಕೊಟ್ಟಾಗಿದೆ. ಇನ್ನು ನನಗೆ ನಾನು ಸಮಯ ಕೊಡಬೇಕು. ಹೀಗಾಗಿ ಬರುವ ಎಲ್ಲ ಕಥೆಗಳನ್ನೂ ಒಪ್ಪಿಕೊಳ್ಳದೇ, ಹೆಚ್ಚು ಎಚ್ಚರಿಕೆ ವಹಿಸುತ್ತೇನೆ. ಕೆಲ ಕಥೆಗಳನ್ನು ಕೇಳಿ ಒಂದನ್ನು ಓಕೆ ಮಾಡಿದ್ದೇನೆ. ಅದು ಕೆಲ ದಿನಗಳಲ್ಲೇ ಸೆಟ್ಟೇರಲಿದೆ. ಹಾಗೇನಾದರೂ ನಾನಂದುಕೊಂಡಂತಹ ಪಾತ್ರ ಸಿಗಲಿಲ್ಲವೆಂದರೆ ಸಮಯ ತೆಗೆದುಕೊಂಡು ನಿರ್ದೇಶನ, ನಿರ್ಮಾಣಕ್ಕೂ ಮುಂದಾಗುವ ಆಲೋಚನೆ ಇದೆ' ಎಂದು ಭರವಸೆಯಿಂದ ಹೇಳಿಕೊಳ್ಳುತ್ತಾರೆ ಸಂಹಿತಾ.