ನನಗೂ ಇಂಜೆಕ್ಷನ್ ಕೊಡುತ್ತಿದ್ದರು ... ಮಾಹಿತಿ ಬಿಚ್ಚಿಟ್ಟ ಕಂಗನಾ

Kangana-Ranaut-1-Final (1)
Published on

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸುಶಾಂತ್‍ಗೆ ಡ್ರಗ್ಸ್ ಸೇವಿಸುವ ಹವ್ಯಾಸವಿತ್ತು ಎಂದು ಇತ್ತೀಚೆಗಷ್ಟೇ ಗೆಳತಿ ರಿಯಾ ಹೇಳಿಕೊಂಡಿದ್ದರು. ಆದರೆ, ಅದು ಅಪ್ಪಟ ಸುಳ್ಳು ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಸುಶಾಂತ್‍ಗೆ ಅರಿವಿಲ್ಲದೆಯೇ ಡ್ರಗ್ಸ್ ಕೊಡುವ ಸಾಧ್ಯತೆ ಇದ್ದಿರಬಹುದು ಎಂದು ರಿಪಬ್ಲಿಕ್ ಟಿವಿಗೆ ನೀಡಿರುವ ಒಂದು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತನಗೂ ಈ ಹಿಂದೆ ಇಂಜೆಕ್ಷನ್ ಕೊಡುತ್ತಿದ್ದರು ಎಂಬ ಶಾಕಿಂಗ್ ಮಾಹಿತಿಯನ್ನು ಅವರು ಹೊರಗೆಡವಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, `ನಾನು ಮನಾಲಿ ಬಿಟ್ಟು ಮುಂಬೈಗೆ ಬಂದಾಗ 16 ವರ್ಷ ವಯಸ್ಸಾಗಿತ್ತು. ಆ ಸಂದರ್ಭದಲ್ಲಿ ಪೋಷಕ ನಟರೊಬ್ಬರ ಪರಿಚಯವಾಯಿತು. ನನಗೆ ಚಿತ್ರಗಳಲ್ಲಿ ಅವಕಾಶ ಕೊಡಿಸುವುದಾಗಿ ಆಸೆ ತೋರಿಸಿದ ಅವರು, ನನ್ನನನ್ನು ಪಾರ್ಟಿಗಳಿಗೆ ಡಿನ್ನರ್‍ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಕ್ರಮೇಣ ಅವರು ಸ್ವಯಂಘೋಷಿತ ಮಾರ್ಗದರ್ಶಿಯಾಗಿಬಿಟ್ಟರು' ಎಂದು ನಟ ಯಾರ ಹೆಸರನ್ನು ಹೇಳದೆಯೇ ತಮಗಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ.

`ಆ ಸಂದರ್ಭದಲ್ಲಿ ನಾನು ಆಂಟಿ ಒಬ್ಬರ ಜತೆಗೆ ಒಂದು ಫ್ಲಾಟ್‍ನಲ್ಲಿ ವಾಸವಿದ್ದೆ. ಕ್ರಮೇಣ ಆ ಮನುಷ್ಯ ನನ್ನ ಮನೆಗೆ ಬಂದರು. ಆಂಟಿ ಜತೆಗೆ ಸ್ನೇಹ ಬೆಳೆಸಿದರು. ನನ್ನನ್ನು ಕೆಲವು ದೊಡ್ಡದೊಡ್ಡ ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ದುಬೈ ಸೇರಿದಂತೆ ಬೇರೆಬೇರೆ ದೇಶಗಳ ಶ್ರೀಮಂತರು, ಉದ್ಯಮಿಗಳು ಬರುತ್ತಿದ್ದರು. ಅವರೆಲ್ಲಾ ನನ್ನ ನಂಬರ್ ಕೇಳುತ್ತಿದ್ದರು. ಎಲ್ಲಿ ನನ್ನನ್ನು ದುಬೈನವರಿಗೆ ಮಾರಿಬಿಡುತ್ತಾರೋ ಎಂಬ ಭಯ ನನ್ನನ್ನು ಕಾಡುತಿತ್ತು' ಎಂದು ಕಂಗನಾ ಹೇಳಿದ್ದಾರೆ.

