

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಪ್ಯಾನ್ ಇಂಡಿಯಾ ಪರಿಕಲ್ಪನೆ ಪಾರಮ್ಯದ ನಡುವೆ ಬಾಲಿವುಡ್ ಕಂಟೆಂಟ್ ಮತ್ತು ಪ್ರತಿಭೆಗಳಿಗಾಗಿ ದಣ ಭಾರತದ ಚಿತ್ರರಂಗಗಳತ್ತ ಮುಖ ಮಾಡಿದೆ. ಈಗಾಗಲೇ ರಶ್ಮಿಕಾ ಮಂದಣ್ಣ ಬಿಟೌನ್ನಲ್ಲಿ ಸೆಟಲ್ ಆಗಿದ್ದಾರೆ. ಹಾಗೇ ಎ. ಹರ್ಷ ಮತ್ತು ಪವನ್ ಒಡೆಯರ್ ಅವರಂತಹ ಕನ್ನಡ ನಿರ್ದೇಶಕರು ಹಿಂದಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇನ್ನು ಪ್ರಕಾಶ್ ಬೆಳವಾಡಿ, ಪ್ರಕಾಶ್ ರಾಜ್, ಯಶ್ ಶೆಟ್ಟಿ, ಬಾಲಾಜಿ ಮನೋಹರ್ ಸೇರಿ ಹಲವು ಕನ್ನಡದ ಕಲಾವಿದರು ಹಿಂದಿ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಕನ್ನಡದ ನಾಯಕ ನಟನೊಬ್ಬ, ಬಾಲಿವುಡ್ನಲ್ಲಿ ಹೀರೋ ಆಗಿ ಡೆಬ್ಯೂ ಮಾಡಲು ರೆಡಿಯಾಗಿದ್ದಾರೆ.
ಹೌದು, "ಅಲೆ', "ನಂಜುಂಡಿ ಕಲ್ಯಾಣ', "ಮಡಮಕ್ಕಿ' ಸೇರಿ ಕಳೆದ ವರ್ಷ ತೆರೆಗೆ ಬಂದ "ಮಿ. ನಟ್ವರ್ಲಾಲ್' ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ತನುಷ್ ಶಿವಣ್ಣ ಇದೀಗ ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಹಿಂದಿ ಸಿನಿಮಾ ನಿರ್ಮಾಪಕ ನಿತಿನ್ ಆಹಿರ್, ಜಾಲತಾಣದಲ್ಲಿ ತನುಷ್ ಜತೆಗಿನ ಫೋಟೋ ಹಂಚಿಕೊಂಡು, "ವೆಲ್ಕಮ್ ಟು ಬಾಲಿವುಡ್ ಬ್ರದರ್' ಎಂದು ಪೋಸ್ಟ್ ಮಾಡಿದ್ದರು. ಈ ಕುರಿತು ತನುಷ್, "ನಾನು ಓದಿದ್ದು ಮುಂಬೈನಲ್ಲಾದ ಕಾರಣ, ಮೊದಲಿನಿಂದಲೂ ಬಾಲಿವುಡ್ನ ಹಲವರು ಪರಿಚಯವಿದ್ದರು. "ಮಿ. ನಟ್ವರ್ಲಾಲ್' ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದ ಅಲ್ಲಿನ ಗೆಳೆಯರು, ಬಾಲಿವುಡ್ನಲ್ಲಿ ನಟಿಸುವಂತೆ ಹೇಳುತ್ತಿದ್ದರು. ಒಂದು ತಂಡದ ಜತೆ ಕಳೆದ ಮೂರು ತಿಂಗಳಿನಿಂದ ಚರ್ಚಿಸುತ್ತಿದ್ದೇನೆ. ಒನ್ ಲೈನ್ ಕಥೆ ಹೇಳಿದ್ದಾರೆ. ನಾಯಕ ಮತ್ತು ನಾಯಕಿ ಇಬ್ಬರೂ ದಣ ಭಾರತದವರೇ ಆಗಿರಲಿದ್ದಾರೆ. ಕೊನೆಯ ಹಂತದ ಮಾತುಕತೆ ಬಾಕಿಯಿದೆ' ಎಂದು ಮಾಹಿತಿ ನೀಡುತ್ತಾರೆ.
ತನುಷ್ ಶಿವಣ್ಣ ಸದ್ಯ ಕನ್ನಡದಲ್ಲಿ "ಬಾಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ""ಬಾಸ್' ಶೂಟಿಂಗ್ ಅರ್ಧದಷ್ಟು ಮುಗಿದಿದ್ದು, ಹಗಲು&ರಾತ್ರಿ ಎನ್ನದೇ ಚಿತ್ರೀಕರಣ ನಡೆಸುತ್ತಿದ್ದೇವೆ. ಜುಲೈನಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಇದೆ. 2011ರಲ್ಲಿ ದರ್ಶನ್ ಸರ್ ನಟಿಸಿದ್ದ "ಬಾಸ್' ಚಿತ್ರ ಬಿಡುಗಡೆಯಾಗಿತ್ತು. ಆದರೆ, ನಮ್ಮ ಚಿತ್ರಕ್ಕೂ ಅದಕ್ಕೂ ಸಂಬಂಧವಿಲ್ಲ. ಕಥೆಯಲ್ಲಿ ನಾಯಕನನ್ನು ಎಲ್ಲರೂ ಬಾಸ್ ಎಂದು ಕರೆಯುತ್ತಿರುತ್ತಾರೆ. ಹೀಗಾಗಿ ಅದನ್ನೇ ಶೀರ್ಷಿಕೆ ಮಾಡಿಕೊಂಡಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ ತನುಷ್.