

ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತಿರುವ ಕಂಗನಾ ರಣಾವತ್ಗೆ ಇದೀಗ ಸಂಕಷ್ಟ ಎದುರಾಗಿದೆ. ಸೋಮವಾರ ಸಂಜೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಕಂಗನಾ ಅವರ ಕಚೇರಿಗೆ ಭೇಟಿ ನೀಡಿದ್ದು, ಆ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್ ಮಾಡಿಕೊಂಡಿದ್ದಾರೆ.
ಬಾಂದರಾದ ಪಾಲಿ ಹಿಲ್ನಲ್ಲಿ ಕಂಗನಾ ಒಂದು ಹೊಸ ಆಫೀಸ್ ಶುರು ಮಾಡಿದ್ದಾರೆ. ಆ ಆಫೀಸ್ನ ಇಂಟೀರಿಯರ್ಗಾಗಿಯೇ ಲಕ್ಷಲಕ್ಷ ಖರ್ಚು ಮಾಡಿದ್ದಾಗಿ ಕಂಗನಾ ಕೆಲವು ತಿಂಗಳುಗಳು ಹೇಳಿದ್ದರು. ಈಗ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಆ ಕಚೇರಿಗೆ ಭೇಟಿ ಕೊಟ್ಟು, ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅದನ್ನು ಅತಿಕ್ರಮವಾಗಿ ನಿರ್ಮಿಸಲಾಗಿದೆ ಎಂದು ನೋಟೀಸ್ ಅಂಟಿಸಿ ಬಂದಿದ್ದಾರೆ.
ಈ ನೋಟೀಸ್ನಲ್ಲಿ ಹೇಗೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿದೆ. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್ಗೆ ಕಂಗನಾ ಅವರು 24 ಗಂಟೆಗಳಲ್ಲಿ ಉತ್ತರ ಕೊಡೆದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್ನಲ್ಲಿ ಹೇಳಲಾಗಿದೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಟ್ವಿಟರ್ ಅಕೌಂಟ್ ಮೂಲಕ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮುಂಬೈ ಆಫೀಸ್ ತೋರಿಸಿರುವ ಅವರು, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
'ಇದು ನನ್ನ 'ಮಣಿಕರ್ಣಿಕಾ' ಆಫೀಸ್. ಈ ಆಫೀಸ್ ಸ್ಥಾಪಿಸುವುದಕ್ಕೆ ನನ್ನ 15 ವರ್ಷಗಳ ಪರಿಶ್ರಮವಿದೆ. ನನ್ನದೇ ಸ್ವಂತದ್ದೊಂದು ಆಫೀಸ್ ಮಾಡಿಕೊಳ್ಳಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.
ತಮ್ಮ ಬಳಿ ಎಲ್ಲದಕ್ಕೂ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅನುಮತಿ ಇದೆ ಎಂದಿರುವ ಅವರು, 'ನಾನು ಯಾವುದೇ ಅತಿಕ್ರಮ ನಿರ್ಮಾಣ ಮಾಡಿಲ್ಲ. ಪಾಲಿಕೆಯ ಅನುಮತಿ ಪಡೆದೇ ಕಚೇರಿ ನಿರ್ಮಿಸಿದ್ದೇನೆ. ಆದರೂ ಇಂದು ಅವರು ನನ್ನ ಕಚೇರಿಗೆ ರೇಡ್ ಮಾಡಿದ್ದಾರೆ. ನಾಳೆ ನನ್ನ ಕನಸಿನ ಕಚೇರಿ ಒಡೆದರೂ ಆಶ್ಚರ್ಯವಿಲ್ಲ' ಎಂದು ಭೀತಿ ವ್ಯಕ್ತಪಡಿಸಿದ್ದಾರೆ ಕಂಗನಾ.