ಆಸ್ತಿ ಕಡಿಮೆ, ಅನುಭವ ಜಾಸ್ತಿ: ಹಿರಿಯ ನಟ ಉಮೇಶಣ್ಣ

dfgasd
Published on

‘ಕಥಾ ಸಂಗಮ’ ನಂತರ ಹಿರಿಯ ನಟ ಉಮೇಶಣ್ಣ ಮತ್ತೆಂದೂ ತಿರುಗಿ ನೋಡಲಿಲ್ಲ. ಆ ಚಿತ್ರದಿಂದ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗಿದ್ದಷ್ಟೇ ಅಲ್ಲ, ಆ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯೂ ಸಿಕ್ಕಿತು. ಹೀಗೆ ಶುರುವಾದ ಅವರ ಚಿತ್ರಪಯಣಕ್ಕೆ ಇದೀಗ 47 ವರ್ಷಗಳು. ಆದರೆ, ಅಷ್ಟೇ ಅಲ್ಲ, ಉಮೇಶ್ ಅವರು ಚಿತ್ರರಂಗಕ್ಕೆ ಬಂದು 62 ವರ್ಷಗಳಾಗಿವೆ. ಅವರು ಬಾಲನಟನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ ‘ಮಕ್ಕಳ ರಾಜ್ಯ’ ಚಿತ್ರವು ಬಿಡುಗಡೆಯಾಗಿ ಇತ್ತೀಚೆಗೆ 62 ವರ್ಷಗಳಾಗಿವೆ. ಈ ನೆನಪಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಅವರನ್ನು ಸನ್ಮಾನಿಸಿದೆ. ಈ ಸಂದರ್ಭದಲ್ಲಿ ‘ವಿಜಯವಾಣಿ’ ಜತೆಗೆ ತಮ್ಮ ಚಿತ್ರಪಯಣವನ್ನು ಉಮೇಶ್ ನೆನಪಿಸಿಕೊಂಡಿದ್ದಾರೆ.

‘ಮಕ್ಕಳ ರಾಜ್ಯ’ ಚಿತ್ರಕ್ಕೆ ಆಯ್ಕೆಯಾದ ಬಗೆಯನ್ನು ನೆನಪಿಸಿಕೊಳ್ಳುವ ಉಮೇಶ್, ‘ಎಂ.ಸಿ. ಮಹದೇವ ಸ್ವಾಮಿಗಳ ಕನ್ನಡ ಥಿಯೇಟರ್ಸ್ ಸಂಸ್ಥೆಯ ನಾಟಕಗಳಲ್ಲಿ ನಾನು ಬಾಲಪಾತ್ರಗಳನ್ನು ಮಾಡುತ್ತಿದ್ದೆ. ತಿಪಟೂರಿನಲ್ಲಿ ‘ಚಂದ್ರಹಾಸ’ ನಾಟಕ ನಡೆಯುತ್ತಿತ್ತು. ಆಗ ಬಿ.ಆರ್. ಪಂತುಲು ಅವರು ‘ಮಕ್ಕಳ ರಾಜ್ಯ’ ಚಿತ್ರಕ್ಕಾಗಿ ನಾಯಕನ ಪಾತ್ರಕ್ಕೆ ಹುಡುಕಾಟ ನಡೆಸುತ್ತಿದ್ದರು. ಆ ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ನನ್ನ ಅಭಿನಯವನ್ನು ಮೆಚ್ಚಿ ಮದರಾಸಿಗೆ ಕರೆದುಕೊಂಡು ಹೋದರು. ಸಿನಿಮಾ ನಟನೆಯೇ ಬೇರೆ. ನಾಟಕದ ನಟನೆಯೇ ಬೇರೆ. ಅದನ್ನು ಕಲಿಯುವುದಕ್ಕೆ ಸ್ವಲ್ಪ ತೊಂದರೆಯಾಯಿತು. ಮೂರು ಭಾಷೆಗಳಲ್ಲಿ ಆ ಚಿತ್ರ ನಿರ್ವಣವಾಯಿತು. 10 ತಿಂಗಳ ಕಾಲ ದಿಗ್ಗಜ ಕಲಾವಿದರ ಸಂಸರ್ಗ ಸಿಕ್ಕಿತು. ನಾಟಕ ಸಂಸ್ಥೆಯ ಜತೆಗೆ ಅಗ್ರೀಮೆಂಟ್ ಇದ್ದುದರಿಂದ ವಾಪಸ್ಸು ರಂಗಭೂಮಿಗೆ ಹೋದೆ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ನನಗೆ 15 ವರ್ಷ. ಚಿಕ್ಕವನ ಪಾತ್ರಕ್ಕೆ ದೊಡ್ಡವನಾದೆ, ದೊಡ್ಡವನ ಪಾತ್ರಕ್ಕೆ ಚಿಕ್ಕವನಾದೆ. ಹಾಗಾಗಿ, ಒಂದಿಷ್ಟು ವರ್ಷ ಸಿನಿಮಾದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ’ ಎನ್ನುತ್ತಾರೆ.

ಒಂದಿಷ್ಟು ವರ್ಷ ರಂಗಭೂಮಿಯಲ್ಲಿ ತೊಡಿಗಿಸಿಕೊಂಡಿದ್ದ ಉಮೇಶ್ ಅದನ್ನು ಬಿಟ್ಟು ಬೆಂಗಳೂರಿಗೆ ಬಂದರಂತೆ. ಅಷ್ಟರಲ್ಲಿ ಪುಟ್ಟಣ್ಣ ದೊಡ್ಡ ನಿರ್ದೇಶಕರಾಗಿದ್ದರು. ಅವರು ‘ಕಥಾ ಸಂಗಮ’ದಲ್ಲಿ ಪಾತರ ಕೊಟ್ಟರಂತೆ. ಹಾಗೆ ಶುರುವಾಗಿದ್ದು, ಇಲ್ಲಿಯವರೆಗೂ 800 ಚಿತ್ರಗಳಲ್ಲಿ ನಟಿಸಿದ್ದೇನೆ. ನಾವು ಪುಣ್ಯವಂತರರು. ದಿಗ್ಗಜರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆಸ್ತಿ ಮಾಡಲಿಲ್ಲ. ಆದರೆ, ಒಳ್ಳೆಯ ಅನುಭವ ಸಿಕ್ಕಿತು. ಜನ ಗುರುತಿಸುತ್ತಾರೆ. ಅಷ್ಟೇ ಸಾಕು’ ಎನ್ನುತ್ತಾರೆ ಉಮೇಶ್.

ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಗಾಯನ

ಇತ್ತೀಚಿನ ವರ್ಷಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ ಎನ್ನುವ ಅವರು, ‘ಹೊಸಬರಿಗೆ ನಮ್ಮ ಬಗ್ಗೆ ಪರಿಚಯವಿಲ್ಲ. ಆದರೂ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ನಟಿಸುತ್ತಿರುತ್ತೇನೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲೊಂದು ಹಾಡನ್ನೂ ಹಾಡಿದ್ದೇನೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net