

ಚಿತ್ರ: ಕಂಗುವ
ನಿರ್ದೇಶನ: ಶಿವ
ನಿರ್ಮಾಣ: ಕೆ.ಇ.ಜ್ಞಾನವೇಲು
ತಾರಾಗಣ: ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ, ಯೋಗಿಬಾಬು ಮತ್ತಿತರರು
ಶಿವ ಸ್ಥಾವರಮಠ
ಅದು ಐದು ಗ್ರಾಮಗಳಿರುವ ದ್ವೀಪ. ಒಂದೊಂದು ಗ್ರಾಮಕ್ಕೂ ಒಂದೊಂದು ಇತಿಹಾಸ. ಅದರಲ್ಲಿ ಕಂಗುವನ (ಸೂರ್ಯ) ನಾಡು ಪೆರುಮಾಚಿ. ಯುದ್ಧವೇ ಜೀವನ ಎಂದು ಬದುಕುತ್ತಿರುವ ಜನ. ಇಂತಹ ನಾಡಿನ ಮೇಲೆ ರೋಮನ್ನರ ಕಣ್ಣು ಬೀಳುತ್ತದೆ. ರೋಮ್ ಸೈನಿಕರಿಗೆ ನೆಲೆಸಲು ಪೆರುಮಾಚಿ ಸೂಕ್ತ ನೆಲೆ ಎಂದು ಅದನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ಕಂಗುವನ ಎದುರು ಸೆಣೆಸುವುದು ಕಷ್ಟ ಎಂದು ತಿಳಿದು ಶತ್ರುವಿನ ಶತ್ರು ಮಿತ್ರ ಎಂಬಂತೆ ಅರತ್ತಿ ದ್ವೀಪದ ಅಧಿಪತಿ ಉಧೀರನ್ (ಬಾಬಿ ಡಿಯೋಲ್) ನೆರವು ಕೇಳುತ್ತಾರೆ. ಕಂಗುವನ ವಿರುದ್ಧ ದಂಡೆತ್ತಿ ಹೋದ ಉಧೀರನ್ ಮಕ್ಕಳು ಮಣ್ಣಾಗುತ್ತಾರೆ. ಬಳಿಕ ಉಧೀರನ್, ಕಂಗುವ ವಿರುದ್ಧ ಸಮರ ಸಾರುವುದೇ ಮುಂದಿನ ಕಥೆ. ಇಂತಹ ಫ್ಯಾಂಟಸಿ, ಅಡ್ವೆಂಚರ್ ಕಥೆಯಲ್ಲಿ 2024ರ ಕಾಲಘಟ್ಟವು ಬರುತ್ತದೆ. ಅದು ಯಾಕೆ? ಎಂದು ತಿಳಿಯಬೇಕಾದರೆ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಬೇಕಷ್ಟೇ.
ಕಥೆ ಕಟ್ಟುವಲ್ಲಿ ನಿರ್ದೇಶಕರ ಪರಿಶ್ರಮ ಕಾಣುತ್ತದೆ, ಆದರೆ, ಎರಡು ಕಾಲಘಟ್ಟವನ್ನು ಜೋಡಿಸುವಾಗ ವಹಿಸಬೇಕಾದ ನಾಜೂಕು ಹಾಗೂ ಸೂಕ್ಷ್ಮತೆ ಎದ್ದು ಕಾಣುವುದಿಲ್ಲ. ಮಗುವಿನ ಸುತ್ತ ಎರಡು ಅವಧಿಯ ಕಥೆ ಹೇಳಲು ಹೋಗಿರುವುದರಿಂದ ಎರಡರಲ್ಲೂ ಸಾಮ್ಯತೆ ಕಾಣುತ್ತದೆ. ಇನ್ನೊಂದಿಷ್ಟು ವಿಭಿನ್ನವಾಗಿ ತೋರಿಸುವ ಅವಕಾಶವಿತ್ತು. ಭಾವನಾತ್ಮಕ, ಸಾಹಸ ದೃಶ್ಯಗಳು ಇಡೀ ಸಿನಿಮಾವನ್ನು ನೋಡಿಸಿಕೊಳ್ಳುತ್ತವೆ.
‘ಕಂಗುವ’ ಹೈಲೈಟ್ ಎಂದರೆ ಅದು ಸೂರ್ಯ ಹಾಗೂ ಬಾಬಿ ಡಿಯೋಲ್. ಸೂರ್ಯ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡು, ಎರಡಕ್ಕೂ ಜೀವ ತುಂಬಿದ್ದಾರೆ. ಬಾಬಿ ಡಿಯೋಲ್ ಪಾತ್ರ, ವಸವಿನ್ಯಾಸ ಹೆಚ್ಚು ಗಮನಸೆಳೆಯುತ್ತದೆ. ಯೋಗಿ ಬಾಬು, ದಿಶಾ ಪಟಾನಿ ಮೊದಲ ಹದಿನೈದು ನಿಮಿಷ, ಕೊನೆಯ ಎರಡು ನಿಮಿಷಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಉಳಿದಂತೆ ಹೆಚ್ಚು ಪಾತ್ರಗಳನ್ನು ಸೃಷ್ಟಿಸಿ, ಅವುಗಳಿಗೆ ಕಥೆಯಲ್ಲಿ ಜಾಗ ನೀಡಲಾಗಿದೆ. ಸಾಹಸ ದೃಶ್ಯಗಳಿಗೆ ದೇವಿಶ್ರೀ ಪ್ರಸಾದ್ ಹಿನ್ನೆಲೆ ಸಂಗೀತ ರೋಮಾಂಚನಗೊಳಿಸುತ್ತದೆ. ವೆಟ್ರಿ ಪಳನಿಸ್ವಾಮಿ ಎರಡೂ ಕಾಲಘಟ್ಟದ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ಹೊಸ ಪಾತ್ರವೊಂದು ಪರಿಚಯಿಸಿದ್ದು, ಇದು ಪ್ರೇಕ್ಷಕರಿಗೆ ಮುಂದಿನ ಭಾಗ ವೀಕ್ಷಿಸಲು ಕೌತುಕ ಹೆಚ್ಚಿಸುತ್ತದೆ.