ಕಂಗನಾ ಇಷ್ಟೆಲ್ಲಾ ಮಾಡಿದ್ದು ತಮಾಷೆಗಂತೆ!

Kangana Ranaut - Final
Published on

ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ದೊಡ್ಡ ಸುದ್ದಿಯಾಗಿದ್ದು ಕೆಲವು ವರ್ಷಗಳ ಹಿಂದೆ. ಜನಪ್ರಿಯ ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಡುವ 'ಕಾಫಿ ವಿಥ್​ ಕರಣ್​' ಕಾರ್ಯಕ್ರಮದಲ್ಲಿ ಈ ವಿಷಯವಾಗಿ ಅವರು ಮೊದಲು ಮಾತನಾಡಿದ್ದರು. ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುತ್ತಿರುವುದು ಕರಣ್​ ಎಂದು ಕಂಗನಾ ಆರೋಪಿಸಿದ್ದರು.

ಸುಶಾಂತ್​ ಸಿಂಗ್​ ಆತ್ಮಹತ್ಯೆಗೂ ಈ ನೆಪೋಟಿಸಂ ವಿಷಯವನ್ನು ತಳುಕು ಹಾಕಿದ ಕಂಗನಾ, ಅದರಿಂದಲೇ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡು ಆರೋಪಿಸಿದ್ದರು. ಈಗ ಉಲ್ಟಾ ಹೊಡೆದಿರುವ ಕಂಗನಾ, ತಾವು ಹೇಳಿದ್ದು ತಮಾಷೆಗೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಈ ಜನ ಇಷ್ಟೊಂದು ಭಯಂಕರ ಎಂದು ಗೊತ್ತಿದ್ದರೆ ನಾನು ಈ ವಿಷಯವನ್ನು ಹೇಳುತ್ತಿರಲಿಲ್ಲ. ನಾನು ಈ ವಿಷಯ ಹೇಳಿದ್ದು ತಮಾಷೆಗೇ ಹೊರತು, ಯಾರನ್ನೋ ಆಡಿಕೊಳ್ಳುವುದಕ್ಕಲ್ಲ. ಆದರೆ, ಅವರು ಈ ವಿಷಯವನ್ನು ಬಹಳ ಗಂಭೀರವಾಗಿ ಸ್ವೀಕರಿಸಿ, ನನ್ನ ವಿರುದ್ಧ ಹರಿಹಾಯ್ದರು' ಎಂದು ಹೇಳಿಕೊಂಡಿದ್ದಾರೆ ಕಂಗನಾ.

'ಮೊದಲು ಈ ವಿಷಯ ನನಗೆ ಅಷ್ಟಾಗಿ ತಟ್ಟಲಿಲ್ಲ. ಆದರೆ, ನಾನು ದೊಡ್ಡ ಸ್ಟಾರ್​ ಆದ ನಂತರ ಬಹಳ ತೊಂದರೆ ಕೊಟ್ಟರು. ಇವತ್ತು ಬಾಲಿವುಡ್​ ಹೇಗಿದೆಯೆಂದರೆ, ಎಲ್ಲರೂ ಒಂದಲ್ಲ ಒಂದು ರೀತಿ ಸಿನಿಮಾಗೆ ಸಂಬಂಧಿಸಿದ ಕುಟುಂಬದಿಂದ ಬಂದವರೇ. ಒಂದೋ ಅವರು ಸಿನಿಮಾ ಕುಟುಂಬದವರು ಅಥವಾ ಅವರಿಗೆ ಬಹಳ ಹತ್ತಿರದವರು. ಹಾಗಾಗಿ ನಾನು ಒಬ್ಬರ ಮೇಲೆ ತಮಾಷೆಗೆ ಹೇಳಿದ್ದು, ಎಲ್ಲರೂ ಅದನ್ನು ಗಂಭೀರವಾಗಿ ತೆಗೆದುಕೊಂಡರು' ಎಂದು ಕಂಗನಾ ಹೇಳಿದ್ದಾರೆ.

ಇದರಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದಾಗಿ ಹೇಳಿರುವ ಅವರು, 'ನೆಪೋಟಿಸಂ ಬಗ್ಗೆ ಮಾತನಾಡಿದ್ದಿಕ್ಕೆ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ನನ್ನ ಮೇಲೆ ಕ್ರಿಮಿನಲ್​ ಕೇಸ್​ಗಳನ್ನು ಹಾಕಿದರು. ನನ್ನ ಸಿನಿಮಾಗಳನ್ನು ಸೋಲಿಸುವುದಕ್ಕೆ ಪ್ರಯತ್ನಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬ್ರಾಂಡ್​ ಏನಿತ್ತು, ಅದನ್ನು ಹಾಳು ಮಾಡುವ ಪ್ರಯತ್ನವಾಯಿತು. ಬಹುಶಃ ಸುಶಾಂತ್​ ಅಂತ್ಯಕ್ಕೂ ಇದೇ ಕಾರಣವಿರಬಹುದು. ಏಕೆಂದರೆ, ಸುಶಾಂತ್​ ನನಗೆ ಸಪೋರ್ಟ್​ ಮಾಡುತ್ತಿದ್ದರು ಮತ್ತು ಇದರಿಂದ ಅವರಿಗೂ ಸಮಸ್ಯೆಯಾಯಿತು' ಎಂದಿದ್ದಾರೆ ಕಂಗನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net