ಕರೊನಾ ಸೋಂಕಿತ ಗಾಯಕಿ ಕನ್ನಿಕಾ ಕಪೂರ್​ ಕೊನೆಗೂ ನಿರಾಳ; ಹಾಗಾದರೆ ಆಗಿದ್ದೇನು?

kannika
Published on

ಕಳೆದ ವಾರವಷ್ಟೇ ಕರೊನಾ ಸೋಂಕಿನಿಂದ ಆಸ್ಪತ್ರೆ ಪಾಲಾಗಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಆರಂಭದಲ್ಲಿ ಚಿಕಿತ್ಸೆ ವಿಚಾರದಲ್ಲಿ ಒಂದಷ್ಟು ಗಲಾಟೆ ಮಾಡಿಕೊಂಡು, ಸುದ್ದಿಯಾಗಿದ್ದರು. ಸತತ ನಾಲ್ಕು ಬಾರಿ ಪರೀಕ್ಷೆ ನಡೆಸಿದರೂ ಸೋಂಕಿನ ಬಗ್ಗೆ ಪಾಸಿಟಿವ್ ವರದಿ ಬಂದಿತ್ತು. ಇದೀಗ ಐದನೇ ವರದಿ ಕಂಡು ನಿರಾಳರಾಗಿದ್ದಾರೆ ಕನ್ನಿಕಾ. ಅಂದರೆ, ಸೋಂಕಿನ ವರದಿಯಲ್ಲಿ ನೆಗೆಟಿವ್​ ಬಂದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಸದ್ಯ ಲಖನೌದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನ್ನಿಕಾ, ಶೀಘ್ರದಲ್ಲಿ ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಆಗಲಿದ್ದಾರಂತೆ. ಐಸೋಲೇಶನ್​ ಅವಧಿ ಮುಗಿಯುತ್ತಿದ್ದಂತೆ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಮೊದಲು ಕನ್ನಿಕಾ ಆರೋಗ್ಯ ಕ್ಷಿಣಿಸುತ್ತಿದೆ. ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಸ್ಥಿತಿ ಗಂಭೀರವಾಗಿದೆ ಎಂಬಂಥ ಸುದ್ದಿ ಹರಿದಾಡಿದ್ದವು. ಆ ಎಲ್ಲ ವದಂತಿಗಳನ್ನು ಸಂಜಯ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ಆರ್‌ಕೆ. ಡಿಮನ್ ತಳ್ಳಿಹಾಕಿ, ಕನ್ನಿಕಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದಿದ್ದರು. ಅಂದಹಾಗೆ, ಮಾರ್ಚ್ 9ರಂದು ಲಂಡನ್‌ನಿಂದ ಹಿಂದಿರುಗಿದ್ದ ಕನ್ನಿಕಾ, ಮಾರ್ಚ್ 20ಕ್ಕೆ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕಿದ್ದರೂ ಪಾರ್ಟಿಗಳಿಗೆ ಹಾಜರಿ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ವರ್ತನೆ ಬಗ್ಗೆ ಖಂಡನೆ ವ್ಯಕ್ತವಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net