

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಹೆಸರು ಹಲವು ಹೀರೋಗಳೊಂದಿಗೆ ಕೇಳಿ ಬಂದರೂ, ಇದುವರೆಗೂ ಅವರ ಮದುವೆ ಆಗಿಲ್ಲ. ಏಕೆಂದರೆ, ಕಂಗನಾ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಅವರ ಸಮಕಾಲೀನರೆಲ್ಲ ಮದುವೆಯಾಗಿ ಗಂಡ, ಮನೆ, ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ. ಆದರೆ, ಕಂಗನಾ ಮಾತ್ರ ಮದುವೆಯಾಗುವ ಮಾತಾಡುತ್ತಿಲ್ಲ. ಹಾಗಾದರೆ, ಅವರು ಮದುವೆಯೇ ಆಗುವುದಿಲ್ಲವಾ? ಇಂಥದ್ದೊಂದು ಪ್ರಶ್ನೆ ಬರುವುದು ಸಹಜ.
ಈ ಕುರಿತು ಮಾತನಾಡಿರುವ ಕಂಗನಾ, ತನಗೆ ಮದುವೆಯಾಗುವುದಕ್ಕೆ ಇಷ್ಟವಿದ್ದರೂ ಅದು ಕಾರಣಾಂತರಗಳಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಮತ್ತು ಅದಕ್ಕೆ ಮಾಧ್ಯಮದವರೇ ನೇರ ಕಾರಣ ಎಂದು ಹೇಳಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರ ‘ಧಾಖಡ್’ನ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವಾಗಿ ಮಾತನಾಡಿದ್ದಾರೆ.
ಚಿತ್ರದಂತೆ ನಿಜಜೀವನದಲ್ಲೂ ಕಂಗನಾ ಟಾಂಬಾಯ್ ಆಗಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಚಿತ್ರದಲ್ಲಿ ನಾನು ಫೈಟ್ ಮಾಡಿದ್ದೇನೆ. ನಿಜ ಜೀವನದಲ್ಲೂ ಹಾಗೆ ಫೈಟ್ ಮಾಡುವುದಕ್ಕೆ ಸಾಧ್ಯವಾ? ಖಂಡಿತಾ ಇಲ್ಲ. ಸಮಸ್ಯೆ ಇರುವುದೇ ಇಲ್ಲಿ. ನಾನು ಮದುವೆಯಾಗದಿರುವುದಕ್ಕೆ ನಿಮ್ಮಂತವರೇ ಕಾರಣ. ನೀವು ನನ್ನ ಬಗ್ಗೆ ಏನೇನೋ ವದಂತಿಗಳನ್ನು ಹಬ್ಬಿಸುತ್ತೀರಿ. ನಾನು ಜಗಳಗಂಟಿ, ಸರಿ ಇಲ್ಲ ಎಂದು ಏನೇನೋ ಪುಕಾರು ಮಾಡುತ್ತೀರಿ. ಅದೇ ಕಾರಣಕ್ಕೆ ನನಗೆ ಒಬ್ಬ ಸೂಕ್ತ ವರ ಸಿಗುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಕಂಗನಾ ಹೇಳಿದ್ದಾರೆ.
‘ಧಾಖಡ್’ ಚಿತ್ರದಲ್ಲಿ ಕಂಗನಾ, ಅಗ್ನಿ ಎಂಬ ಸ್ಪೈ ಆಗಿ ಕಾಣಿಸಿಕೊಂಡಿದ್ದು, ಮೇ 20ರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ಸುದ್ದಿ ಮಾಡುತ್ತಿದೆ. - ಏಜೆನ್ಸೀಸ್