Gopalakrishna Deshpande Interview; ಕೊತ್ತಲವಾಡಿಯಲ್ಲಿ ಬಾಬಣ್ಣ ಪಾತ್ರ ಮತ್ತು ಮುಂದಿನ ಚಿತ್ರಗಳ ಬಗ್ಗೆ ನಟನ ಮಾತು

asdvdv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನಟ ಗೋಪಾಲಕೃಷ್ಣ ದೇಶಪಾಂಡೆ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಕೆಲವೇ ವರ್ಷಗಳಲ್ಲಿ ಸ್ಯಾಂಡಲ್​ವುಡ್​ನ ಬೇಡಿಕೆಯ ನಟ ಎಂದು ಗುರುತಿಸಿಕೊಂಡಿದ್ದಾರೆ. ಜತೆಗೆ ಪೋಷಕ ಪಾತ್ರಗಳಿಗೂ ಸ್ಟಾರ್​ಡಂ ತಂದುಕೊಟ್ಟ ಕೆಲವೇ ಕಲಾವಿದರಲ್ಲಿ ಅವರೂ ಒಬ್ಬರು. ಇದೀಗ ಪೃಥ್ವಿ ಅಂಬಾರ್​, ಕಾವ್ಯ ಶೈವ ನಟಿಸಿರುವ, ಶ್ರೀರಾಜ್​ ನಿರ್ದೇಶನದ, ಯಶ್​ ತಾಯಿ ಪುಷ್ಪಾ ಅರುಣ್​ ಕುಮಾರ್​ ಮೊದಲ ಬಾರಿ ನಿರ್ಮಿಸಿರುವ "ಕೊತ್ತಲವಾಡಿ' ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶುಕ್ರವಾರ ಸಿನಿಮಾ ತೆರೆಗೆ ಬಂದಿದ್ದು, ಗುಜರಿ ಬಾಬು ಪಾತ್ರದ ಮೂಲಕ ಗೋಪಾಲಕೃಷ್ಣ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

"ಕಾವ್ಯ ಮತ್ತು ಪೃಥ್ವಿ ಕೆಮಿಸ್ಟ್ರಿ ಇರುವಂತೆಯೇ, ಚಿತ್ರದಲ್ಲಿ ನನ್ನ ಮತ್ತು ಪೃಥ್ವಿ ನಡುವೆ ಕೆಮಿಸ್ಟ್ರಿ, ಬಯಾಲಜಿ, ಫಿಸಿಕ್ಸ್​ ಎಲ್ಲ ವರ್ಕ್​ ಆಗಿದೆ. ಎಲ್ಲರೂ ನಟಿಸಲು ಇಷ್ಟಪಡುವಂತಹ ಪಾತ್ರ ನನಗೆ ಸಿಕ್ಕಿದೆ. ನಮ್ಮೂರ ಸುತ್ತಮುತ್ತ ಸ್ಥಳಿಯ ನಾಯಕರನ್ನು ನೋಡಿರುತ್ತೇವೆ. ಅಂತಹ ಪಾತ್ರವಿದು' ಎನ್ನುತ್ತಾರೆ. ಹಾಗೇ "ಗರುಡ ಗಮನ ವೃಷಭ ವಾಹನ', "ಶಾಖಾಹಾರಿ', "ಸಪ್ತಸಾಗರದಾಚೆ ಎಲ್ಲೋ', "ಯುವ', "ಪೌಡರ್​' ಸೇರಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಅವರು, ತಮ್ಮ ಸಿದ್ಧತೆಯ ಬಗ್ಗೆ, "ಆ್ಯಕ್ಟಿಂಗ್​ ಈಸ್​ ನಥಿಂಗ್​ ಬಟ್​ ರಿಯಾಕ್ಟಿಂಗ್​. ಎದುರಿರುವ ಕಲಾವಿದರು ಏನು ಮಾತನಾಡುತ್ತಾರೆ, ಅದನ್ನು ನೋಡಿಕೊಂಡು ಪ್ರತಿಕ್ರಿಯಿಸುವುದು. ಆದರೆ, ಅದಕ್ಕೂ ಮುನ್ನ ನಿರ್ದೇಶಕರ ಮಾತನ್ನು ಕೇಳಿಸಿಕೊಳ್ಳುವುದು ತುಂಬ ಮುಖ್ಯ. ಜೀವನದಲ್ಲಿ ನಿಜ ಜೀವನದಲ್ಲಿ ಕೆಲ ಪಾತ್ರಗಳನ್ನು ನೋಡಿರಿತ್ತೀರಿ. ಅವನ್ನು ಅಳವಡಿಸಿಕೊಂಡರೆ ಮತ್ತಷ್ಟು ಸರಳವಾಗುತ್ತದೆ' ಎನ್ನುತ್ತಾರೆ.

ಮುಂದಿನ ಚಿತ್ರಗಳು

ನೀನಾಸಂನಲ್ಲಿ ಐದಾರು ವರ್ಷ ಅನುಭವ ಪಡೆದು, ಕಿರುತೆರೆಯಲ್ಲೂ ಕೆಲ ವರ್ಷ ಪಳಗಿದ್ದ ಗೋಪಾಲಕೃಷ್ಣರಿಗೆ "ಲೂಸಿಯಾ' ಮತ್ತು "ಉಳಿದವರು ಕಂಡಂತೆ' ನೋಡಿ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಚಿಗುರೊಡೆಯಿತಂತೆ. ""ಅವನೇ ಶ್ರೀಮನ್ನಾರಾಯಣ' ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದ ಅವರಿಗೆ "ಗರುಡ ಗಮನ ವೃಷಭ ವಾಹನ' ಬಳಿಕ ಅವಕಾಶಗಳು ಹೆಚ್ಚಾಗಿದ್ದು, ಸದ್ಯ ಟಿ.ಕೆ. ದಯಾನಂದ್​ ಅವರ "ಬೆಂಜಿ', "ಮ್ಯಾಕ್ಸ್​' ಯಶಸ್ಸಿನ ಬಳಿಕ ಸುದೀಪ್​ ಮತ್ತು ವಿಜಯ್​ ಕಾರ್ತಿಕೇಯ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ "ಕಿಚ್ಚ 47', ಪಿಆರ್​ಕೆ ಪ್ರೊಡಕ್ಷನ್ಸ್​ನಲ್ಲಿ ಒಂದು ವೆಬ್​ಸರಣಿ, ನಿರ್ದೇಶಕ ಸಂದೀಪ್​ ಸುಂಕದ್​ ಮತ್ತು ಧಿರೇನ್​ ರಾಮಕುಮಾರ್​ ಜೋಡಿಯ "ಪಬ್ಬಾರ್​' ಸೇರಿ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net