ನನ್ನ ಕಂಡರೆ ಯಾರಿಗೂ ಆಗಲ್ಲ ... ಕಂಗನಾ ಹೀಗೆ ಹೇಳಿದ್ದು ಯಾಕೆ?

Kangana Ranaut - Final
Published on

ಮುಂಬೈ: ಬಾಲಿವುಡ್‌ನ ಅತ್ಯಂತ ವಿವಾದಾತ್ಮಕ ನಟಿ ಎಂದು ಹೆಸರು ಮಾಡಿದವರು ಕಂಗನಾ ರಣಾವತ್. ಕಂಗನಾ ಕಂಡರೆ ಬಹಳಷ್ಟು ಜನರಿಗೆ ಆಗುವುದಿಲ್ಲ ಎಂಬುದು ಸುಳ್ಳೇನಲ್ಲ. ಬಾಲಿವುಡ್​ನಲ್ಲೇ ಕಂಗನಾ ಅವರ ವಿರೋಧಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಇನ್ನು ಸೋಷಿಯಲ್​ ಮೀಡಿಯಾದಲ್ಲಿ ಕಂಗನಾ ಅವರನ್ನು ಕಂಡರೆ ಹಲವರಿಗೆ ಆಗುವುದಿಲ್ಲ.

ಇನ್ನು ಕಂಗನಾ ಇಷ್ಟೆಲ್ಲಾ ಜನರ ಜತೆಗೆ ಜಗಳ ಆಡುತ್ತಿರುವುದು ಮತ್ತು ದ್ವೇಷ ಕಟ್ಟಿಕೊಳ್ಳುತ್ತಿರುವುದು ರಾಜಕೀಯ ಉದ್ದೇಶಗಳಿಗಾಗಿ ಎಂದು ಹೇಳಲಾಗುತ್ತಿದೆ. ಆದರೆ, ಕಂಗನಾ ಮಾತ್ರ ತಮ್ಮನ್ನು ಯಾವುದೇ ರಾಜಕೀಯ ಪಕ್ಷವೂ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಚಿತ್ರರಂಗದ ಬಗ್ಗೆ ನಾನು ಪ್ರಾಮಾಣಿಕವಾಗಿ ಮಾತನಾಡುತ್ತೀನಿ ಎಂಬ ಕಾರಣಕ್ಕೆ ಹಲವರು ನನ್ನನ್ನು ದ್ವೇಷಿಸುತ್ತಾರೆ. ಹಿಂದುಗಳಿಗೆ ಮೀಸಲಾತಿ ಬೇಡ ಎಂದಿದ್ದಿಕ್ಕೆ ಅವರಿಗೆ ನನ್ನ ಕಂಡರೆ ಆಗುವುದಿಲ್ಲ. ‘ಮಣಿಕರ್ಣಿಕಾ’ ಬಿಡುಗಡೆಯ ಸಂಬಂಧ ಕರ್ಣಿ ಸೇನಾ ವಿರುದ್ಧ ಹೋರಾಡಿದ್ದಕ್ಕೆ, ಅವರು ನನಗೆ ಧಮ್ಕಿ ಹಾಕಿದ್ದಾರೆ. ಇಸ್ಲಾಮ್ ಧರ್ಮದ ವಿರುದ್ಧ ಮಾತನಾಡುತ್ತೀನಿ ಎಂಬ ಕಾರಣಕ್ಕೆ ಮುಸ್ಲಿಮರು ದ್ವೇಷಿಸುತ್ತಾರೆ. ಈಗ ರೈತರ ವಿರುದ್ಧ ಮಾತನಾಡಿದ್ದಿಕ್ಕೆ ಸಿಖ್ಖರು ಸಹ ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗೆ ಎಲ್ಲರನ್ನೂ ದೂರ ಮಾಡಿಕೊಂಡಿರುವುದರಿಂದ, ಯಾವುದೇ ರಾಜಕೀಯ ಪಕ್ಷದಲ್ಲೂ ನನಗೆ ಎಂಟ್ರಿ ಸಿಗುವುದಿಲ್ಲ ಎಂದು ನನ್ನ ಹಿತೈಷಿಗಳು ಹೇಳುತ್ತಾರೆ. ಆದರೂ ನಾನು ಇಷ್ಟೆಲ್ಲಾ ಯಾಕೆ ಮಾಡುತ್ತೀನಿ, ಯಾಕೆ ಮಾತನಾಡುತ್ತೀನಿ ಎಂದು ಕೆಲವರಿಗೆ ಅನಿಸಿರಬಹುದು. ನನ್ನ ಮಾತುಗಳು ಜಗತ್ತಿಗೆ ಇಷ್ಟವಾಗದಿರಬಹುದು. ಆದರೆ, ನನ್ನ ಆತ್ಮಸಾಕ್ಷಿಗೆ ಇಷ್ಟವಾಗುತ್ತದೆ. ಹಾಗಾಗಿ ನಾನು ಪ್ರಾಮಾಣಿಕವಾಗಿ ಮಾತನಾಡುವುದನ್ನು ಮುಂದುವರೆಸುತ್ತೇನೆ’ ಎನ್ನುತ್ತಾರೆ ಕಂಗನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net