ಈ ಸಂದರ್ಭದಲ್ಲಿ `ಗ್ಯಾಂಗ್‍ಸ್ಟರ್' ಚಿತ್ರದಲ್ಲಿ ನಟಿಸುವ ಅವಕಾಶ ಕಂಗನಾಗೆ ಸಿಕ್ಕಿತಂತೆ. ಇದರಿಂದ ಆ ಪೋಷಕ ನಟನಿಗೆ ಬಹಳ ಬೇಸರವಾಗಿತ್ತಂತೆ. `ಇಷ್ಟು ಬೇಗ ನನಗೆ ಬ್ರೇಕ್ ಸಿಕ್ಕಿಬಿಟ್ಟಿತು ಎಂದು ಅವರಿಗೆ ಸಿಟ್ಟು ಬಂದಿತ್ತು. ಕ್ರಮೇಣ ನನ್ನನ್ನು ಹೊಡೆಯತೊಡಗಿದರು. ಆಂಟಿಯನ್ನು ಮನೆಯಿಂದ ಹೊರಗೆ ಹಾಕಿ ನನ್ನನ್ನು ಹೌಸ್ ಅರೆಸ್ಟ್ ಮಾಡಿದ್ದರು. ನನಗೆ ಇಂಜಕ್ಷನ್‍ಗಳನ್ನು ಕೊಡುತ್ತಿದ್ದರು. ಇದರಿಂದ ನಾನು ಶೂಟಿಂಗ್‍ಗೆ ಹೋಗದಂತೆ ಮಾಡುತ್ತಿದ್ದರು. ನಾನು ಈ ವಿಷಯವನ್ನು ನಿರ್ದೇಶಕ ಅನುರಾಗ್ ಬಸು ಅವರಿಗೆ ಹೇಳಿದೆ. ಅವರನ್ನು ನನ್ನನ್ನು ಕಾಪಾಡಿದರು. ರಾತ್ರಿ ಹೊತ್ತು ನನ್ನನ್ನು ಆಫೀಸ್‍ನಲ್ಲಿ ಇಟ್ಟುಕೊಳ್ಳುತ್ತಿದ್ದರು. ಅವರು ನನ್ನ ರಕ್ಷಣೆಗೆಂದು ಇರುತ್ತಿದ್ದರು' ಎಂದು ಕಂಗನಾ ಹೇಳಿದ್ದಾರೆ.

ಆ ನಂತರ ಆ ಫ್ಲಾಟ್ ಬಿಟ್ಟು, ಇನ್ನೊಂದು ಫ್ಲಾಟ್‍ಗೆ ಹೋದರೂ ಆ ವ್ಯಕ್ತಿ ಡೂಪ್ಲಿಕೇಟ್ ಕೀ ಮಾಡಿಸಿಕೊಂಡು ಮನೆಯೊಳಗೆ ನುಗ್ಗುತ್ತಿದ್ದರಂತೆ. `ಡೂಪ್ಲಿಕೇಟ್ ಕೀ ಮಾಡಿಸಿಕೊಂಡು ಮನೆಗೆ ನುಗ್ಗುತ್ತಿದ್ದರು. ಎಷ್ಟೋ ಬಾರಿ ನಾನು ಮನೆಯಲ್ಲಿ ಇಲ್ಲದಿದ್ದಾಗ, ಬಂದು ಕೂತಿರುತ್ತಿದ್ದರು. ಇಷ್ಟೆಲ್ಲಾ ಕಾಟದಿಂದ ನಾನು ಆತ್ಮಹತ್ಯೆಗೆ ಮಾಡಿಕೊಂಡುಬಿಡುತ್ತಿದ್ದೆನೇನೋ. ಆದರೆ, ಯೋಗಾ ಮತ್ತು ನನ್ನ ಗುರುಗಳ ಆಶೀರ್ವಾದದಿಂದ ಇದೆಲ್ಲದರಿಂದ ಯಶಸ್ವಿಯಾಗಿ ಹೊರಬಂದೆ' ಎಂದು ಕಂಗನಾಆ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net